ಬಂಟ್ವಾಳದಲ್ಲಿ ಕಿಲ್ಲರ್ ಆಕ್ಸಿಡೆಂಟ್!
– ಟೆಂಪೋ ಡಿಕ್ಕಿಯಾಗಿ 3 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು
– ಬಸ್ ಚಾಲಕನ ಅತಿ ವೇಗದಿಂದ ಸ್ನೇಹಿತರಿಬ್ಬರು ಬಲಿ
NAMMUR EXPRESS NEWS
ಬಂಟ್ವಾಳ: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಟೆಂಪೋ ಮುಂದಕ್ಕೆ ಚಲಿಸಿ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಢಿಕ್ಕಿ ಹೊಡೆದ ಪರಿಣಾಮ ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬಂಟ್ವಾಳದ ಲೊರೆಟ್ಟೊಪದವು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಫರಂಗಿಪೇಟೆ ಸಮೀಪದ 10ನೇ ಮೈಲಿಗಲ್ಲು ನಿವಾಸಿ ದಿ.ಉನೈಸ್ ಎಂಬವರ ಪುತ್ರಿ ಆಶಿಕ (3) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಮಗು ಬಂಟ್ವಾಳ ಸಮೀಪದ ಲೊರೆಟ್ಟೋಪದವಿನ ತನ್ನ ಅಜ್ಜಿಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭ ಮನೆಯ ಮುಂಭಾಗ ನಿಲ್ಲಿಸಿದ್ದ ಟೆಂಪೋವಿನ ಗೇರ್ ಅನ್ನು ಮಕ್ಕಳು ಎಳೆದಿದ್ದು, ಈ ವೇಳೆ ಟೆಂಪೊ ಚಲಿಸಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
– ಬಂಟ್ವಾಳ: ಬಸ್ ಚಾಲಕನ ಅತಿ ವೇಗದಿಂದ ಸ್ನೇಹಿತರಿಬ್ಬರು ಬಲಿ,
ಬಂಟ್ವಾಳ: ತುಂಬೆಯ ಕಡೆಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಮತ್ತೋರ್ವ ಯುವಕ ಮೃತಪಟ್ಟಿದ್ದಾರೆ. ಈ ಮೂಲಕ ಸ್ನೇಹಿತರಿಬ್ಬರೂ ಜೊತೆಯಾಗಿಯೇ ಜೀವ ಕಳೆದು ಕೊಳ್ಳುವಂತಾಗಿದೆ. ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಮುಂದಿನಿಂದ ಸಾಗುತ್ತಿದ್ದ ಬೈಕ್ ಸವಾರರಿಬ್ಬರಿಗೆ ಡಿಕ್ಕಿಯಾಗಿತ್ತು. ರೊಟ್ಟಿಗುಡ್ಡೆ ನಿವಾಸಿ ಪ್ರವೀಣ್(34) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತೀವ್ರ ಗಾಯಗೊಂಡಿದ್ದ ಸಂದೀಪ್ (35) ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರು ಕೂಡ ಸೇಲ್ಸ್ ಮ್ಯಾನ್ ವೃತ್ತಿಯಲ್ಲಿದ್ದು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ. ಎರಡು ದಿನಗಳ ಬಳಿಕ ಸಂದೀಪ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಸ್ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಆಗಿತ್ತೆಂದು ದೂರು ಕೇಳಿಬಂದಿದೆ. ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ