ಗಿಫ್ಟ್ ತಂದಿದ್ದಕ್ಕೆ ಮದುವೆ ನಿಂತು ಹೋಯ್ತು!
– ಕಡಬ: ಮಾವನ ಎಡವಟ್ಟಿನಿಂದ ನಿಶ್ಚಿತಾರ್ಥ ರದ್ದು!
– ಉಡುಪಿ: ನೀರಿಗೆ ಬಿದ್ದ ಮೀನುಗಾರ ನಾಪತ್ತೆ
– ಮಂಗಳೂರು: ಬಾಲಕಿ ಮೇಲೆ ರೇಪ್: ಅರೆಸ್ಟ್
– ಭಟ್ಕಳ: ಸರ್ಕಾರಿ ಅಕ್ಕಿಗೆ ಕನ್ನ ಹಾಕಿದರ ಬಂಧನ
– ಕಾರ್ಕಳ :ಅಕಸ್ಮಾತ್ ಕೆರೆಗೆ ಬಿದ್ದು ಸಾವು
– ಬಂಟ್ವಾಳ:ಅಂಬ್ಯುಲೆನ್ಸ್ ಪಲ್ಟಿ: ಚಾಲಕ ಮೃತ್ಯು
NAMMUR EXPRESS NEWS
ನಿಶ್ಚಿತಾರ್ಥ ದಿನ ವರನ ಕಡೆಯವರು ತಂದ ಗಿಫ್ಟ್ ನೋಡಿ, ಈ ಸಂಬಂಧ ನಮಗೆ ಬೇಡ ಎಂದು ವಧುವಿನ ಕಡೆಯವರು ಗಲಾಟೆ ಎಬ್ಬಿಸಿದ್ದಾರೆ. ಮಡಿಕೇರಿ ಭಾಗದಿಂದ ಕಡಬ ತಾಲೂಕಿನ ಸುಂಕದಕಟ್ಟೆ ಎಂಬ ಕುಗ್ರಾಮಕ್ಕೆ ವರನ ಕಡೆಯವರು ಮದುವೆ ನಿಶ್ಚಿತಾರ್ಥಕ್ಕೆಂದು ಬಂದಿದ್ದರು. ಇತ್ತ ವಧುವಿನ ಮನೆಯಲ್ಲಿ ಅತಿಥಿಗಳಿಗೆ ಭಾರೀ ಭೋಜನ ತಯಾರಾಗುತ್ತಿತ್ತು. ವರನ ಕಡೆಯವರು ವಧುವಿಗೆಂದು ಚಾಕಲೇಟ್, ಸಿಹಿತಿನಿಸು, ಡ್ರೆಸ್, ಚಿನ್ನಾಭರಣದ ಜೊತೆ ಅದ್ಧೂರಿಯಾಗಿ ಬಂದಿದ್ದರು.ನಿಶ್ಚಿತಾರ್ಥ ನಡೆಯಿತು, ಮದುವೆ ಜನವರಿ ತಿಂಗಳಲ್ಲಿ ಎಂಬುವುದು ಅಲ್ಲೇ ನಿಗದಿಯಾಯಿತು. ಆಗ ವರನ ಕಡೆಯವರು ತಮ್ಮ ಭಾವೀ ಸೊಸೆಗೆ ಪ್ರೀತಿಯಿಂದ ತಂದಿದ್ದ ಚಾಕಲೇಟ್ಸ್, ಉಡುಪು, ಚಪ್ಪಲಿ, ಗಿಫ್ಟ್ ಬಾಕ್ಸ್’ಗಳನ್ನು ಕೊಡಲು ಮುಂದಾದರು. ಹುಡುಗಿಯ ಮಾವ (ತಾಯಿಯ ಸಹೋದರನ) ಗಿಫ್ಟ್ ಕೊಡಬಾರದು ಎಂದು ಮಾಡಿದ ರಂಪಾಟ, ಚೀರಾಟ ನೋಡಿ ಹುಡುಗನ ಕುಟುಂಬಸ್ಥರು ಈ ಸಂಬಂಧ ನಮಗೆ ಬೇಡ ಎಂದು ಹಿಂತಿರುಗಿ ಹೋಗಿದ್ದಾರೆ. ಹುಡುಗಿಯ ಮಾವ ಮಾಡಿದ ಅವಾಂತರದಿಂದ ಮದುವೆ ನಿಶ್ಚಿತಾರ್ಥ ಕಾರ್ಯ ನಿಂತುಹೋಗಿದೆ.
ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ!
ಮೀನುಗಾರಿಕೆ ನಡೆಸುವ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆಯಾದ ಘಟನೆ ಮಲ್ಪೆಯಲ್ಲಿ ನಡೆಯಲಿದೆ. ಮೀನುಗಾರ ಗೋಪಾಲ ಶನಿಯಾರ್ ನಾಯ್ಕ (35) ನಾಪತ್ತೆಯಾದವರು. ಆ. 11ರಂದು ಅವರು ಇತರ ಮೀನುಗಾರರ ಜತೆ ಮಲ್ಪೆ ಬಂದರಿನಿಂದ ಬೋಟಿನಲ್ಲಿ ತೆರಳಿದ್ದು, ಆ. 13ರಂದು ಮಧ್ಯಾಹ್ನದ ವೇಳೆ ಮೀನುಗಾರಿಕೆ ನಡೆಸುತ್ತಿರುವಾಗ ಆಕಸ್ಮಿಕವಾಗಿ ಬೋಟಿನಿಂದ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.
ವಿಕಲಚೇತನ ಬಾಲಕಿಯ ಮೇಲೆ ರೇಪ್: ಅರೆಸ್ಟ್!
ಖಾಸಗಿ ಆಸ್ಪತ್ರೆಯಲ್ಲಿ ವಿಕಲಚೇತನ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸುತ್ತಿದ್ದ ಮುಂಬೈ ಮೂಲದ ವ್ಯಕ್ತಿ ಹಾಗೂ ಸಂತ್ರಸ್ತ ಬಾಲಕಿಯ ಮೇಲಿನ ಹಲ್ಲೆಗೆ ಸಹಕರಿಸಿದ ಮಹಿಳೆಯನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.. ಆರೋಪಿಗಳನ್ನು ಬಿಹಾರ ಮೂಲದ ಅಬ್ದುಲ್ ಹಲೀಂ (37) ಮತ್ತು ಕುಲಶೇಖರ ನಿವಾಸಿ ಶಮೀನಾ ಬಾನು (22) ಎಂದು ಗುರುತಿಸಲಾಗಿದೆ. ದೂರುದಾರ ಮಹಿಳೆಯ ಕಿರಿಯ ಸಹೋದರ ಮನ್ಸೂರ್ ಅಹಮದ್ ಬಾಬಾ ಶೇಖಾ ಮತ್ತು ಆರೋಪಿ ಅಬ್ದುಲ್ ಹಲೀಂ ಸ್ನೇಹಿತರು. ಆಗಸ್ಟ್ 10 ರಂದು ಕಾಸರಗೋಡಿನಿಂದ ಬೈಕ್ನಲ್ಲಿ ಹಿಂತಿರುಗುತ್ತಿದ್ದಾಗ ಅವರ ಬೈಕ್ ಅಪಘಾತಕ್ಕೀಡಾಗಿದ್ದು, ಹೊಸಂಗಡಿಯಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರೂ ಆಸ್ಪತ್ರೆಯ ಒಂದೇ ಕೋಣೆಯಲ್ಲಿದ್ದರು, ಅವರ ನಡುವೆ ಪರದೆ ಇತ್ತು.
ಅಪಘಾತದ ಬಗ್ಗೆ ವಿಚಾರಿಸಲು ದೂರುದಾರ ಮಹಿಳೆ ಮತ್ತು ಅವರ ಹಿರಿಯ ಮಗಳು ಮಂಜೇಶ್ವರ ಠಾಣೆಗೆ ತೆರಳಿದ್ದರು. ದೂರುದಾರ ಮಹಿಳೆ ತನ್ನ ಕಿರಿಯ ಸಹೋದರನ ಪತ್ನಿ ಶಮೀನಾ ಬಾನು ಎಂಬಾಕೆಯೊಂದಿಗೆ ವಿಕಲಚೇತನ ಕಿರಿಯ ಮಗಳನ್ನು ಬಿಟ್ಟು ಹೋಗಿದ್ದಾಳೆ. ಆರೋಪಿ ಶಮೀನಾ ಬಾನು ಆಸ್ಪತ್ರೆಯಲ್ಲಿ ಆರೋಪಿ ಅಬ್ದುಲ್ ಹಲೀಂ ಜೊತೆ ಅನೈತಿಕವಾಗಿ ವರ್ತಿಸುತ್ತಿರುವುದನ್ನು ಅಪ್ರಾಪ್ತ ಅಂಗವಿಕಲ ಬಾಲಕಿ ನೋಡಿದ್ದಾಳೆ. ನಂತರ ಶಮೀನಾ ವಿಕಲಚೇತನ ಬಾಲಕಿಯನ್ನು ಆರೋಪಿ ಅಬ್ದುಲ್ ಹಲೀಂನ ಹಾಸಿಗೆಯ ಮೇಲೆ ಕೂರಿಸಿದ್ದಳು. ಸಂತ್ರಸ್ತ ಬಾಲಕಿಯನ್ನು ಹಾಸಿಗೆಯ ಮೇಲೆ ಕೂರಿಸಿದ ಕೂಡಲೇ ಆರೋಪಿ ಅಬ್ದುಲ್ ಕಿರುಕುಳ ನೀಡಿದ್ದಾನೆ. ಹುಡುಗಿ ವಿರೋಧಿಸಿದಳು. ನಂತರ ಆರೋಪಿ ಶಮೀನಾ ಸಹಾಯದಿಂದ ಅಬ್ದುಲ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಈ ಸಂಬಂಧ ಸಂತ್ರಸ್ತ ಬಾಲಕಿಯ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗಸ್ಟ್ 16ರಂದು ಶಮೀನಾ ಬಾನು ಅವರನ್ನು ಬಂಧಿಸಲಾಗಿತ್ತು. ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಹಲೀಂನನ್ನು ಗೋವಾ ಪೊಲೀಸರು ಮಡಗಾಂವ್ನಲ್ಲಿ ಬಂಧಿಸಿದ್ದಾರೆ. ಇಬ್ಬರನ್ನೂ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅನ್ನ ಭಾಗ್ಯ ಅಕ್ಕಿ ಸಾಗಣೆ: ಮೂವರ ಬಂಧನ
ಉತ್ತರ ಕನ್ನಡ ಜಿಲ್ಲೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಸರಕಾರ ಅನ್ನ ಭಾಗ್ಯ ಯೋಜನೆ 6000 ಕೆ.ಜಿ. ಅಕ್ಕಿಯನ್ನು ಹಾಗೂ ಆರೋಪಿಗಳ ಸಹಿತ ವಶಕ್ಕೆ ಪಡೆದ್ದಿದಾರೆ.ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಗಟೆಬೈಲ್ ಮೆಂಗೋ ಫಾರ್ಮ್ ಎದುರುಗಡೆ ಇರುವ ಗೋಡನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಸರ್ಕಾರದ ಅನ್ನ ಭಾಗ್ಯ ಯೋಜನೆಯ 6000 ಕೆ.ಜಿ ಅಕ್ಕಿಯನ್ನು ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯ ಪೊಲೀಸ ಇನ್ಸೆಕ್ಟರ್ ಗೋಪಿಚಂದನ ನೇತೃತ್ವದಲ್ಲಿ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ ಆರೋಪಿಗಳ ಸಹಿತ ಸರ್ಕಾರದ ಅನ್ನಭಾಗ್ಯ ಯೋಜನೆಯ 6000 ಕೆ.ಜಿ ಅಕ್ರಮ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ನಂದಳಿಕೆ: ದೇವಸ್ಥಾನದ ಕೆರೆಗೆ ಬಿದ್ದು
ಕಾರ್ಕಳ ತಾಲೂಕು ನಂದಳಿಕೆಯಲ್ಲಿ ಆಕಸ್ಮಿಕವಾಗಿ ದೇವಸ್ಥಾನದ ಕೆರೆಗೆ ಬಿದ್ದು ಹಾನಗಲ್ ನಿವಾಸಿ ಮಂಜಪ್ಪ (30) ಮೃತಪಟ್ಟ ಘಟನೆ ನಡೆದಿದೆ. ನಂದಳಿಕೆ ಕೊಡ್ನರಬೆಟ್ಟು ಬಳಿಯಲ್ಲಿ ಹಲವು ಸಮಯದಿಂದ ಕೆಲಸ ಮಾಡಿಕೊಂಡಿದ್ದರು.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಗಿ ಇದ್ದ ಅಂಬ್ಯುಲೆನ್ಸ್ ಪಲ್ಟಿ: ಚಾಲಕ ಮೃತ್ಯು
ರೋಗಿಯೋರ್ವರನ್ನು ತುರ್ತಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಖಾಸಗಿ ಅಂಬ್ಯುಲೆನ್ಸ್ ವಾಹನವೊಂದು
ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿದ್ದು, ವಾಹನ ಚಾಲಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸಾರ ಅಂಬ್ಯುಲೆನ್ಸ್ ವಾಹನ ವಗ್ಗ ಸಮೀಪದ ಕೊಪ್ಪಳ ಅಂಚಿಕಟ್ಟೆ ಎಂಬಲ್ಲಿ ರಸ್ತೆ ಮಧ್ಯ ಪಲ್ಟಿಯಾಗಿದ್ದು, ಚಾಲಕ ಶಬೀರ್ ಗಂಭೀರವಾಗಿ ಗಾಯಗೊಂಡಿದ್ದ, ಈತನ ಸಹಿತ ವಾಹನದಲ್ಲಿದ್ದ ರೋಗಿಯನ್ನು ಬದಲಿ ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಂಬುಲೆನ್ಸ್ ಚಾಲಕ ಚಿಕಿತ್ಸೆಗೆ ಸ್ಪಂದಿಸಿದೆ ಮೃತ ಪಟ್ಟ ಬಗ್ಗೆ ಆಸ್ಪತ್ರೆಯ ಮೂಲಗಳು ಪೋಲೀಸರಿಗೆ ಮಾಹಿತಿ ನೀಡಿದೆ.