ಕರಾವಳಿ ಟಾಪ್ ನ್ಯೂಸ್
– ಮಂಗಳೂರು ಕಮಿಷನರ್ ಫೇಸ್ ಬುಕ್ ಖಾತೆ ಹ್ಯಾಕ್!
– ಕಾರ್ಕಳ: ಗೂಡ್ಸ್ ವಾಹನ ಡಿಕ್ಕಿ, ನಿಂತುಕೊಂಡಿದ್ದ ವ್ಯಕ್ತಿ ಸಾವು – ಉಡುಪಿ: ವೈನ್ಶಾಪ್ನಲ್ಲಿ ಎಣ್ಣೆ ಕದ್ದೋಯ್ದ ಕಳ್ಳರು!
NAMMUR EXPRESS NEWS
ಮಂಗಳೂರು: ಉದ್ಯಮಿಗಳು ಹಾಗೂ ಬ್ಯಾಂಕ್ ನೌಕರರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ಅವರ ಖಾತೆಗಳನ್ನು ಹ್ಯಾಕ್ ಮಾಡುವುದು ಅಥವಾ ನಕಲಿ ಖಾತೆಗಳನ್ನು ಸೃಷ್ಟಿಸಿದ್ದನ್ನು ನೋಡಿದ್ದೇವೆ.
ಆದರೆ ಇದೀಗ ಸೈಬರ್ ವಂಚಕರು ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸ್ ಕಮಿಷನರ್ ಹೆಸರಿನಲ್ಲೇ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದು ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೇ ಮಂಗಳೂರಲ್ಲಿ ನಡೆದಿದೆ.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಅವುಗಳ ಮುಖಾಂತರ ಫ್ರೆಂಡ್ಸ್ ರಿಕ್ವೆಸ್ಟ್ ಗಳನ್ನ ಅಕ್ಸೆಪ್ಟ್ ಮಾಡಿಕೊಂಡು, ಮೆಸೆಂಜರ್ ಮುಖಾಂತರ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ವಿಚಾರ ತಿಳಿದ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ವಂಚಕರ ವಿರುದ್ಧ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ತಮ್ಮ ಹೆಸರಲ್ಲಿ ಬರುವ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಕಾರ್ಕಳ: ಗೂಡ್ಸ್ ವಾಹನ ಡಿಕ್ಕಿ, ನಿಂತುಕೊಂಡಿದ್ದ ವ್ಯಕ್ತಿ ಸಾವು
ಕಾರ್ಕಳ: ಕೊರಿಯರ್ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ಅಜೆಕಾರು ಸಮೀಪದ ಗುಡ್ಡೆಯಂಗಡಿ ಬಳಿಯ ಓಟೆಹಳ್ಳ ಸೇತುವೆಯ ಸಂಭವಿಸಿದೆ. ಆಸೈ ತಂಬಿ(21) ಮೃತ ವ್ಯಕ್ತಿ.
ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಅತಿವೇಗವಾಗಿ ಹೋಗುತ್ತಿದ್ದ ಕೊರಿಯರ್ ಕಂಪೆನಿಯ ಗೂಡ್ಸ್ ವಾಹನ ರಸ್ತೆ ಬಲಭಾಗಕ್ಕೆ ಬಂದು ವ್ಯಕ್ತಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಹುಬ್ಬಳ್ಳಿಯ ಹಾನಗಲ್ ಗೆ ಸಾಗುತ್ತಿದ್ದ ವಾಹನದ ಚಾಲಕನಿಗೆ ಮುಂಜಾನೆ ನಿದ್ದೆಗಣ್ಣಿನಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಗಾಯಾಳುವನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈನ್ಶಾಪ್ನಲ್ಲಿ ಕಳ್ಳತನ: ಮದ್ಯ ಕದ್ದ ಕಳ್ಳರು..!
ಉಡುಪಿ: ವೈನ್ಶಾಪ್ಗೆ ನುಗ್ಗಿದ ಕಳ್ಳರು ಸಾವಿರಾರು ರೂ. ನಗದು ಹಾಗೂ ಮದ್ಯವನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.
ಅಲೆವೂರು ರಸ್ತೆಯಲ್ಲಿರುವ ವೈನ್ಶಾಪ್ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿರುವ ಸತೀಶ್ ಅವರು ಅ. 23ರಂದು ರಾತ್ರಿ ವ್ಯವಹಾರದ ಹಣವನ್ನು ಡ್ರಾವರ್ನಲ್ಲಿಟ್ಟು ವೈನ್ ಶಾಪ್ಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಕಳ್ಳತನ ನಡೆದಿರುವ ಬಗ್ಗೆ ಗಮನಕ್ಕೆ ಬಂದಿದೆ. ಕಳ್ಳರು ವೈನ್ಶಾಪ್ನ ಶಟರ್ ಅನ್ನು ತೆಗೆದು ಡ್ರಾವರ್ನಲ್ಲಿಟ್ಟಿದ್ದ 19,200 ರೂ. ನಗದು ಹಾಗೂ ವಿವಿಧ ರೀತಿಯ ಮದ್ಯವನ್ನು ಕಳ್ಳತನ ಮಾಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.