ಮಂಗಳೂರು: ಮಂಗಳೂರಲ್ಲಿ ಮತ್ತೆ ಮೂವರು ಸಮುದ್ರಪಾಲು!
– ಸಮುದ್ರ ತೀರದಲ್ಲಿ ಹುಚ್ಚಾಟ, ಕೊಚ್ಚಿಹೋದ ಜೀವ!
– ಕಾವಲು ಪಡೆ ಪೊಲೀಸ್ ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದೇ ಈಜಲು ತೆರಳಿದ ಯುವಕರು
NAMMUR EXPRESS NEWS
ಮಂಗಳೂರು: ಬೆಂಗಳೂರಿನಿಂದ ಬೀಚ್ ಪ್ರವಾಸಕ್ಕೆ ಬಂದಿದ್ದ ಮೂವರು ಸಮುದ್ರ ಪಾಲಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಸುರತ್ಕಲ್ನ ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಎಎಂಸಿ ಇಂಜಿನಿಯರಿoಗ್ ಕಾಲೇಜಿನ ವಿದ್ಯಾರ್ಥಿಗಳಾದ ಮಂಜುನಾಥ್, ಶಿವಕುಮಾರ್ ಹಾಗೂ ಸತ್ಯವೇಲು ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ಮುಗಿಸಿ ಕೆಲಸದ ಕಾರಣಕ್ಕೆ ಮಂಗಳೂರಿಗೆ ಬಂದಿದ್ದ ನಾಲ್ವರು ಯುವಕರು ಈಜಬೇಡಿ ಅಂತ ಕರಾವಳಿ ಕಾವಲು ಪಡೆ ಪೊಲೀಸ್ ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದೇ ಈಜಲು ಮುಂದಾಗಿದ್ದರು. ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದ ಬೀದರ್ ಜಿಲ್ಲೆಯ ಪರಮೇಶ್ವರ್, ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿಯ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್ ಹಾಗೂ ಬೆಂಗಳೂರಿನ ಸತ್ಯವೇಲು ಎಂಬವರು ಈಜಾಡಲು ನೀರಿಗೆ ಇಳಿದಿದ್ದಾರೆ. ಆ ಸಂದರ್ಭದಲ್ಲಿ ಮಂಜುನಾಥ್, ಶಿವಕುಮಾರ್ ಹಾಗೂ ಸತ್ಯವೇಲು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಪರಮೇಶ್ವರ್ ಅಪಾಯದಿಂದ ಪಾರಾಗಿದ್ದಾರೆ. ಶಿವಕುಮಾರ್, ಸತ್ಯವೇಲು ಮತ್ತು ಮಂಜುನಾಥ್ ಅವರ ಮೃತದೇಹ ಜೆಟ್ಟಿಯ ಬಲಭಾಗದ ಮೂಲೆಯಲ್ಲಿ ಪತ್ತೆಯಾಗಿದೆ. ಮೃತದೇಹಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.