ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮಗು ಸಾವು: ಆಕ್ರೋಶ
– ಕಾರ್ಕಳ: ನಾಲ್ವರು ದನಕಳ್ಳರು ಅರೆಸ್ಟ್
– ಬ್ರಹ್ಮಾವರ : ಅತ್ಯಾಚಾರ ಅಪರಾಧಿಗೆ 20 ವರ್ಷ ಜೈಲು
– ಕಾರ್ಕಳ:ಅಪಘಾತದಲ್ಲಿ ಆರೆಸ್ಸೆಸ್ ಕಾರ್ಯಕರ್ತ ನಿಧನ
– ಉಡುಪಿ: ತಾಯಿ- ಮಗಳು ನಾಪತ್ತೆ
NAMMUR EXPRESS NEWS
ಕಾರ್ಕಳ: ದನಗಳನ್ನು ಸ್ಕಾರ್ಪಿಯೊ ಕಾರಿನಲ್ಲಿ ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದು, ವಾಹನ ಬಿಟ್ಟು ಪರಾರಿಯಾಗಿದ್ದ ಇಬ್ಬರು ಹಾಗೂ ಅಕ್ರಮ ದನ ಸಾಗಾಟಕ್ಕೆ ಸಹಕರಿಸಿದ್ದ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಫರಂಗಿಪೇಟೆ ನಿವಾಸಿಗಳಾದ ಜಬ್ಬರ್ (24), ಹೈದರಾಲಿ (26) ಹಾಗೂ ಅವರಿಗೆ ದನ ಕಳ್ಳತನಕ್ಕೆ ಸಹಕರಿಸಿದ ಕಾರ್ಕಳ ಶಿರ್ಲಾಲು ಗ್ರಾಮದ ಪೈಯಂದೆ ದುಗ್ಗಿಬೆಟ್ಟು ಹೌಸ್ನ ಪ್ರಸಾದ್ ಪೂಜಾರಿ(23) ಮತ್ತು ಅಂಡಾರು ಗ್ರಾಮದ ಕುರುಂತಬೆಟ್ಟು ಹೌಸ್ನ ಜಗನ್ನಾಥ ಶೆಟ್ಟಿ (58) ಬಂಧಿತ ಆರೋಪಿಗಳು, ಕಾರ್ಕಳದ ಈ ಇಬ್ಬರು ದನ ಖರೀದಿಸಲು ಸಹಕರಿಸುವ ದಲ್ಲಾಳಿಗಳು ಎನ್ನಲಾಗಿದೆ. ಘಟನೆ ನಡೆದ 24 ತಾಸಿನೊಳಗೆ ಆರೋಪಿಗಳನ್ನು ಬಂಧಿಸಿದ ಕಾರ್ಕಳ ಪೊಲೀಸರು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅತ್ಯಾಚಾರ ಅಪರಾಧಿಗೆ 20 ವರ್ಷ ಜೈಲು
ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಉಡುಪಿ ಪೋಕ್ಸ್ ನ್ಯಾಯಾಲಯ 20 ವರ್ಷಗಳ ಕಾರಾಗೃಹ ವಾಸದ ಕಠಿಣ ಶಿಕ್ಷೆ ವಿಧಿಸಿದೆ. ಬ್ರಹ್ಮಾವರ ಬಾಳಕುದ್ರು ನಿವಾಸಿ ಅಶೋಕ್ ಎ.(32) ಎಂಬಾತ ಶಿಕ್ಷೆಗೊಳಗಾದ ಅಪರಾಧಿ. ನಾಲ್ಕು ವರ್ಷದ ಹಿಂದೆ 15ರ ಹರೆಯದ ಶಾಲಾ ಬಾಲಕಿ ಜತೆ ಸ್ನೇಹ ಬೆಳೆಸಿದ ಅಪರಾಧಿ ಶಾಲೆಗೆ ಹೋಗುವಾಗ ಅಕೆಯನ್ನು ಕಾರಿಗೆ ಹತ್ತಿಸಿಕೊಂಡು ಪ್ರಕರಣದ ಇನ್ನೋರ್ವ ಆರೋಪಿಯಾಗಿದ್ದ ತನ್ನ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಬಳಿಕ ಕಾರನಲ್ಲಿ ಆಕೆಯನ್ನು ಮನೆಗೆ ಬಿಟ್ಟು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಬಾಲಕಿ ಖಿನ್ನತೆಯಿಂದಿರುವುದನ್ನು ಕಂಡು ಮನೆಯವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ಡಿವೈಎಸ್ಪಿ ಜೈಶಂಕರ್ ತನಿಖೆ ನಡೆಸಿದ್ದರು. ಅಪರಾಧಿಗೆ ಈಗಾಗಲೇ ಮದುವೆಯಾಗಿದ್ದರೂ ಹದಿಹರೆಯದ ಬಾಲಕಿಯ ಸ್ನೇಹ ಬೆಳೆಸಿ ಅತ್ಯಾಚಾರ ಎಸಗಿದ್ದ ಇದಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಂಡಿದ್ದಾನೆ.
ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮಗು ಸಾವು: ಆಕ್ರೋಶ
ಬೆಳ್ತಂಗಡಿ: ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡಿದ ಬಳಿಕ ಮಗು ಸಾವನ್ನಪ್ಪಿದ ಪ್ರಕರಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮದ ಮುಳಿಕಾ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ 1.5 ತಿಂಗಳ ಹೆಣ್ಣು ಮಗು ಅಂಶಿಕಾಳನ್ನು ಕಫ ಸಮಸ್ಯೆಯ ಕಾರಣಕ್ಕೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಡಾಕ್ಟರ್ ಇಲ್ಲದ ಕಾರಣ ನರ್ಸ್ ಇಂಜೆಕ್ಷನ್ ನೀಡಿದ್ದು, ಬಳಿಕ ಮಗು ಸಾವನ್ನಪ್ಪಿದೆ ಎಂದು ಮನೆಮಂದಿ ಆರೋಪಿಸಿದ್ದಾರೆ. ಘಟನೆಯ ಮಾಹಿತಿ ಅರಿತ ಮಾಜಿ ಶಾಸಕ ವಸಂತ ಬಂಗೇರ ಆಸ್ಪತ್ರೆಗೆ ದೌಡಾಯಿಸಿ ಆಸ್ಪತ್ರೆಯ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದು, ಮಗುವಿನ ತಂದೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದಸಲಹೆ ಸೂಚನೆ ನೀಡಿದ್ದಾರೆ.
ಕಾರ್ಕಳ:ಅಪಘಾತದಲ್ಲಿ ಆರೆಸ್ಸೆಸ್ ಕಾರ್ಯಕರ್ತ ನಿಧನ
ನಿಟ್ಟೆ ಗರಡಿ ಬಳಿ ಆ.7ರಂದು ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಾಯಗೊಂಡಿದ್ದ ನಿಟ್ಟೆ ಗ್ರಾಮದ ನಿವಾಸಿ ಮಂಜುನಾಥ್ ಶೆಟ್ಟಿ ಚಿಕಿತ್ಸೆ ಫಲಿಸದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಆ.8ರಂದು ನಿಧನ ಹೊಂದಿದ್ದಾರೆ.ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಕೆಲಸಕ್ಕಿದ್ದ ಅವರು ಆರೆಸ್ಸೆಸ್ ಸ್ವಯಂ ಸೇವಕರಾಗಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಮಂಜುನಾಥ್ ಶೆಟ್ಟಿ ನಿಧನಕ್ಕೆ ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಡುಪಿ: ತಾಯಿ- ಮಗಳು ನಾಪತ್ತೆ
ಉಡುಪಿ ನಗರದ ನಯಂಪಳ್ಳಿ ನಿವಾಸಿ ಅಕ್ಷತಾ (32) ಎಂಬ ಮಹಿಳೆಯು ತನ್ನ ಮಗಳಾದ ಖುಷಿ (9) ಯೊಂದಿಗೆ ಏಪ್ರಿಲ್ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಅಕ್ಷತಾ 5 ಅಡಿ 4 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಖುಷಿ 4 ಅಡಿ 2 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?
HOW TO APPLY : NEET-UG COUNSELLING 2023