ಪಾಕಿಸ್ತಾನ್ ಜಿಂದಾಬಾದ್ ಎಂದ 3 ಮಂದಿ ಅಂದರ್..!
– ಉದರದಲ್ಲಿ 9 ಕೆ.ಜಿ. ಮಾಂಸದ ಗಡ್ಡೆ!
– ಬೆಳ್ತಂಗಡಿ: 1 ಕೋಟಿ ಮೌಲ್ಯದ ಕರೆನ್ಸಿ ಕೊಡುವುದಾಗಿ ವಂಚನೆ!
– ಬೆಂಗಳೂರು: ಮೆಲ್ಸೇತುವೆ ಯಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ವ್ಯಕ್ತಿ ಸಾವು!
– ಹಾಸನ: ಪ್ರೀತಿ ನಿರಾಕರಿಸಿದ ಶಾಲಾ ಬಾಲಕಿಯನ್ನು ಕೊಂದ ಯುವಕ
NAMMUR EXPRESS NEWS
ಬೆಂಗಳೂರು: ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ನಾಯಕ ನಾಸಿರ್ ಹುಸೇನ್ ಗೆದ್ದಾಗ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಮೊಳಗಿಸಿದ್ದ ಮೂವರನ್ನು ಬಂಧಿಸಲಾಗಿದೆ. ಒಂದು ವಾರದಿಂದ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವೆ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದ ಪ್ರಕರಣ ಈಗ ಪ್ರಮುಖ ಘಟ್ಟ ತಲುಪಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ವಿಧಾನಸೌಧ ಠಾಣೆ ಪೊಲೀಸರು, ತನಿಖೆ ಪೂರ್ಣಗೊಳಿಸಿ ವಿಧಿವಿಜ್ಞಾನ ಪ್ರಯೋ ಗಾಲಯದ ವರದಿ ಆಧರಿಸಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಕರ್ನಾಟಕ ಮೂಲದವರಾಗಿದ್ದರೆ, ಮತ್ತೊಬ್ಬ ದಿಲ್ಲಿಗೆ ಸೇರಿದವನಾಗಿದ್ದಾನೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಹಮ್ಮದ್ ಶಫಿ ನಾಶಿಪುಡಿ, ಆರ್.ಟಿ.ನಗರದ ಮುನಾವರ್ ಮತ್ತು ದೆಹಲಿ ಮೂಲದ ಇಲ್ತಾಜ್ ಎಂಬವವರನ್ನು ಬಂಧಿಸಲಾಗಿದೆ. ಫೆ.27ರಂದು ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಜಯಗಳಿಸಿದ್ದರು. ನಂತರ ನಡೆದ ಸಂಭ್ರಮಾಚರಣೆ ವೇಳೆ ಆರೋಪಿಗಳು ಪಾಕಿಸ್ಥಾನ್ ಜಿಂದಾಬಾದ್ ಎಂಬ ಘೋಷಣೆಕೂಗಿದ್ದರು. ಈಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರೋಪಿಗಳ ಪೈಕಿ ಮೊಹಮ್ಮದ್ ಶಫಿ ನಾಶಿಪುಡಿ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಮುನಾವರ್ ನಗರದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ ಇಲ್ತಾಜ್ ಎಂಬಾತನೂ ನಾಸೀರ್ ಹುಸೇನ್ ಆಪ್ತ ಬೆಂಬಲಿಗ ನಾಗಿದ್ದಾನೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂವರು ಅಧಿಕೃತವಾಗಿ ವಿಧಾನಸೌಧ ಪ್ರವೇಶ ಪಾಸ್ ಪಡೆದು ಬಂದಿರುವುದು ಖಾತ್ರಿಯಾಗಿದೆ.
ಉದರದಲ್ಲಿ 9 ಕೆ.ಜಿ. ಮಾಂಸದ ಗಡ್ಡೆ!:
ಕಾಸರಗೋಡು: ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಮಹಿಳೆಯ ಉದರದಿಂದ ಬರೋಬ್ಬರಿ 9.8 ಕೆ.ಜಿ.ತೂಕದ ಮಾಂಸದ ಗಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹೊಟ್ಟೆ ಊದಿಕೊಂಡ ಸ್ಥಿತಿಯಲ್ಲಿ ಇದ್ದುದರಿಂದ ಮಹಿಳೆ ಆಸ್ಪತ್ರೆಗೆ ತಪಾಸಣೆಗಾಗಿ ಬಂದಿದ್ದರು. ತಪಾಸಣೆಯಲ್ಲಿ ಮಾಂಸದ ಗಡ್ಡೆ ಪತ್ತೆಯಾಗಿತ್ತು. ಆಕೆ ಈವರೆಗೆ ಹೆರಿಗೆ ಶಸ್ತ್ರಚಿಕಿತ್ಸೆ, ಅಪೆಂಡಿಸೈಟಿಸ್, ಹರ್ನಿಯಾ ಸೇರಿದಂತೆ ನಾಲ್ಕು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತಜ್ಞ ವೈದ್ಯರ ತಂಡ ಶಸ್ತ್ರಕ್ರಿಯೆ ನಡೆಸಿದ್ದು, ಮಹಿಳೆ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
1 ಕೋಟಿ ಮೌಲ್ಯದ ಕರೆನ್ಸಿ ಕೊಡುವುದಾಗಿ ನಂಬಿಸಿ ಮಹಿಳೆಗೆ ವಂಚನೆ:
ಬೆಳ್ತಂಗಡಿ: ಕೊಯ್ಯರು ಗ್ರಾಮದ ಮಹಿಳೆಯೊಬ್ಬರಿಗೆ 1 ಕೋಟಿ ರೂ. ಮೌಲ್ಯದ ಕರೆನ್ಸಿ ಕೊಡುವುದಾಗಿ ಹೇಳಿ ಆಕೆಯಿಂದ 14.55 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ಕೊಯ್ಯರು ಗ್ರಾಮದ ಬರಮೇಲು ನಿವಾಸಿ ಮಹಿಳೆ ದೂರು ನೀಡಿದವರು. 2023ರಲ್ಲಿ ಅವರ ಮೊಬೈಲ್ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಮೆಸೇಜ್ ಮಾಡಿ, ಪರಿಚಯ ಮಾಡಿಕೊಂಡಿದ್ದ. 2023ರ ಮೇ ತಿಂಗಳಿನಲ್ಲಿ ಈ ಅಪರಿಚಿತ ವ್ಯಕ್ತಿ ಕರೆ ಮಾಡಿ 1 ಕೋಟಿ ಮೌಲ್ಯದ ಕರೆನ್ಸಿ ಕಳುಹಿಸಿರುವುದಾಗಿ ತಿಳಿಸಿದ್ದ.
1 ಕೋಟಿ ಹಣ ಪಡೆಯಬೇಕಾದರೆ ತೆರಿಗೆ ಹಾಗೂ ಇತರ ಚಾರ್ಜ್ಗೆ ಹಣ ಕಟ್ಟಬೇಕೆಂದು ತಿಳಿಸಿ ಬೇರೆ ಬೇರೆ ಖಾತೆಗಳನ್ನು ನೀಡಿದ್ದು ಮಹಿಳೆ ಸೌಹಾರ್ದ ಸಹಕಾರಿ ಸಂಘದ ಖಾತೆ ಹಾಗೂ ಬ್ಯಾಂಕ್ನ ಖಾತೆಯಿಂದ ಈ ವ್ಯಕ್ತಿ ತಿಳಿಸಿದ ಖಾತೆಗಳಿಗೆ 2023ರ ಮೇ 5ರಿಂದ 2024ರ ಫೆ.22 ರ ವರೆಗೆ 14, 55, 364 ರೂ. ಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದುಕೊಂಡ ಅಪರಿಚಿತ ವ್ಯಕ್ತಿ ಮತ್ತೆ ಸಂಪರ್ಕಕ್ಕೆ ಸಿಗದಿದ್ದಾಗ ತಾನು ವಂಚನೆಗೊಳಗಾಗಿರುವುದು ತಿಳಿದು, ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೆಲ್ಸೇತುವೆ ಯಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ವ್ಯಕ್ತಿ ಸಾವು!
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಮೆಲ್ಸೇತುವೆ ಯಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ವ್ಯಕ್ತಿಯೊಬ್ಬ ಬಿದ್ದ ಘಟನೆ ಹೈಗೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.ಹೌದು, ನಗರದ ಹೃದಯ ಭಾಗದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹೈಗೌಂಡ್ಸ್ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ಬ್ರಿಡ್ಜ್ ಮೇಲಿನಿಂದ ಕೆಳಗೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದಾರೆ. ಪರಿಣಾಮ ಕಾರಿನ ಗ್ಲಾಜು ಪುಡಿ ಪುಡಿಯಾಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ.
ಪ್ರೀತಿ ನಿರಾಕರಿಸಿದ SSLC ವಿದ್ಯಾರ್ಥಿನಿಯ ಕೊಲೆಗೈದು ರೈಲಿಗೆ ತಲೆಕೊಟ್ಟ ಯುವಕ!
ಹಾಸನ : ಪ್ರೀತಿ ನಿರಾಕರಿಸಿದ ಶಾಲಾ ಬಾಲಕಿಯನ್ನು ಕೊಂದು ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದೆ. ಅರಸೀಕೆರೆ ತಾಲೂಕಿನ ಬೆಳಗುಂಬ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕಾ ಕೊಲೆಯಾದ ಬಾಲಕಿಯಾಗಿದ್ದು, ಶರತ್ (23) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು ಎಸ್ ಎಸ್ ಎಲ್ ಸಿ ಓದುತ್ತಿದ್ದ ಭೂಮಿಕಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಶರತ್ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ವಿದ್ಯಾರ್ಥಿನಿ ಭೂಮಿಕಾ ಶಾಲೆ ಮುಗಿಸಿ ಮನೆಗೆ ಹೋಗುವಾಗ ತೋಟದಲ್ಲಿ ಆಕೆಯನ್ನು ಅಡ್ಡಗಟ್ಟಿದ ಶರತ್ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಅರಸೀಕೆರೆ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.