– ಚಂದ್ರಯಾನ ಯಶಸ್ಸಿಗೆ ಕುಕ್ಕೆಯಲ್ಲಿ ಸೇವೆ!
– ಸೌಜನ್ಯ ಪ್ರಕರಣ: ಮಕ್ಕಳ ಆಯೋಗ ಎಂಟ್ರಿ!
– ಬೆಳ್ತಂಗಡಿ: ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜೈಲು
– ಬಸ್ ಅಲ್ಲಿ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ
– ನಾಗರ ಪಂಚಮಿ: 7 ಲಕ್ಷದ ಹಸುಗಳ ದಾನ!
– ಮೂಡಬಿದಿರೆಯಲ್ಲಿ ಅನೈತಿಕ ಪೊಲೀಸ್ ಗಿರಿ?!
NAMMUR EXPRESS NEWS
ಧರ್ಮಸ್ಥಳ : ಧರ್ಮಸ್ಥಳ ಸೌಜನ್ಯ ಪ್ರಕರಣದ ಇದೀಗ ಮತ್ತೊಂದು ಘಟ್ಟಕ್ಕೆ ಬಂದಿದೆ. ಆ.21 ರಂದು ಸೌಜನ್ಯ ಮೃತ ಪಟ್ಟ ಸ್ಥಳ ಹಾಗೂ ಮನೆಗೆ ಮಕ್ಕಳ ರಕ್ಷಣಾ ಆಯೋಗ ಭೇಟಿ ನೀಡಿದೆ. ಈ ವೇಳೆ ಸ್ಥಳ ಪರಿಶೀಲನೆ ನಡೆಸಿ ನಂತರ ಸೌಜನ್ಯ ಕುಟುಂಬಸ್ಥರ ಬಳಿ ಈ ಪ್ರಕರಣದ ಬಗ್ಗೆ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನಗೌಡ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ಕುಟುಂಬದ ಪರವಾಗಿ ನಿಲ್ಲುವ ಭರವಸೆಯನ್ನು ಆಯೋಗ ನೀಡಿದೆ.
‘ಸೌಜನ್ಯ ಪ್ರಕರಣವನ್ನು ಕಾನೂನಾತ್ಮಕವಾಗಿ ಮುಂದುವರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು
ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಪರಿಶೀಲನೆ ಬಳಿಕ ಮನವರಿಕೆ, ಘಟನೆ ನಡೆದ ಸ್ಥಳದಲ್ಲಿ ಶಾಲಾ ಕಾಲೇಜು ಮಕ್ಕಳು ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಅನುಕೂಲಕ್ಕೆ ಆ ಜಾಗದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲು ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಗೆ ಸೂಚನೆ ನೀಡಿದ್ದೇವೆ. ಸೌಜನ್ಯ ಸಹೋದರ ಸಹೋದರಿಯರ ಹೊರಗೆ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲು ಶಿಫಾರಸ್ಸು ಮಾಡಲಾಗುವುದು’ ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗನ ಗೌಡ ಹೇಳಿದರು.
ಬೆಳ್ತಂಗಡಿ: ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜೈಲು
ಬೆಳ್ತಂಗಡಿ: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿ ಆಕೆಯ ಮಾನಭಂಗಕ್ಕೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ಮದ್ರಸಾ ಶಿಕ್ಷಕನಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಧರ್ಮಸ್ಥಳ-ಪುತ್ತೂರು ಕೆಎಸ್ಆರ್ಟಿಸಿ ಬಸ್ ಉಪ್ಪಿನಂಗಡಿ ಸಮೀಪದ ಇಳಂತಿಲ ಕಡವಿನಬಾಗಿಲು ಎಂಬಲ್ಲಿ ಹೋಗುತ್ತಿದ್ದ ವೇಳೆ ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾಗಿ ಪ್ರಕರಣ ದಾಖಲಾಗಿತ್ತು. ಈ ಆರೋಪದಡಿ ಮೂಡಿಗೆರೆ ತಾಲೂಕಿನ ಬಣ್ಣ ಮೂಲದ ಮದ್ರಸಾ ಶಾಲೆಯ ಶಿಕ್ಷಕ ಮುಹಮ್ಮದ್ ಸೈಫುಲ್ಲಾನನ್ನು ಪೊಲೀಸರು ಬಂಧಿಸಿದ್ದರು.
ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಿ ವಿರುದ್ಧ ಪೊಲೀಸರು ಬೆಳ್ತಂಗಡಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ದೇವರಾಜ ಎಚ್.ಎಂ. ಅವರು ಆರೋಪಿ ಮುಹಮ್ಮದ್ ಸೈಫುಲ್ಲಾ ಅಪರಾಧಿ ಎಂದು ಘೋಷಿಸಿದ್ದು ಆತನಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ನಾಗರ ಪಂಚಮಿ: 7 ಲಕ್ಷದ ಹಸುಗಳ ದಾನ!
ಸುಬ್ರಹ್ಮಣ್ಯ: ನಾಗರಪಂಚಮಿಯಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ಷೇತ್ರದ ಭಕ್ತ ಮತ್ತು ಹೈದರಾಬಾದ್ನ ಎಎಂಆರ್ ಗ್ರೂಪ್ನ ಆಡಳಿತ ನಿರ್ದೇಶಕ ಎ. ಮಹೇಶ್ ರೆಡ್ಡಿ ಸುಮಾರು 7 ಲಕ್ಷ ರೂ. ಮೌಲ್ಯದ ಪುಂಗನೂರು ತಳಿಯ 4 ಗೋವುಗಳನ್ನು ದಾನವಾಗಿ ನೀಡಿದರು. ಶ್ವೇತ ವರ್ಣದ ಹಾಲು ಕರೆಯುವ 3 ಗೋವುಗಳು ಹಾಗೂ 1 ಕರುವನ್ನು ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದ ಬಳಿಗೆ ತಂದು ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿ ವೈದಿಕ ವಿಧಿ ವಿಧಾನಗಳ ಮೂಲಕ ದೇಗುಲಕ್ಕೆ ಹಸ್ತಾಂತರಿಸಲಾಯಿತು.
ಮಹೇಶ್ ರೆಡ್ಡಿ ಈ ಹಿಂದೆ 27 ಲಕ್ಷ ರೂ. ವೆಚ್ಚದಲ್ಲಿ ಭೋಜನ ಪ್ರಸಾದ ತಯಾರಿ ಮತ್ತು ಲಡ್ಡು ಪ್ರಸಾದ ತಯಾರಿ ಯಂತ್ರೋಪಕರಣಗಳನ್ನು ಹಾಗೂ ಷಣ್ಮುಖ ಪ್ರಸಾದ ಭೋಜನ ಶಾಲೆಗೆ ಭೋಜನ ಪ್ರಸಾದ ವಿತರಣೆಗೆ ಗಾಡಿಗಳನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು.
ಚಂದ್ರಯಾನ ಯಶಸ್ಸಿಗೆ ಕುಕ್ಕೆಯಲ್ಲಿ ಸೇವೆ!
ಸುಬ್ರಹ್ಮಣ್ಯ: ಬಾಹ್ಯಾಕಾಶ ಸಂಶೋಧನ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆಯ ಚಂದ್ರಯಾನ 3 ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗರಪಂಚಮಿಯ ಶುಭದಿನವಾದ ಸೋಮವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇಗುಲದ ಆಡಳಿದ ಮಂಡಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಲಾಯಿತು. ಸುಬ್ರಹ್ಮಣ್ಯನಿಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇಸ್ರೋ ಸಂಸ್ಥೆಯ ಪರವಾಗಿ ನಾಗರಾಜನಿಗೆ ಹಾಲು ಅರ್ಪಿಸಿದರು.
ಮೂಡಬಿದಿರೆಯಲ್ಲಿ ಅನೈತಿಕ ಪೊಲೀಸ್ ಗಿರಿ?!
ಸಹಪಾಠಿಯೊಂದಿಗೆ ಮಾತನಾಡಿದ್ದಕ್ಕೆ ಯುವಕನೋರ್ವನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಸೋಮವಾರ ರಾತ್ರಿ ಮೂಡುಬಿದಿರೆಯ ರಾಜೀವ ಗಾಂಧಿ ಸಂಕೀರ್ಣದ ಎದುರು ನಡೆದಿದೆ.
ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪೆಟ್ಟು ತಿಂದಿದ್ದ ಹುಡುಗನನ್ನು ಠಾಣೆಗೆ ಕರೆದೊಯ್ದಿದ್ದಾರೆ.