ಪರೀಕ್ಷೆಗೆ ಹೆದರಿ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿ!
– ಕಾರ್ಕಳ ಖಾಸಗಿ ಕಾಲೇಜಿನ ವಿದ್ಯಾರ್ಥಿ ದುರ್ಮರಣ
– ಸೌಜನ್ಯ ಕೇಸ್: ಪ್ರತಿಭಟನೆ ವೇಳೆ ಹಲ್ಲೆ ಆರೋಪ
– ಸೌಜನ್ಯ ಕುಟುಂಬದವರಿಂದ ದೂರು ದಾಖಲು
– ಮಂಗಳೂರು: ಗಾಂಜಾ ಮಾರಾಟಗಾರ ಅರೆಸ್ಟ್
– ಉಡುಪಿಯಲ್ಲಿ ಮುಸುಕುಧಾರಿ ಕಳ್ಳರ ಕರಾಮತ್ತು!
NAMMUR EXPRESS NEWS
ಕಾರ್ಕಳ: ಪರೀಕ್ಷೆಗೆ ಹೆದರಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದಲ್ಲಿ ನಡೆದಿದೆ. ಮಿಯ್ಯಾರು ಗ್ರಾಮ ಬಲಿಪರಪಾಡಿ ನಿವಾಸಿ ರಂಜನ್ (17) ಕಾರ್ಕಳದ ಖಾಸಗಿ ಕಾಲೇಜುವೊಂದರಲ್ಲಿ E & C ಡಿಪ್ಲೋಮ ವಿದ್ಯಾಭ್ಯಾಸ ಮಾಡುತ್ತಿದ್ದ. ಆ.4ರಂದು ಸಂಜೆ ರಂಜನ್ ತಂದೆ ಕರ್ಣಾಕರ ರವರು ದೂಪದಕಟ್ಟೆಯಲ್ಲಿದ್ದಾಗ ಅವರ ಹೆಂಡತಿ ಫೋನ್ ಮಾಡಿ ರಂಜನ್ ಕಾಲೇಜಿನಿಂದ ಮನೆಗೆ ಬಂದು ರೂಮಿನ ಬಾಗಿಲು ಹಾಕಿಕೊಂಡಿದ್ದು ಬಾಗಿಲು ತೆರೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಕರ್ಣಾಕರ ಕೂಡಲೇ ಮನೆಗೆ ಬಂದು ಬಾಗಿಲು ಬಡಿದರೂ ರಂಜನ್ ಬಾಗಿಲು ತೆರೆಯದ ಕಾರಣ ಸಂಜೆ 5 ಗಂಟೆಗೆ ಕಿಟಿಕಿಯ ಗಾಜು ಒಡೆದು ನೋಡಿದಾಗ ರಂಜನ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡುರುವುದು ಬೆಳಕಿಗೆ ಬಂದಿದೆ.
ಸೌಜನ್ಯಾ ಕುಟುಂಬದವರ ಮೇಲೆ ಹಲ್ಲೆ: ದೂರು
ಧರ್ಮಸ್ಥಳ: ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದ ನೇತೃತ್ವದಲ್ಲಿ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಸೌಜನ್ಯಾ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಉಜಿರೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸೌಜನ್ಯಾ ತಾಯಿ ಕುಸುಮಾವತಿಯವರ ಸಹೋದರನ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾದ ವ್ಯಕ್ತಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದೆ.
ಸೌಜನ್ಯಾ ತಾಯಿ ಕುಸುಮಾವತಿ ಮತ್ತು ಸಹೋದರ ಜಯರಾಂ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಾ ಸಭೆಗೆ ಸೌಜನ್ಯಾ ತಾಯಿ ಮತ್ತು ಸೌಜನ್ಯಾ ತಂಗಿಯಂದಿರು ಆಗಮಿಸಿದ್ದರು. ಈ ವೇಳೆ ಸೌಜನ್ಯ ತಾಯಿ ನನಗೂ ವೇದಿಕೆ ಹತ್ತಬೇಕು ಎಂದು ಒತ್ತಾಯಿಸಿದಾಗ ಗಲಾಟೆಯಾಗಿದೆ. ಈ ವೇಳೆ ಹೆಗ್ಗಡೆ ಅನುಯಾಯಿಯೊಬ್ಬ ಪೋಲಿಸರ ಎದುರೇ ಸೌಜನ್ಯಾ ತಮ್ಮನ ಕಾಲರ್ ಹಿಡಿಯಲು ಪ್ರಯತ್ನಿಸಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸೌಜನ್ಯ ಸಂಬಂಧಿಕರನ್ನು ಸ್ಥಳದಿಂದ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಇದೀಗ ದೂರು ದಾಖಲಾಗಿದೆ.
ಮಂಗಳೂರು: ಗಾಂಜಾ ಮಾರಾಟಗಾರ ಅರೆಸ್ಟ್
ಮಂಗಳೂರು: ಡ್ರಗ್ಸ್ ಫ್ರಿ ಮಂಗಳೂರು’ ಅಭಿಯಾನದ ಅಂಗವಾಗಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮಂಗಳೂರು ನಗರದ ಕೋಡಿಕಲ್ ನಿವಾಸಿ ಮೊಹಮ್ಮದ್ ಅಝೀಝ್ ಯಾನೆ ಅಜೀಜ್ (40) ಬಂಧಿತ ಆರೋಪಿ. ಕಂಕನಾಡಿ- ಪಂಪ್ವೆಲ್ ಪರಿಸರದಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ಆತನಿಂದ 50,000 ರೂಪಾಯಿ ಮೌಲ್ಯದ 2ಕೆ.ಜಿ. ತೂಕದ ಗಾಂಜಾ, ಸುಝುಕಿ ಆ್ಯಕ್ಸಸ್ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ಸಹಿತ ಒಟ್ಟು ಒಂದು ಲಕ್ಷದ ಐದು ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಉಡುಪಿ: ಮುಸುಕುಧಾರಿಗಳಿಂದ ಮನೆ ಕಳ್ಳತನ!
ಉಡುಪಿಯ ಕರಾವಳಿ ಅಂಡರ್ ಪಾಸ್ ಸಮೀಪ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮೂರು ಮಂದಿ ಮುಸುಕುಧಾರಿ ಕಳ್ಳರು ತಮ್ಮ ಕೈ ಚಳಕವನ್ನು ತೋರಿದ್ದಾರೆ. ಕಳ್ಳರ ಕೃತ್ಯ ಮನೆಯ ಹೊರಗಡೆ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023