ಕುಮಟಾ: ಬಿಳಿ ಹೆಬ್ಬಾವು ಪ್ರತ್ಯಕ್ಷ!
– ಹಾವು ನೋಡಲು ಮುಗಿಬಿದ್ದ ಜನ
– ಮಂಗಳೂರು: ಸೌಜನ್ಯ ಪ್ರಕರಣ ಮರು ತನಿಖೆಗೆ ಧರಣಿ
– ಪಡುಬಿದ್ರಿ: ಕಾಣಿಕೆ ಡಬ್ಬಿಯಿಂದ ನಗದು ಕಳವು
– ಕುಂಬಳೆ: ಪೊಲೀಸರು ಬೆಂಬತ್ತಿದ ಭಯದಲ್ಲಿ ಕಾರು ಅಪಘಾತ: ವಿದ್ಯಾರ್ಥಿ ಸಾವು
NAMMUR EXPRESS NEWS
ಕುಮಟಾ: ಕುಮಟಾದ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಸೋಮವಾರ ರಾತ್ರಿ ಬಿಳಿ ಹೆಬ್ಬಾವು ಪ್ರತ್ಯಕ್ಷಗೊಂಡಿದೆ. ತಕ್ಷಣ ಉರಗ ತಜ್ಞ ಪವನ್ ನಾಯ್ಕ ಅವರು ರಾತ್ರಿ 12 ಘಂಟೆಗೆ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ. ದೊಡ್ಡ ಗಾತ್ರದ ಹೆಬ್ಬಾವು ಹೆಗಡೆಯಲ್ಲಿ ಕಾಣಿಸಿದ್ದು ಜನರು ಭಯಬೀತರಾಗಿದ್ದು ನೂರಾರು ಜನ ನೆರೆದಿದ್ದರು. ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದೆ.
ಸೌಜನ್ಯ ಪ್ರಕರಣ: ಡಿಸಿ ಕಚೇರಿ ಎದುರು ಧರಣಿ
ಮಂಗಳೂರು: ಸೌಜನ್ಯಾ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಸೆ. 11ರಿಂದ 13ರ ವರೆಗೆ ಮಂಗಳೂರಿನಲ್ಲಿರುವ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಲಿದೆ ಎಂದು “ಸೌಜನ್ಯಾ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ’ಯ ಪ್ರಧಾನ ಸಂಚಾಲಕ ಬಾಲಕೃಷ್ಣ ತಿಳಿಸಿದ್ದಾರೆ. ಧರಣಿ ಸತ್ಯಾಗ್ರಹ ಸೆ. 11ರಂದು ಬೆಳಗ್ಗೆ 10ಕ್ಕೆ ಆರಂಭಗೊಳ್ಳಲಿದೆ. ಮೂರು ದಿನಗಳ ಕಾಲ ಸಂಜೆ 4 ವರೆಗೆ ನಡೆಯಲಿದ್ದು ಅನಂತರ ಪ್ರಕರಣದ ಮರು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ., ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ವಿವಿಧ ಘಟಕಗಳ ಪ್ರವೀಣ್ ಮುಂಗ್ಲಿಮನೆ, ಚಂದ್ರಶೇಖರ್ ಕೊಲ್ಚಾರ್, ಸುರೇಶ್ ಬೈಲು, ಮೋನಪ್ಪ ಗೌಡ, ರಕ್ಷಿತ್ ಪುತ್ತಿಲ, ಮೋನಪ್ಪ ಗೌಡ ಮೊದಲಾದವರಿದ್ದರು.
ಕಾಣಿಕೆ ಡಬ್ಬಿಯಿಂದ ನಗದು ಕಳವು
ಪಡುಬಿದ್ರಿ: ಮುದರಂಗಡಿಯಲ್ಲಿ ಆ. 28ರ ರಾತ್ರಿ ಶ್ರೀ ನಾರಾಯಣ ಗುರು ಮಂದಿರದ ಕಿಟಿಕಿಯ ಮರದ ಮೂರು ದಳಿಗಳನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಮಂದಿರದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಸುಮಾರು 15,000 ರೂ. ನಗದನ್ನು ಕಳವು ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಅರ್ಚಕ ಆನಂದ ಪೂಜಾರಿ ಮಂದಿರಕ್ಕೆ ಬಂದಾಗ ಕಳ್ಳತನ ನಡೆದಿರುವ ವಿಚಾರ ತಿಳಿಯಿತು. ಪಡುಬಿದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.
ಪೊಲೀಸರು ಬೆಂಬತ್ತಿದ ಭಯದಲ್ಲಿ ಕಾರು ಅಪಘಾತ: ಗಾಯಾಳು ವಿದ್ಯಾರ್ಥಿ ಸಾವು
ಕುಂಬಳೆ: ಪೊಲೀಸರು ಬೆಂಬತ್ತಿದ ಭಯದಲ್ಲಿ ಕಾರು ಓಡಿಸುತ್ತಿದ್ದ ಸಂದರ್ಭ ನಡೆದ ಆಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಫರ್ಹಾಸ್ (18) ಮೃತಪಟ್ಟಿದ್ದಾರೆ. ಕಳೆದ ಶುಕ್ರವಾರ ಪೇರಾಲು ಕಣ್ಣೂರು ಕುನ್ನಿಲ್ ನಿವಾಸಿ ದಿ| ಆಬ್ದುಲ್ಲ ಅವರ ಪುತ್ರ ಪುತ್ತಿಗೆ ಅಂಗಡಿಮೊಗರು ಸರಕಾರಿ ಹಯ್ಯರ್ ಸೆಕೆಂಡರಿ ವಿದ್ಯಾಲಯದಲ್ಲಿ ಪ್ಲಸ್ ಟು ವಿದ್ಯಾರ್ಥಿ ಫರ್ಹಾಸ್ ಶಾಲೆ ಬಿಟ್ಟು ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಪೊಲೀಸರು ಹಿಂಬಾಲಿಸಿದಾಗ ಭಯದಲ್ಲಿ ಕಾರು ಆಯತಪ್ಪಿ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಫರ್ಹಾಸ್ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟರು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.