ಕರಾವಳಿ ಟಾಪ್ ನ್ಯೂಸ್
– ಕೊಣಾಜೆ: ಅಂಗನವಾಡಿಗೆ ಹೋಗಿದ್ದ ಯುವತಿ ನಾಪತ್ತೆ
– ಕುಂದಾಪುರ: ಕೆರೆಗೆ ಬಿದ್ದು ವೈದ್ಯಕೀಯ ವಿದ್ಯಾರ್ಥಿ ಸಾವು
– ಕಡಬ: ಪೋಕ್ಸೋ ಪ್ರಕರಣದಲ್ಲಿ ಜ್ಯೋತಿಷಿಯ ಬಂಧನ!
– ಮೂಲ್ಕಿ: ಕಳ್ಳತನ ಮಾಡಿ ವಿದೇಶದಲ್ಲಿದ್ದ ಮೂವರು ಅರೆಸ್ಟ್!
– ಬೆಳ್ತಂಗಡಿ: ದಂಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!
NAMMUR EXPRESS NEWS
ಕೊಣಾಜೆ: ಮುಡಿಪು ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಪಶ್ಚಿಮ ಬಂಗಾಳ ಮೂಲದ ಜುಲೇಖಾ ಖಾಟೂನ್ (22) ನಾಪತ್ತೆಯಾಗಿರುವ ಯುವತಿ.4 ವರ್ಷಗಳ ಹಿಂದೆ ಭಿಕ್ಷಾಟನೆ ಪ್ರಕರಣದಲ್ಲಿ ಸಿಕ್ಕಿದ್ದ ಈಕೆ ಮನೆಯವರು ಪತ್ತೆಯಾಗದೇ ಇರುವುದರಿಂದ ಮೇಲಾಧಿಕಾರಿಗಳ ಆದೇಶದಂತೆ 2024 ನೇ ಮಾರ್ಚ್ ತಿಂಗಳಲ್ಲಿ ಭೂಮಿ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. ಏಪ್ರಿಲ್ 18 ರಂದು ಅಲ್ಲಿಂದ ಕಾಣೆಯಾಗಿದ್ದ ಬಳಿಕ ಆಕೆಯನ್ನು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಮುಡಿಪು ಪ್ರಜ್ಞಾ ಸ್ವಾಧಾರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು.
ಮುಡಿಪು ಕೇಂದ್ರದಲ್ಲಿದ್ದ 4 ಮಕ್ಕಳನ್ನು ಕುರ್ನಾಡು ಅಂಗನವಾಡಿಗೆ ಬಿಟ್ಟು ಕರೆದುಕೊಂಡು ಬರಲು ಆಕೆಯೇ ಹೋಗಿ ಬರುತ್ತಿದ್ದು, ಎಂದಿನಂತೆ ಸೆ.19 ರಂದು ಮಧ್ಯಾಹ್ನ 2.45 ಗಂಟೆಗೆ ಮಕ್ಕಳನ್ನು ಕರೆದುಕೊಂಡು ಬರಲೆಂದು ಅಂಗನವಾಡಿಗೆ ಹೋದವಳು ಅಲ್ಲಿಗೂ ಹೋಗದೆ ಮತ್ತೆ ಕೇಂದ್ರಕ್ಕೂ ವಾಪಸ್ಸು ಬಂದಿರಲಿಲ್ಲ ಎಂದು ತಿಳಿದುಬಂದಿದೆ.
ಕಡಬ: ಪೋಕ್ಸೋ ಪ್ರಕರಣದಲ್ಲಿ ಜ್ಯೋತಿಷಿಯ ಬಂಧನ!
ಕಡಬ: ಪೊಕ್ಸೋ ಪ್ರಕರಣದಲ್ಲಿ ಜ್ಯೋತಿಷಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಜ್ಯೋತಿಷಿ ಕಾಣಿಯೂರಿನ ಬೆಳ್ಳಂದೂರು ನಿವಾಸಿ ಪ್ರಸಾದ್ ಪಾಂಗಣ್ಣಾಯ ಎಂದು ತಿಳಿದು ಬಂದಿದೆ. ಪ್ರಸಾದ್ ಪಾಂಗಣ್ಣಾಯ ಮಂಗಳೂರಿನಲ್ಲಿ ಕೌನ್ಸೆಲಿಂಗ್ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿತ್ತು. ಅದರಂತೆ ಇಂದು ಅವರನ್ನು ಅವರ ಮನೆಯಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಸಾದ್ ಪಾಂಗಣ್ಣಾಯ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪೊಕ್ಸ್ ಪ್ರಕರಣ ದಾಖಲಾಗಿದೆ
ಕುಂದಾಪುರ: ಕೆರೆಗೆ ಬಿದ್ದು ವೈದ್ಯಕೀಯ ವಿದ್ಯಾರ್ಥಿ ಸಾವು
ಕುಂದಾಪುರ: ವೈದ್ಯಕೀಯ ವಿದ್ಯಾರ್ಥಿಯೊಬ್ಬ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಹಂಗಳೂರಿನ ಗೌರೀಶ್ ಬಿ.ಆರ್ (25) ಮೃತಪಟ್ಟವರು ಎಂದು ತಿಳಿದುಬಂದಿದೆ. ಬುಧವಾರ ಸಂಜೆ ಈಜುಕೊಳದಲ್ಲಿ ಈಜಲು ಹೋಗುವುದಾಗಿ ಮನೆಯಿಂದ ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಕೋಟೇಶ್ವರ ದೇವಸ್ಥಾನದ ಕೆರೆ ಸಮೀಪ ಬುಧವಾರ ತಡರಾತ್ರಿ ಬ್ಯಾಗ್, ಮೊಬೈಲ್ ಫೋನ್, ಚಪ್ಪಲಿ ಕಂಡುಬಂದಿತ್ತು. ಅಂದು ಸಂಜೆ 5.30ರಿಂದ ರಾತ್ರಿ 11 ಗಂಟೆಯ ನಡುವೆ ಕೆರೆಗೆ ಕಾಲುಜಾರಿ ಬಿದ್ದಿರಬಹುದು ಎಂದು ಕುಟುಂಬಿಕರು ಶಂಕಿಸಿದ್ದಾರೆ. ಗುರುವಾರ ಬೆಳಗ್ಗೆ ಕೆರೆಯಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಯುವಕ ಆತ್ಮಹತ್ಯೆಯೆ ಅಥವಾ ಕಾಲು ಜಾರಿ ಬಿದ್ದನೋ.. ಈ ಕುರಿತು ಮಾಹಿತಿ ತಿಳಿದು ಬರಬೇಕಾಗಿದೆ.
ಮೂಲ್ಕಿ: ಕಳ್ಳತನ ಮಾಡಿ ವಿದೇಶದಲ್ಲಿದ್ದ ಮೂವರು ಅರೆಸ್ಟ್!
ಮೂಲ್ಕಿ: ಮಂಗಳೂರು ಸಿಸಿಬಿ ಪೊಲೀಸರು ಮೂಲ್ಕಿ ಠಾಣೆ ವ್ಯಾಪ್ತಿಯ ಕಿನ್ನಿಗೋಳಿಯಲ್ಲಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮನೆಯಲ್ಲಿ ಕೆಲವು ಸಮಯಗಳ ಹಿಂದೆ ನಡೆದಿದ್ದ ಕಳವು ಪ್ರಕರಣದ ಪ್ರಮುಖ ಆರೋಪಿ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಸಹಿತ ಮೂವರನ್ನು ಬಂಧಿಸಿದ್ದಾರೆ.ಸಿದ್ದಕಟ್ಟೆ ನಿವಾಸಿ ಹುಸೈನಬ್ಬ ಯಾನೆ ಸುಹೈಲ್ (33), ಕೊಲ್ನಾಡು ನಿವಾಸಿ ಝುಬೈರ್ ಹಾಗೂ ಕಾಸರಗೋಡು ನಿವಾಸಿ ಕಲಾಂ ಬಂಧಿತರು.ಸುಹೈಲ್ ಹಾಗೂ ಝುಬೈರ್ ನೇರವಾಗಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದು, ಕಲಾಂ ನಕಲಿ ಪಾಸ್ಪೋರ್ಟ್ ಮಾಡುವಲ್ಲಿ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಿನ್ನಿಗೋಳಿ: ಲಂಚ ಸ್ವೀಕರಿಸುವ ವೇಳೆ ಅರೆಸ್ಟ್!
ಕಿನ್ನಿಗೋಳಿ: ಕಾಮಗಾರಿಯೊಂದಕ್ಕೆ ಸಂಬಂಧಿಸಿದಂತೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಜೂನಿಯರ್ ಇಂಜಿನಿಯರ್ ಲಂಚ ಸ್ವೀಕರಿಸುವ ಸಂದರ್ಭ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸೆ19 ರಂದು ಸಂಜೆ ನಡೆದಿದೆ.
ಪಿಡಬ್ಲೂಡಿ ಕಾಸ್ಟ್-1 ಗುತ್ತಿಗೆದಾರರೊಬ್ಬರು 15ನೇ ಹಣಕಾಸು ಯೋಜನೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್ ಕೋಡಿ ಸರಕಾರಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿ ಗುತ್ತಿಗೆ ಕೆಲಸವನ್ನು ನಿರ್ವಹಿಸಿದ್ದು, ಕಾಮಗಾರಿಯ 9,77,154 ರೂ.ಮೊತ್ತದ ಬಿಲ್ ಮಂಜೂರಾತಿಯ ಬಗ್ಗೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ನಾಗರಾಜು ಅವರಲ್ಲಿ ವಿಚಾರಿಸಿದಾಗ ಬಿಲ್ ಪಾಸ್ ಮಾಡಲು 37,000 ರೂ. ಲಂಚವನ್ನು ನೀಡುವಂತೆ ಮತ್ತು ಕಿನ್ನಿಗೊಳಿ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಯವರಿಗೆ 15,000 ರೂ. ಲಂಚವನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಜೂನಿಯರ್ ಇಂಜಿನಿಯರ್ ನಾಗರಾಜು ಮುಂಚಿತವಾಗಿ ರೂ 7000 ರೂ. ಹಣವನ್ನು ಪಡೆದಿದ್ದರು. ಗುರುವಾರ ಕಿನ್ನಿಗೊಳಿ ಪಟ್ಟಣ ಪಂಚಾಯತ್ನ ಜೂನಿಯರ್ ಇಂಜಿನಿಯರ್ ನಾಗರಾಜು 30,000 ರೂ. ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ 15,000 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎ ನಟರಾಜ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕ ಅಮಾನುಲ್ಲಾಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಕೆ.ಎನ್, ಚಂದ್ರಶೇಖರ್ ಸಿ.ಎಲ್ ಮತ್ತು ಸಿಬಂದಿ ಟ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬೆಳ್ತಂಗಡಿ: ದಂಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು!
ಬೆಳ್ತಂಗಡಿ: ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಶಿಪಟ್ನ ಗ್ರಾಮದ ಉರ್ದುಗುಡ್ಡೆ ಎಂಬಲ್ಲಿ ಸಂಭವಿಸಿದೆ.
ಸ್ಥಳೀಯ ನಿವಾಸಿಗಳಾದ ನೊಣಯ್ಯ ಪೂಜಾರಿ (63) ಹಾಗೂ ಅವರ ಪತ್ನಿ ಬೇಬಿ (46) ಮಾಡಿಕೊಂಡವರು. ಆತ್ಮಹತ್ಯೆತಮ್ಮ ಮನೆಯ ಸಮೀಪದ ಕಾಡಿನಲ್ಲಿ ಇವರಿಬ್ಬರೂ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ನೊಣಯ್ಯ ಪೂಜಾರಿ ಕಳೆದ ಐದು ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗಲ್ಲಿದ್ದರು. ಇದುವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ.
ನೋಣಯ್ಯ ಪೂಜಾರಿಗೆ ಇದು ಎರಡನೇ ಮದುವೆಯಾಗಿದ್ದು, ಅವರ ಮೊದಲ ಪತ್ನಿ ಹತ್ತು ವರ್ಷದ ಹಿಂದೆ ಮೃತಪಟ್ಟಿದ್ದರು. ಕೆಲವು ವರ್ಷಗಳ ಹಿಂದೆ ಅವರು ಬೇಬಿಯನ್ನು ವಿವಾಹವಾಗಿದ್ದರು. ಮೊದಲನೆ ಪತ್ನಿಗೆ ಐವರು ಪುತ್ರರು, ಓರ್ವ ಪುತ್ರಿ ಇದ್ದಾರೆ ಎಂದು ತಿಳಿದು ಬಂದಿದೆ.
.