ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜಿಗೆ ರಜೆ ಘೋಷಣೆ
– ಕರಾವಳಿಯ ಅನೇಕ ಕಡೆ ಭಾರೀ ಅನಾಹುತ
– ಧರ್ಮಸ್ಥಳ, ಕುಕ್ಕೆಯಲ್ಲಿ ಅನೇಕ ಕಡೆ ನೀರು ನೀರು
– ಕಡಲು ಕೊರೆತ: ಹಲವೆಡೆ ರಸ್ತೆ, ಸೇತುವೆ ಸಂಚಾರ ಬಂದ್
NAMMUR EXPRESS NEWS
ಉಡುಪಿ/ ಮಂಗಳೂರು: ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ನದಿ ಹಳ್ಳ ಕೊಳ್ಳಗಳಲ್ಲಿ ಹೆಚ್ಚಿನ ನೀರು ಹರಿವು ಹಾಗೂ ಹೆಚ್ಚು ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ವರದಿ ಇರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಆದೇಶಿಸಿದ್ದಾರೆ. ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದೆ. ಬೈಂದೂರು ತಾಲೂಕಿನ ವ್ಯಾಪ್ತಿಯ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಸೋಮವಾರ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.
ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಭಾರಿ ಗಾಳಿ ಮಳೆ!
ಕಾರ್ಕಳ ತಾಲೂಕಿನಲ್ಲಿ ಭಾರಿ ಗಾಳಿ ಮಳೆ ಮುಂದುವರೆದಿದೆ. ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತಿದ್ದು ಸ್ವರ್ಣ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತಿದೆ. ಮುಂಡ್ಲಿ ಅಣೆಕಟ್ಟಿನ ಎಲ್ಲಾ ಗೇಟ್ ಗಳನ್ನು ತೆರೆಯಲಾಗಿದ್ದು ಮುಂಡ್ಲಿ ಅಣೆಕಟ್ಟಿನ ಸುತ್ತಲೂ ಇರುವ ಗದ್ದೆಗಳಿಗೆ ತೋಟಗಳಿಗೆ ನೀರು ನುಗ್ಗಿದೆ. ಕಾರ್ಕಳ ತಾಲೂಕಿನ ಕೆರುವಾಶೆ, ಎಣ್ಣೆಹೊಳೆ ಹೆರ್ಮುಂಡೆಯ ಸ್ವರ್ಣ ನದಿಯ ತಟದ ಪ್ರದೇಶಗಳಲ್ಲಿ ನೀರು ನುಗ್ಗಿದೆ. ಹೆಬ್ರಿ ಭಾಗದಲ್ಲಿ ಹರಿಯುವ ಸೀತಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ
ಮರಗಳು ಬಿದ್ದು 2 ಮನೆಗಳಿಗೆ ಹಾನಿ: ಮಕ್ಕಳಿಬ್ಬರು ಅಪಾಯದಿಂದ ಪಾರು
ಉಪ್ಪಿನಂಗಡಿಯ ಕಜೆಕ್ಕಾರು ಅಂಬೇಡ್ಕರ್ ಕಾಲನಿ ಯಲ್ಲಿ ಶನಿವಾರ ಸಂಜೆ ಭಾರೀ ಗಾತ್ರದ ಮರ ಉರುಳಿ ಬಿದ್ದು 2 ಮನೆಗಳು ಧಂಸಗೊಂಡಿವೆ. ಮನೆಯೊಳಗಿದ್ದ ಇಬ್ಬರು ಮಕ್ಕಳು ಪಾರಾಗಿದ್ದಾರೆ.ಪರಿಸರದಲ್ಲಿ ಸಂಜೆ ಭಾರೀ ಗಾಳಿ ಬೀಸಿದ್ದು ಬೃಹತ್ ಹಲಸಿನ ಮರ ಮತ್ತು ತೆಂಗಿನ ಮರವು ಅಕ್ಕಪಕ್ಕದಲ್ಲಿರುವ ಸುಂದರಿ ಮತ್ತು ಸೇಸಮ್ಮ ಅವರ ಮನೆಯ ಮೇಲೆ ಉರುಳಿದವು. ಒಬ್ಬಂಟಿಯಾಗಿದ್ದ ಸೇಸಮ್ಮ ಗಾಳಿಯ ರಭಸಕ್ಕೆ ಹೆದರಿ ಪಕ್ಕದ ಮನೆಗೆ ತೆರಳಿದ್ದರು. ಸುಂದರಿಯವರ ಮನೆಯಲ್ಲಿ ಮೊಮಕ್ಕಳಾದ ಅಕ್ಷತಾ (11), ರಕ್ಷಿತಾ (10) ಇದ್ದರು. ಸುಂದರಿ ಹಾಗೂ ಸೊಸೆ ಮೀನಾಕ್ಷಿ ಮನೆಯ ಹೊರಗೆ ಇದ್ದ ಸಂದರ್ಭ ಮರಗಳು ಉರುಳಿವೆ. ಮನೆಯ ಮೇಲ್ಟಾವಣಿ, ಗೋಡೆ ಧ್ವಂಸಗೊಂಡಿದೆ. ಎರಡೂ ಮನೆಗಳ ಸಂಪೂರ್ಣ ಹಾನಿಗೀಡಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಸುಳ್ಯದಲ್ಲಿ ಗುಡ್ಡ ಕುಸಿತ: ವಾಹನ ಸಂಚಾರ ಅಸ್ತವ್ಯಸ್ತ
ಸುಳ್ಯ-ಕಲ್ಲಪ್ಪಳ್ಳಿ-ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಪ್ರದೇಶವಾಗಿರುವ ಬಾಟೋಳಿಯಲ್ಲಿ ಮತ್ತೆ ಶನಿವಾರ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತವಾಗಿದೆ.
19ರಂದು ಭಾರೀ ಪ್ರಮಾಣದಲ್ಲಿ ಮಣ್ಣು ಮರ ಸಮೇತ ಗುಡ್ಡಜರಿದು ಬಿದ್ದು ನಡೆದು ಹೋಗಲೂ ಸಾಧ್ಯವಿಲ್ಲದ ರೀತಿಯಲ್ಲಿ ರಸ್ತೆ ಮುಚ್ಚಿಹೋಗಿತ್ತು. ಅದರ ತೆರವು ಕಾರ್ಯ ಶುಕ್ರವಾರವಷ್ಟೇ ಪೂರ್ಣಗೊಂಡು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಂದು ಅದೇ ಸ್ಥಳದಲ್ಲಿ ಮತ್ತೆ ಕುಸಿತವಾಗಿದೆ.
ಕುಕ್ಕೆ -ಕುಮಾರಧಾರಾ ಸ್ನಾನಘಟ್ಟ ಮುಳುಗಡೆ
ಸುಬ್ರಹ್ಮಣ್ಯ ಪರಿಸರ ಹಾಗೂ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಸ್ನಾನಘಟ್ಟ ಮತ್ತು ಕಿಂಡಿ ಅಣೆಕಟ್ಟು ಶನಿವಾರ ಮುಳುಗಡೆಗೊಂಡಿವೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಭಕ್ತರಿಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ನದಿ ದಡದಲ್ಲಿ ಸಿಬಂದಿ ನಿಯೋಜನೆ ಮಾಡಲಾಗಿದೆ.
ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ
ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟಗಣನೀಯವಾಗಿ ಏರಿಕೆಯಾಗಿದೆ. ನೇತ್ರಾವತಿಯ ಅಪಾಯಕಾರಿ ಮಟ್ಟ 8 ಮೀ. ಆಗಿದ್ದು, 8.5 ಮೀ.ಗೆ ಏರಿದರೆ ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತದೆ. ಈ ವರ್ಷ ಇದೇ ಮೊದಲ ಬಾರಿ ಇಷ್ಟು ಏರಿಕೆ ಕಂಡಿದೆ. ಧರ್ಮಸ್ಥಳಕ್ಕೆ ಬರುವ ಭಕ್ತರು ಎಚ್ಚರಿಕೆ ವಹಿಸಲು ಮನವಿ ಮಾಡಲಾಗಿದೆ.
ಕಾಪು, ಕುಂದಾಪುರ, ಮಣಿಪಾಲದಲ್ಲಿ ಮಳೆ
ಕಾಪು, ಕುಂದಾಪುರ, ಹೆಜಮಾಡಿ, ಪಡುಬಿದ್ರಿ, ಉಚ್ಚಿಲ, ಕಾಪು, ಕಟಪಾಡಿ, ಉದ್ಯಾವರ, ಕಾರ್ಕಳ, ಹೆಬ್ರಿ, ಉಡುಪಿ, ಮಣಿಪಾಲ, ಬ್ರಹ್ಮಾವರ, ಸಾಲಿಗ್ರಾಮ, ತೆಕ್ಕಟ್ಟೆ ಕೋಟ, ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರ ಮಳೆಯಾಗಿದೆ. ಹತ್ತಾರು ಮನೆಗಳು ಹಾನಿಯಾಗಿವೆ. ಸೇತುವೆ ಮುಳುಗಿ ಹೋಗಿವೆ.
ಕಾಪು ಕಟಪಾಡಿ ಹೆದ್ದಾರಿ ಬಂದ್!
ಕಾಪುವಿನ ಕಟಪಾಡಿ ಶಿರ್ವ ರಾಜ್ಯ ಹೆದ್ದಾರಿಯಲ್ಲಿ ವಾರದ ಸಂತೆ ನಡೆಯುವ ಮಾರುಕಟ್ಟೆ ಬಳಿ ಖಾಸಗಿಯವರಿಗೆ ಸೇರಿದ ಮಾವಿನ ಮರವೊಂದು ರಸ್ತೆಗೆ ಉರುಳಿ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ. –
ಬೈಕ್ಗಳು ಜಖಂಗೊಂಡಿದ್ದು ಓರ್ವ ಸವಾರ ಉಡುಪಿ ಚಿಟ್ಟಾಡಿ ಡಯನಾ ಟಾಕೀಸ್ ಬಳಿಯ ಸೆಲ್ವ ಕುಮಾರ್ (39) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಳಿಗೆ ಶಾಲೆಯ ಮೇಲ್ಛಾವಣಿ ಹಾರಿ ಹೋಯ್ತು!
ತೆಕ್ಕಟ್ಟೆಯಲ್ಲಿ ಬೀಸಿದ ಗಾಳಿಗೆ ಬೀಜಾಡಿ ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಯಾವಣಿ ಹೆಂಚುಗಳು ಹಾರಿಹೋಗಿದ್ದು, ಮಳೆ ನೀರು ಶಾಲೆ ಕೋಣೆಯೊಳಗೆ ಸುರಿಯುತ್ತಿದೆ. ಕಾಳಾವರ ಶೌರ್ಯ ಮತ್ತು ವಿಪತ್ತು ನಿರ್ವಹಣಾ ತಂಡದ ಶೌರ್ಯ ತಾಲೂಕು ಮಾಸ್ಟರ್ ಘಟಕದ ಪ್ರತಿನಿಧಿ ರಾಜಶೇಖರ ನೇತೃತ್ವದಲ್ಲಿ ತಂಡದ ಸದಸ್ಯರು ಹೆಂಚು ಹಾಕುವ ಮೂಲಕ ಕಾರಚರಣೆ ನಡೆಸಿದರು.
ಕೋಟೇಶ್ವರ ಕೆಪಿಎಸ್ ಶಾಲೆ ಮೇಲೆ ಬಿದ್ದ ಮರ
ಮೇಲೆ ಶನಿವಾರ ಮಧ್ಯಾಹ್ನ ಬಿಸಿದ ಭಾರೀ ಗಾಳಿಗೆ ಮರವೊಂದು ಬಿದ್ದು ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಮರ ಬೀಳುವ ಸಮಯದಲ್ಲಿ ಶಾಲೆಯ ಮಕ್ಕಳು ಮಧ್ಯಾಹ್ನದ ಬಿಸಿ ಊಟವನ್ನು ಮುಗಿಸಿಕೊಡು ತೆರಳಿದ್ದರು. ಈ ಸಂದರ್ಭ ಎಲ್ಲ ಮಕ್ಕಳು ಕೊಠಡಿ ಸೇರಿದ ನಂತರ ಮರ ಬಿದ್ದಿರುವುದರಿಂದ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ.
ಪಡುಬಿದ್ರೆ ಕಡಲು ಕೊರೆತ!
ಪಡುಬಿದ್ರಿಯ ಕಡಲತಡಿಯಲ್ಲಿ ಮತ್ತೆ ಕಡಲ್ಕೊರೆತ ಉಂಟಾಗುವ ಸಾಧ್ಯತೆ ಇದೆ. ಬೀಚ್ನಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಾದ ರಂಗವೇದಿಕೆ, ಇಂಟರ್ಲಾಕ್, ಟೈಲ್ಸ್ ಗಳು, ಶೌಚಾಲಯಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023