ಮಂಗಳೂರಲ್ಲಿ ಬಾಲಕಿಯ ಕೊಲೆ!?
– ಚಿಕ್ಕಪ್ಪನ ಮನೆಗೆ ಬಂದು ಸಾವು: ಪೊಲೀಸ್ ತನಿಖೆ
– ಮಂಗಳೂರು ಹೊರವಲಯದ ಜೋಕಟ್ಟೆಯಲ್ಲಿ ಘಟನೆ
– ಕಾರವಾರ-ಗೋವಾ ಸಂಪರ್ಕ ಸೇತುವೆ ಕುಸಿತ: ನದಿಗೆ ಬಿದ್ದ ಲಾರಿ!
NAMMUR EXPRESS NEWS
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೃತದೇಹ ಪತ್ತೆಯಾದ ಘಟನೆ ನಗರದ ಹೊರವಲಯದ ಜೋಕಟ್ಟೆಯಲ್ಲಿ ನಡೆದಿದೆ.
ಮೃತ ಬಾಲಕಿಯು ಬೆಳಗಾವಿ ಮೂಲದವಳಾಗಿದ್ದು, ನಾಲ್ಕು ದಿನಗಳ ಹಿಂದೆ ಚಿಕಿತ್ಸೆಯ ಹಿನ್ನೆಲೆಯಲ್ಲಿ ಜೋಕಟ್ಟೆಯಲ್ಲಿನ ತನ್ನ ದೊಡ್ಡಪ್ಪ ಹನುಮಂತು ಮನೆಗೆ ಬಂದು ನೆಲೆಸಿದ್ದಳು.
ಹನುಮಂತು ಮತ್ತು ಕುಟುಂಬ ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಮಂಗಳವಾರ ಮನೆಯಲ್ಲಿದ್ದ ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದ್ದು, ಬಾಲಕಿ ಮಾತ್ರ ಇದ್ದಳು. ಈ ವೇಳೆ ಊರಿನಿಂದ ಬಾಲಕಿಯ ತಾಯಿ ನೆರೆ ಮನೆಗೆ ಕರೆ ಮಾಡಿ ಬಾಲಕಿಗೆ ಫೋನ್ ಕೊಡುವಂತೆ ಹೇಳಿದ್ದಳು. ಬಾಲಕಿಗೆ ಫೋನ್ ಕೊಡಲು ನೆರೆಮನೆಯವರು ತೆರಳಿದ ವೇಳೆ ಬಟ್ಟೆಯಿಂದ ಕತ್ತು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಉಪಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಕೈ ನೋವಿನ ಚಿಕಿತ್ಸೆ ಪಡೆಯಲು ಬಂದಿದ್ದಳು!
ಕಳೆದ 4 ದಿನಗಳ ಹಿಂದೆ ತಮ್ಮನ ಮಗಳಾದ 13 ವರ್ಷದ ಬಾಲಕಿಯು ಕೈನೋವಿನ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದು ಉಳಿದುಕೊಂಡಿದ್ದಳು. ಈ ಘಟನೆ ಇದೀಗ ಮಂಗಳೂರನ್ನು ಬೆಚ್ಚಿ ಬೀಳಿಸಿದೆ. ಪೊಲೀಸ್ ತನಿಖೆ ನಡೆಯುತ್ತಿದೆ.
ಕಾರವಾರ-ಗೋವಾ ಸಂಪರ್ಕ ಸೇತುವೆ ಕುಸಿತ: ನದಿಗೆ ಬಿದ್ದ ಲಾರಿ!
ಉತ್ತರ ಕನ್ನಡ: ಕಾರವಾರ ನಗರದ ಕೋಡಿಭಾಗ್ ನಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ 41 ವರ್ಷಗಳ ಹಳೆ ಸೇತುವೆ ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಒಮ್ಮಿಂದ ಒಮ್ಮೆಲೆ ಕುಸಿದು ಬಿದ್ದ ಘಟನೆ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿ ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಿದ್ದ ಸೇತುವೆ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ಲಾರಿ ಚಾಲನೆ ಮಾಡ್ತಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಬಾಲ್ ಮುರುಗನ್(37) ಸಮೇತ ಖಾಲಿ ಟ್ರಕ್ ನದಿಗೆ ಬಿದ್ದಿದೆ. ಕಾಳಿ ನದಿಯಲ್ಲಿ ಬಿದ್ದ ಲಾರಿಯ ಮುಂಭಾಗದ ಗ್ಲಾಸ್ ಒಡೆದು ಕ್ಯಾಬಿನ್ ಮೇಲೆ ನಿಂತು ಚಾಲಕ ಬಾಲ ಮುರುಗನ್ ರಕ್ಷಣೆಗೆ ಕೂಗಿದ್ದರು. ಸದ್ಯ ಬೀಟ್ ಪೊಲೀಸರ ಮುಂಜಾಗೃತೆಯಿಂದ ಲಾರಿ ಚಾಲಕನ ಪ್ರಾಣ ಉಳಿದಿದೆ.
ಪೊಲೀಸರ ತಂಡ ನದಿಗೆ ಇಳಿದು ಚಾಲಕನನ್ನು ರಕ್ಷಿಸಿದ್ದಾರೆ. ಸ್ಥಳೀಯ ಮೀನುಗಾರರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಬೋಟ್ ಮೂಲಕ ಲಾರಿ ಚಾಲಕನನ್ನ ರಕ್ಷಿಸಿದ್ದಾರೆ. ಗೋವಾದಿಂದ ಹುಬ್ಬಳ್ಳಿ ಕಡೆ ಮಧ್ಯರಾತ್ರಿ ತೆರಳುತಿದ್ದ ತಮಿಳುನಾಡು ಮೂಲದ ಟ್ರಕ್ ಸೇತುವೆ ಮೇಲೆ ತೆರಳುತಿದ್ದಂತೆ ಮೊದಲ ಭಾಗ ಕುಸಿದಿದೆ ನಂತರ ಮೂರು ಕಡೆ ಕುಸಿದಿದೆ. ಸದ್ಯ ಟ್ರಕ್ ಚಾಲಕನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.