ಮೂಡುಬಿದಿರೆ ನ್ಯೂ ವೈಬ್ರೆಂಟ್ ಪಿಯು ಕಾಲೇಜಲ್ಲಿ ಉಪನ್ಯಾಸ
– ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಡಾ.ವೃಂದಾ ಬೆಡೇಕರ್ ವಿಶೇಷ ಅರಿವು
– ವಿಭಿನ್ನ ಕಾರ್ಯಕ್ರಮ, ಉಪನ್ಯಾಸದ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ
NAMMUR EXPRESS NEWS
ಮೂಡುಬಿದಿರೆ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ಮಹಿಳಾ ಕಲ್ಯಾಣ ಸಮಿತಿಯ ವತಿಯಿಂದ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿನಿಯರಿಗೆ “ಆರೋಗ್ಯ ಮತ್ತು ಶುಚಿತ್ವ” ಎಂಬ ವಿಷಯದ ಕುರಿತು ವಿ-ಪ್ರೇರಣಾ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿಯ ಪ್ರಸನ್ನ ಕಾಲೇಜ್ ಆಫ್ ಆಯುರ್ವೇದ ಮತ್ತು ಹಾಸ್ಪಿಟಲ್ ಪ್ರಾಧ್ಯಾಪಕಿ ಡಾ. ವೃಂದಾ ಬೆಡೇಕರ್ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡುತ್ತಾ, ದೈನಂದಿನ ಬದುಕಿನಲ್ಲಿ ಸ್ವಚ್ಛತೆ ಅತ್ಯಗತ್ಯ. ವೈಯಕ್ತಿಕ ಸ್ವಚ್ಛತೆಯಿಂದ ಮಾತ್ರ ತಾವು ಉತ್ತಮ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಹೇಳಿದರು.
ವಾತಾವರಣದಲ್ಲಿ ಉಷ್ಣತೆ ಕಡಿಮೆಯಾದಾಗ ಸೂಕ್ಷ್ಮಾಣು ಜೀವಿಗಳು ಬೆಳೆಯುತ್ತವೆ. ತಾವು ಈ ಸಂದರ್ಭದಲ್ಲಿ ವೈಯಕ್ತಿಕ ಸ್ವಚ್ಛತೆಯ ಕಡೆಗೆ ಗಮನಹರಿಸದಿದ್ದಾಗ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗಿ ಬೇರೆ ಬೇರೆ ಕಾಯಿಲೆಗಳಿಗೆ ನೀವು ತುತ್ತಾಗಬಹುದು. ಆದ್ದರಿಂದ ಆದಷ್ಟು ನೀವು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಮ್ಮ ಜೀವನದಲ್ಲಿ ಹದಿಹರೆಯದ ವಯಸ್ಸು ಬಹಳ ಅಮೂಲ್ಯವಾದದ್ದು. ಈ ವಯಸಿನಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿವರ್ತನೆಯನ್ನು ಹೊಂದುವ ಹಂತವಾಗಿರುವುದರಿಂದ ತಾವೆಲ್ಲರೂ ಶುಚಿತ್ವದ ಕಡೆಗೆ ಹೆಚ್ಚಿನ ಗಮನವನ್ನು ವಹಿಸಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಿಸ್ಪಿ ಹಾಗೂ ಪ್ರಾಂಶುಪಾಲರಾದ ಡಾ.ಎಸ್.ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಸುಭಾಷ್ ಝಾ, ಚಂದ್ರಶೇಖರ ರಾಜೇ ಅರಸ್, ಯೋಗೇಶ್ ಬೆಡೇಕರ್, ಮೆಹಬೂಬ ಬಾಷಾ, ಶರತ್ ಗೋರೆ, ಉಪಪ್ರಾಂಶುಪಾಲೆ ಡಾ. ರಶ್ಮಿ ಅರಸ್, ಕಾಲೇಜು ಮಹಿಳಾ ಕಲ್ಯಾಣ ಸಮಿತಿಯ ಸಂಯೋಜಕಿ ಶಾಂಭವಿ ಗೋರೆ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಅಪರ್ಣ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರದ ಉಪನ್ಯಾಸಕಿ ರೂಪಶ್ರೀ ವಂದಿಸಿದರು.