ಮದ್ಯ ಸೇವಿಸಿ ಕೊಳಕ್ಕೆ ಸ್ನಾನಕ್ಕಿಳಿದವನ ಜೀವ ಹೋಯ್ತು!
– ಮಂಗಳೂರು: 27 ವರ್ಷಗಳ ಬಳಿಕ ಆರೋಪಿ ಅರೆಸ್ಟ್!
– ಬೆಳ್ತಂಗಡಿ: ವಿಷ ಸೇವಿಸಿದ್ದ ಬಾಣಂತಿ ಸಾವು
– ಸುಬ್ರಹ್ಮಣ್ಯ: ಜೂಜಾಟ ಅಡ್ಡೆಗೆ ಪೊಲೀಸ್ ದಾಳಿ!
– ಸಿದ್ದಾಪುರ: ದರೋಡೆ ಮಾಡುತ್ತಿದ್ದವರಿಗೆ ಥಳಿತ
– ಸ್ಕೂಟರ್ – ಟ್ಯಾಂಕರ್ ಅಪಘಾತ: ಓರ್ವ ಸಾವು
NAMMUR EXPRESS NEWS
ಉಳ್ಳಾಲ: ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ ಕೊಳಕ್ಕೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳ ಗಡಿ ಭಾಗದ ಕೆಳಗಿನ ತಲಪಾಡಿ ಬಳಿ ಸಂಭವಿಸಿದೆ. ಕೇರಳದ ಹೊಸಂಗಡಿ ದುರ್ಗಿಪಳ್ಳ ನಿವಾಸಿ ಹರಿಪ್ರಸಾದ್ ಆಚಾರ್ಯ (36) ಮೃತ ಪಟ್ಟವರು. ತಲಪಾಡಿಯ ನಿಸರ್ಗ ಬಾರ್ ನಲ್ಲಿ ಬೆಳಗ್ಗೆ ಮದ್ಯ ಸೇವಿಸಿದ್ದ ಹರಿಪ್ರಸಾದ್ ಗೆಳೆಯರಾದ ಯುವರಾಜ್ ಯಾನೆ ಮುನ್ನ ಲೋಹಿತ್, ನವೀನ್ ದೇವಾಡಿಗ, ನಿತೇಶ್ ಉಚ್ಚಿಲ್ ಅವರೊಂದಿಗೆ ಸಮೀಪದ ಖಾಸಗಿ ಲೇ ಔಟಿನ ಕೊಳವೊಂದರಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ, ಈಜು ತಿಳಿಯದ ಹರಿಪ್ರಸಾದ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಂಗಳೂರಿನಿಸಿದ ಅಗ್ನಿ ಶಾಮಕ ದಳದವರು ತೆರಳಿ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆತ್ತಿದ್ದಾರೆ. ಮೃತರು ವೆಲ್ಲಿಂಗ್ ವೃತ್ತಿ ನಡೆಸುತ್ತಿದ್ದರು. ಹರಿಪ್ರಸಾದ್ ಆಚಾರ್ಯ ಅವರು ಅವಿವಾಹಿತರಾಗಿದ್ದು, ತಾಯಿ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.
ಟ್ಯಾಂಕರ್ ನಡುವೆ ಅಪಘಾತಕ್ಕೆ ಓರ್ವ ಬಲಿ
ಹೆಜಮಾಡಿ ಸಮೀಪದ ಕನ್ನಂಗಾರಿನಲ್ಲಿ ನಡೆದ ಟ್ಯಾಂಕರ್ ಹಾಗೂ ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ಸ್ಕೂಟರ್ ನ ಸಹ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಯುವಕ ಹೆಜಮಾಡಿ ಬ್ರಹ್ಮಸ್ಥಾನ ಬಳಿ ಬಾಡಿಗೆ ಕೋಣೆಯ ನಿವಾಸಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸದ್ದಾಂ ಅನ್ಸಾರಿ(20), ಸವಾರ ಪರ್ವೇಜ್ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
27 ವರ್ಷದ ಬಳಿಕ ಸುಲಿಗೆ ಆರೋಪಿ ಅರೆಸ್ಟ್!
ಸುಲಿಗೆ ಪ್ರಕರಣ ಒಂದರಲ್ಲಿ ಬೇಕಾಗಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಪ್ರಕರಣ ನಡೆದ 27 ವರ್ಷಗಳ ಬಳಿಕ ಕೇರಳದ ಕ್ಯಾಲಿಕಟ್ನಲ್ಲಿ ಬಂಧಿಸಿ ಮಂಗಳೂರು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿದೆ. ಪಿ ಮನೋಜ್(52) ಬಂಧಿತ ಆರೋಪಿಯಾಗಿದ್ದಾನೆ. ಅಶೋಕ್ ನಗರದ ವಿನ್ಸೆಂಟ್ ಎಂಬವರು ತನ್ನ ಒಮಿನಿ ಕಾರು ಕಳವಾದ ಬಗ್ಗೆ ದೂರು ನೀಡಿದ್ದರು. ದೂರು ದಾಖಲಾಗಿ 27 ವರ್ಷಗಳು ಕಳೆದರೂ ಆರೋಪಿಯ ಪತ್ತೆ ಕಾರ್ಯ ವಿಫಲವಾಗಿತ್ತು.ಆರೋಪಿ ಕೇರಳದಲ್ಲಿ ತಲೆ ಮೆರಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉರ್ವ ಠಾಣಾಧಿಕಾರಿ ಭಾರತಿ ಮತ್ತು ಸಿಬಂದಿ ವರ್ಗ ದಾಳಿ ನಡೆಸಿ ಆರೋಪಿ ಮನೋಜ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಷ ಸೇವಿಸಿದ್ದ ಬಾಣಂತಿ ಸಾವು
ಹೆರಿಗೆ ವೇಳೆ ಉಂಟಾದ ಗಾಯದ ನೋವು ತಾಳಲಾಗದೆ ಬಾಣಂತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಸುರಿಮೊಗ್ರು ಗ್ರಾಮದ ಜಾರಿಗೆದಡಿ ನಿವಾಸಿ ಆನಂದ ಮಲೆಕುಡಿಯ ಅವರ ಪತ್ನಿ ಸುಪ್ರೀತಾ (25) ಆ. 1ರಂದು ಉಡುಪಿಯಲ್ಲಿ ಹೆರಿಗೆಯಾಗಿದ್ದು, ಈ ಸಮಯ ಉಂಟಾದ ಗಾಯಕ್ಕೆ ಬಳಿಕ ಜಾರಿಗೆದಡಿ ಎಂಬಲ್ಲಿ ಹೊಲಿಗೆ ಹಾಕಲಾಗಿತ್ತು. ಅನಂತರ ವಿಪರೀತ ನೋವು ಕಂಡುಬಂದಿದ್ದು ಆ. 26ರಂದು ನೋವು ತಾಳಲಾಗದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತತ್ಕ್ಷಣ ಅವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ ಲ್ಯಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಜೂಜಾಟ: ಓರ್ವನ ಬಂಧನ
ಸುಬ್ರಹ್ಮಣ್ಯ: ಹಣವನ್ನು ಪಣಕ್ಕಿಟ್ಟು ಲೂಡ ಇಸ್ಪೇಟ್ ದಾಳವನ್ನು ಉಪಯೋಗಿಸಿ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದು, ಮೂವರು ಪರಾರಿಯಾದ ಘಟನೆ ಕೊಲ್ಲಮೊಗ್ರುವಿನ ಬಸ್ಸು ನಿಲ್ದಾಣದ ಬಳಿ ಆ. 26ರಂದು ನಡೆದಿದೆ. ಜೂಜಾಟ ಆಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಠಾಣಾ ಎಸ್ಸೆ ಸಿಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಕಿರಣ್ನನ್ನು ವಶಕ್ಕೆ ಪಡೆದಿದ್ದು, ಆಡುತ್ತಿದ್ದ ಕುಮಾರ್ ಗಡಿಕಲ್ಲು, ಅವಿನ್ ಗಡಿಕಲ್ಲು, ಲಕ್ಷ್ಮಣ ಕಡೋಡಿ ಪರಾರಿಯಾಗಿದ್ದಾರೆ.
ದರೋಡೆ ಮಾಡುತ್ತಿದ್ದವರಿಗೆ ಜನರಿಂದ ಥಳಿತ!
ಸಿದ್ದಾಪುರ ತಾಲೂಕಿನ ಕಂಚಿಕೈನಲ್ಲಿ ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತಿದ್ದ ಖದೀಮರನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಶಿರಸಿ ಮೂಲದ ಶಫಿ,ಶಿವಮೊಗ್ಗ ಮೂಲದ ಟಿಪ್ಪುನಗರದ ಇರ್ಪಾನ್ ಜನರಿಂದ ಥಳಿತಕ್ಕೊಳಗಾದ ದರೋಡೆಕೋರರಾಗಿದ್ದು ಕುಮಟಾಕ್ಕೆ ಆಗಮಿಸಿದ್ದ ಇವರು ಬೈಕ್ ಕದ್ದು ದೇವಿಮನೆ ಘಟ್ಟದಲ್ಲಿ ಓರ್ವ ವಾಹನ ಸವಾರನನ್ನು ಅಡ್ಡಗಟ್ಟಿ ದರೋಡೆ ನಡೆಸಿ ನಂತರ ಸಿದ್ದಾಪುರ ಕಂಚಿಕೈ ಮಾರ್ಗದ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತಿದ್ದ ಸುಬ್ರಹ್ಮಣ್ಯ ಎಂಬ ಯುವಕನನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ದರೋಡೆ ಮಾಡುವಾಗ ಸ್ಥಳೀಯ ಗ್ರಾಮಸ್ಥರು ಗಮನಿಸಿ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಥಳಿತದಿಂದ ಗಂಭೀರ ಗಾಯಗೊಂಡಿದ್ದ ಇಬ್ಬರು ದರೋಡೆಕೋರರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.