ಕರಾವಳಿ ಟಾಪ್ ನ್ಯೂಸ್
– ಕುಂದಾಪುರ: ಪಿಕಪ್ ಡಿಕ್ಕಿ: ಬಸ್ ಪಲ್ಟಿ: 8 ಮಂದಿಗೆ ಗಾಯ
– ಪುತ್ತೂರು: ಎರಡು ಬೈಕ್ ಗಳ ಮಧ್ಯೆ ಡಿಕ್ಕಿ: ಸವಾರರಿಬ್ಬರಿಗೂ ಗಾಯ
– ಪುತ್ತೂರು: ತಾಲೂಕು ಕಚೇರಿಯ ಕನಕರಾಜ್ ಇನ್ನಿಲ್ಲ
– ಕೋಟಾ: ನಾಯಿಯನ್ನು ಹೊತ್ತುಕೊಂಡು ಹೋದ ಚಿರತೆ!
– ಮಂಗಳೂರು: ಅಂಬ್ಯುಲೆನ್ಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ,ರೋಗಿ ಮೃತ್ಯು
ಕುಂದಾಪುರ: ಕುಂದಾಪುರದಿಂದ ಕೊಲ್ಲೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೆಂದು ಇಡೂರು-ಕುಂಜಾಡಿ ಬಳಿಯ ಇಡೂರು ಜನ್ನಲ್ ಎಂಬಲ್ಲಿ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ನಡೆದಿದೆ
ಕುಂದಾಪುರದಿಂದ ಕೊಲ್ಲೂರಿಗೆ ತೆರಳುತ್ತಿದ್ದ ವಿಜಯಲಕ್ಷ್ಮೀ ಬಸ್ ಇಡೂರು ಜನ್ನಲ್ ಎಂಬಲ್ಲಿ ಕೆಂಪು ಮೆಣಸು ಸಾಗಾಟದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ ಈ ಅಪಘಾತದಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 5 ಮಂದಿಯನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಇಬ್ಬರನ್ನು ಕುಂದಾಪುರ ನಗರದ ಸರಕಾರಿ ಆಸ್ಪತ್ರೆ ಹಾಗೂ ಗಂಭೀರ ಗಾಯಗೊಂಡ ಪಿಕಪ್ ವಾಹನ ಚಾಲಕನನ್ನು ಮಣಿಪಾಲದ ಕೆ ಎಂ ಸಿ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು: ಎರಡು ಬೈಕ್ ಗಳ ಮಧ್ಯೆ ಡಿಕ್ಕಿ: ಸವಾರರಿಬ್ಬರಿಗೂ ಗಾಯ
ಪುತ್ತೂರು: ಪುತ್ತೂರು ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸರ್ವೆಯಲ್ಲಿ ಸೆ.26ರಂದು ಎರಡು ಬೈಕ್ ಗಳ ಮಧ್ಯೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಸೋಂಪಾಡಿ ನಿವಾಸಿ ಎಂಬುವರು ಚಲಾಯಿಸುತ್ತಿದ್ದ ಬೈಕ್ ಮತ್ತು ವಿರುದ್ಧ ದಿಕ್ಕಿನಿಂದ ಸರ್ವೆ ದೋಳಗೊತ್ತು ನಿವಾಸಿ ಶಶಿಧರ್ ಎಸ್.ಡಿ ಎಂಬವರು ಚಲಾಯಿಸಿದ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ.ಘಟನೆಯಿಂದ ಬೈಕ್ ಸವಾರಿಬ್ಬರಿಗೂ ಗಾಯವಾಗಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಗಳಿಗೂ ಹಾನಿ ಉಂಟಾಗಿದೆ. ಸ್ಥಳೀಯ ರಿಕ್ಷಾ ಚಾಲಕರು ಅಪಘಾತ ಸಂಭವಿಸಿದ ವೇಳೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರ ಮುತ್ತು ತಾಲೂಕು ಕಚೇರಿಯ ಕನಕರಾಜ್ ಇನ್ನಿಲ್ಲ
ಪುತ್ತೂರು: ಮೂಲತಃ ಚಾಮರಾಜನಗರ ನಿವಾಸಿ, ಇಲ್ಲಿನ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಕನಕರಾಜ್ (49 ವ.) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿದ್ದ ಅವರು ಅದಕ್ಕೆ ಮೊದಲು ಎನ್.ಸಿ.ಆರ್.ಸಿ.ಆರ್. ಶಾಖೆಯಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಇದಕ್ಕೆ ಮೊದಲು ಬೆಟ್ಟಂಪಾಡಿ ಗ್ರಾಮದ ವಿ.ಎ. ಆಗಿದ್ದರು.
ಬುಧವಾರ ರಾತ್ರಿ ಕನಕರಾಜ್ ಅವರಿಗೆ ಊಟದ ಬಳಿಕ ವಾಂತಿಯಾಗಿದ್ದು, ಆಸ್ಪತ್ರೆಗೆ ಕರೆ ತರಲಾಗಿತ್ತು. ಅಷ್ಟರಲ್ಲಿ ಹೃದಯಾಘಾತಕ್ಕೆ ಒಳಗಾಗಿ, ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಕಳೆದ ಹಲ ವರ್ಷಗಳಿಂದ ಪುತ್ತೂರಿನಲ್ಲಿ ವಾಸವಾಗಿದ್ದ ಕನಕರಾಜ್ ಅವರು ಅಪಾರ ಸಂಖ್ಯೆಯ ಸ್ನೇಹಿತರನ್ನು ಸಂಪಾದಿಸಿದ್ದರು. ನಿಗರ್ವಿಯಾಗಿದ್ದ ಅವರು, ನೆರವಿನ ಅವಶ್ಯಕತೆ ತೋರಿದಲ್ಲಿ ಕೈ ಚಾಚಿ ತನ್ನ ಶಕ್ತಿ ಮೀರಿ ನೆರವು ನೀಡಿದ ಹಲವು ದೃಷ್ಟಾಂತಗಳಿವೆ. ಒಂದರ್ಥದಲ್ಲಿ ಅವರು ಪುತ್ತೂರಿನ ಮುತ್ತು ಆಗಿದ್ದರು. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಕೋಟಾ: ನಾಯಿಯನ್ನು ಹೊತ್ತುಕೊಂಡು ಹೋದ ಚಿರತೆ!
ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರ ನೈಲಾಡಿಯಲ್ಲಿ ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಬುಧವಾರ ಮುಂಜಾನೆ ನಡೆದಿದೆ*.
ನೈಲಾಡಿ ಸದಾಶಿವ ಕುಲಾಲ್ ಅವರ ಮನೆಯ ಅಂಗಳಕ್ಕೆ ನುಗ್ಗಿದ ಚಿರತೆಯೊಂದು ಮನೆಯ ಸಾಕು ನಾಯಿಯನ್ನು ಕ್ಷಣಾರ್ಧದಲ್ಲಿ ಹೊತ್ತು ಕೊಂಡು ಹೋಗಿದ್ದು ಇದನ್ನು ಕಂಡು ಮನೆಯವರು ಭಯಭೀತರಾಗಿದ್ದಾರೆ. ಚಿರತೆ ಬಂದು ನಾಯಿಯನ್ನು ಹೊತ್ತುಕೊಂಡು ಹೋಗುವ ದ್ರಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಹಿಂದಿನಿಂದಲೂ ಚಿರತೆ ಕಾಟ ವಿಪರೀತ ಆಗಿದ್ದು ಈ ಘಟನೆಯಿಂದ ಜನರಲ್ಲಿ ಭೀತಿ ಹುಟ್ಟಿಸಿದೆ.
ಮಂಗಳೂರು: ಅಂಬ್ಯುಲೆನ್ಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ,ರೋಗಿ ಮೃತ್ಯು!
ಮಂಗಳೂರು: ನಗರದ ಹತ್ತಿರ ಅಂಬ್ಯುಲೆನ್ಸ್ ವಾಹನವೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಮಂಗಳೂರು ಹೊರವಲಯದ ಪಡೀಲ್ ನಲ್ಲಿ ಸಂಭವಿಸಿದೆ.
ಅಪಘಾತದಲ್ಲಿ ಅಂಬ್ಯುಲೆನ್ಸ್ ನಲ್ಲಿದ್ದ ರೋಗಿ ಸಾವನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಹಳೆನರೇಂಕಿ ನಿವಾಸಿ ದಾಸಪ್ಪ ರೈ ಎಂದು ತಿಳಿದುಬಂದಿದೆ. ಇವರನ್ನು ಪುತ್ತೂರಿನ ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ಈ ಅಂಬ್ಯುಲೆನ್ಸ್ ಮೂಲಕ ಕರೆತರಲಾಗುತ್ತಿತ್ತು.
ಪಡೀಲ್ ಸಮೀಪ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ಭೀಕರತೆಗೆ ಅಂಬ್ಯುಲೆನ್ಸ್ ನಲ್ಲಿದ್ದ ರೋಗಿ ಸಾವನಪ್ಪಿದ್ದಾರೆ.
ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.