ಮಂಗಳೂರು ಬಳ್ಳಾಲ್ಬಾಗ್ ಅ. 12ಕ್ಕೆ ಪಿಲಿ ನಲಿಕೆ!!
* ಎಕ್ಕಾರ್ ಪಿಲಿ,ಅಮ್ಮನ ಸೇವೆಯೇ ಗುರಿ!
* ಬಂಟ್ವಾಳದಲ್ಲಿ ಯುವತಿಯೇ ಬ್ಲ್ಯಾಕ್ ಟೈಗರ್
* ಕುಂದಾಪುರ ಹುಲಿ ವೇಷಧಾರಿಗಳಿಗೆ ಕೆಂಪು ಬಟ್ಟೆ ಕಡ್ಡಾಯ!
* ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!
NAMMUR EXPRESS NEWS
ಮಂಗಳೂರು: ದಸರಾ ಸಡಗರದ ಮಧ್ಯೆ ನಡೆಯಲಿರುವ ಹುಲಿ ವೇಷದ ಅಬ್ಬರಕ್ಕೆ ಈ ಬಾರಿ ತಾರಾ ಮೆರುಗು ಆಕರ್ಷಣೆ ಹುಟ್ಟುಹಾಕಿದೆ.
ಅ. 12ರಂದು ಬಳ್ಳಾಲ್ಬಾಗ್ನಲ್ಲಿ ನಡೆಯಲಿರುವ ಹುಲಿವೇಷದ ಪೂರ್ವಭಾವಿಯಾಗಿ ಹಮ್ಮಿಕೊಳ್ಳುವ “ಊದುಪೂಜೆ’ಗೆ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಆಗಮಿಸಲಿದ್ದಾರೆ ಎನ್ನಲಾಗಿದೆ.
ಅ. 12ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿರುವ “ಪಿಲಿ ನಲಿಕೆ’ಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಶಿವಂ ದುಬೆ ಅವರಲ್ಲದೇ ಬಾಲಿವುಡ್ ನಟ ಅಹನ್ ಶೆಟ್ಟಿ, ನಟರಾದ ರಿಷಭ್ ಶೆಟ್ಟಿ, ರಾಜ್ ಬಿ.ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಎಕ್ಕಾರ್ ಪಿಲಿ,ಅಮ್ಮನ ಸೇವೆಯೇ ಗುರಿ
ಬಜಪೆ: ಎಕ್ಕಾರಿನ ಸಮಸ್ತ ಜನರ ಭಕ್ತಿ ಭಾವದ ಪ್ರತೀಕವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಾಗುವ ನವರಾತ್ರಿಯ ವೈಭವದ ಎಕ್ಕಾರ್ ಪಿಲಿ ಮೆರವಣಿಗೆಗೆ ಈಗ 66 ವರ್ಷ.
1958ರಲ್ಲಿ ಆರಂಭಗೊಂಡ ದಸರಾ ಮೆರವಣಿಗೆ ಪ್ರತಿ ವರ್ಷವೂ ನವರಾತ್ರಿಯ ಏಳನೇ ದಿನ, ಮೂಲಾ ನಕ್ಷತ್ರ-ಶಾರದಾ ಪೂಜೆಯಂದೇ ನಡೆಯುತ್ತಿದೆ.ಎಕ್ಕಾರು ಶ್ರೀ ಗೋಪಾಕೃಷ್ಣ ಭಜನ ಮಂದಿರದಿಂದ ಹೊರಟು ಗ್ರಾಮ ದೈವ ಶ್ರೀ ಕೊಡಮಣಿತ್ತಾಯ ದೈವದ ಗೋಪುರ ಎದುರು ಪ್ರಾರ್ಥಿಸಿ ಕಟೀಲು ಕ್ಷೇತ್ರಕ್ಕೆ ತೆರಳಿದ್ದು, ಈ ಬಾರಿ ಅ. 9ರಂದು ಈ ಮೆರವಣಿಗೆ ನಡೆಯದಿದೆ.. ಅದಕ್ಕಾಗಿ 60ರಷ್ಟು ಹುಲಿಗಳು, ನಾನಾ ವೇಷಗಳೊಂದಿಗೆ ಊರಿನ ಜನರು ಸಜ್ಜಾಗಿದ್ದಾರೆ.
ಬಂಟ್ವಾಳದಲ್ಲಿ ಯುವತಿಯೇ ಬ್ಲ್ಯಾಕ್ ಟೈಗರ್
ಬಂಟ್ವಾಳ: ಬಂಟ್ವಾಳದ ಕುಟುಂಬವೊಂದು ಕಳೆದ ಆರೇಳು ದಶಕಗಳಿಂದ ನವರಾತ್ರಿಯ ಸಂದರ್ಭದಲ್ಲಿ ಹುಲಿ ವೇಷದ ಸೇವೆ ನೀಡುತ್ತಾ ಬಂದಿದೆ. ಆ ಕುಟುಂಬದ ಹೆಚ್ಚಿನವರು ವೇಷ ಹಾಕುತ್ತಾರೆ, ಅದರಲ್ಲಿ ಆ ಯುವತಿ ಬ್ಲ್ಯಾಕ್ ಟೈಗರ್ ಆಗಿ ಎಲ್ಲರ ಮನ ಗೆದ್ದಿದ್ದಾರೆ.
ಇದು ಬಂಟ್ವಾಳದ ಭಂಡಾರಿಬೆಟ್ಟಿನ ರತ್ನಾಕರ ಸಾಲ್ಯಾನ್ ಅವರ ಕುಟುಂಬದ ಕಥೆ. ಬ್ಲ್ಯಾಕ್ ಟೈಗರ್ ಆಗಿ ಮಿಂಚುತ್ತಿರುವುದು ಅವರ ಪುತ್ರಿ 22 ವರ್ಷದ ಪೂಜಾ. ತನ್ನ 6ನೇ ವಯಸ್ಸಿನಲ್ಲೇ ಹುಲಿ ವೇಷ ಹಾಕಲು ಶುರು ಮಾಡಿದ ಪೂಜಾ ಈಗ ಹೊಸತನದಿಂದ ಸೈ ಅನಿಸಿಕೊಂಡಿದ್ದಾರೆ.
ಕುಂದಾಪುರದಲ್ಲಿ ಹುಲಿ ವೇಷಧಾರಿಗಳಿಗೆ ಕೆಂಪು ಬಟ್ಟೆ ಕಡ್ಡಾಯ!
ಕುಂದಾಪುರ: ಹುಲಿ ವೇಷ ಕರಾವಳಿಯ ವಿಶೇಷತೆಯೇನೋ ಹೌದು. ಆದರೆ, ಇದರಲ್ಲೂ ಬೇರೆ ಬೇರೆ ಭಾಗಗಳು ಅನನ್ಯತೆಯನ್ನು ಕಾಪಾಡಿಕೊಂಡಿವೆ. ಮಂಗಳೂರಿನ ನವರಾತ್ರಿ ಹುಲಿಯ ವೇಷವೇ ಬೇರೆ, ಉಡುಪಿಯ ಅಷ್ಟಮಿ ಹುಲಿಗಳ ಅಲಂಕಾರವೇ ಬೇರೆ. ಅದೇ ಕುಂದಾಪುರ ಭಾಗದ ಹುಲಿಗಳು ಇನ್ನೂ ವಿಶಿಷ್ಟ. ಕುಂದಾಪ್ರ ಹುಲಿಗಳು ಈಗ ಅಪರೂಪವಾಗುತ್ತಿದ್ದರೂ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವು ತಂಡಗಳು ಪ್ರಯತ್ನದಲ್ಲಿವೆ.
ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!
ಬಂಟ್ವಾಳ: ಹುಲಿ ವೇಷದ ತಾಸೆಯ ಪೆಟ್ಟು ಕೇಳಿದರೆ ಸಾಕು ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಒಂದೆರಡು ಸ್ಟೆಪ್ ಹಾಕಬೇಕು ಎಂಬಷ್ಟು ಹುಚ್ಚು ಹಿಡಿಸುತ್ತದೆ. ನವರಾತ್ರಿ ಸಂದರ್ಭ ಸಾಕಷ್ಟು ಹುಲಿ ತಂಡಗಳು ಪ್ರದರ್ಶನ ನೀಡುತ್ತವೆ. ಇದಕ್ಕೆ ಅನುಭವಿಗಳೇ ಸಾರಥಿಗಳು. ಆದರೆ ಪೊಳಲಿಯಲ್ಲಿ 17 ವರ್ಷದ ಬಾಲಕನೋರ್ವ ಸ್ನೇಹಿತರನ್ನು ಕೂಡಿಕೊಂಡು ಗರುಡ ಫ್ರೆಂಡ್ಸ್ ಹುಲಿವೇಷ ತಂಡ ಕಟ್ಟಿದ್ದಾನೆ. ಅದರ 2ನೇ ವರ್ಷದ ತಿರುಗಾಟಕ್ಕೆ ಈಗ ವೇದಿಕೆ ಅಣಿಯಾಗಿದೆ.