ಮಂಗಗಳ ನಿಗೂಢ ಸರಣಿ ಸಾವು!
– ಮುನಿಯಾಲು ಶಾಲಾ ಪರಿಸರದಲ್ಲಿ ಆತಂಕ
– ಸಾಂಕ್ರಾಮಿಕ ಖಾಯಿಲೆ ಹರಡುವ ಭೀತಿ!
– ಸರಣಿ ಸಾವಿಗೆ ಕಾರಣ ವಿಷ ಪ್ರಾಶನ!?
NAMMUR EXPRESS NEWS
ಹೆಬ್ರಿ: ಹೆಬ್ರಿ ತಾಲೂಕಿನ ಮುನಿಯಾಲು ಪರಿಸರದಲ್ಲಿ ಕಳೆದ 15 ದಿನಗಳಿಂದ ಮಂಗಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವ ವಿಚಾರ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಮುನಿಯಾಲು ಸರ್ಕಾರಿ ಪ್ರಾಥಮಿಕ ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ ಹತ್ತಾರು ಮಂಗಗಳು ಏಕಾಎಕಿ ಬಿದ್ದು ಹೊರಳಾಡಿ ಸಾವನ್ನಪುತ್ತಿದ್ದು,ಮಂಗಗಳ ನಿಗೂಢ ಸರಣಿ ಸಾವಿಗೆ ನಿಖರವಾದ ಕಾರಣ ಪತ್ತೆಯಾಗಿಲ್ಲ. ಸುತ್ತಮುತ್ತಲಿನಲ್ಲಿ ಓಡಾಡುವ ಮಂಗಗಳು ಹಠಾತ್ತಾಗಿ ಮನೆಯ ಅಂಗಳಕ್ಕೆ ಬಂದು ಒದ್ದಾಡಿ ಪ್ರಾಣ ಬಿಡುತ್ತಿದ್ದು ಮಂಗಗಳ ಸಾವಿನಿಂದ ಸಾಂಕ್ರಾಮಿಕ ಖಾಯಿಲೆ ಹರಡುವ ಭೀತಿ ಎದುರಾಗಿದೆ. ಮೃತ ಮಂಗಗಳ ನಿಗೂಢ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಕಳೆದ ಹತ್ತಾರು ವರ್ಷಗಳಿಂದ ಮುನಿಯಾಲು ಪೇಟೆ ಹಾಗೂ ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ ಮಂಗಗಳ ಓಡಾಡುತ್ತಿದ್ದು ಈವರೆಗೂ ಮಂಗಗಳು ಸಾವನ್ನಪ್ಪಿದ ಉದಾಹರಣೆಗಳಿಲ್ಲ. ಇದೀಗ ಕಳೆದ ಎರಡು ವಾರಗಳಿಂದ ದಿನಕ್ಕೆ ಕನಿಷ್ಠ 2ರಿಂದ 3 ಮಂಗಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ಹೇಳುತ್ತಿದ್ದು, ಈವರೆಗೂ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ರಾಜಗಯದ ಹಲವು ಜಿಲ್ಲೆಗಳಲ್ಲಿ ಮಂಗನ ಖಾಯಿಲೆ ಕಾಣಿಸಿಕೊಂಡಿದೆ. ಇದಲ್ಲದೇ ಮಂಗಗಳು ಸಾವನ್ನಪ್ಪಿರುವ ಪರಿಸರದಲ್ಲೇ ಪ್ರಾಥಮಿಕ ಶಾಲೆ ಇರುವ ಹಿನ್ನಲೆಯಲ್ಲಿ ಮಕ್ಕಳಿಗೆ ಮಂಗಗಳ ಮಲ ಮೂತ್ರ ಅಥವಾ ಕುಡಿಯುವ ನೀರಿನ ಮೂಲಕ ಸಾಂಕ್ರಾಮಿಕ ಖಾಯಿಲೆ ಹರಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಂಗಗಳ ಸಾವಿನ ರಹಸ್ಯ ಬಯಲಿಗೆಳೆದು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.
ವಿಷಪ್ರಾಶ ದಿಂದ ಮಂಗಗಳ ಸಾವು?:
ಯಾವುದೇ ಪ್ರಾಣಿ ರೋಗಗ್ರಸ್ಥವಾದಾಗ ಹೊಟ್ಟೆ ಆಹಾರ ಸೇವಿಸದೇ ನಿಧಾನವಾಗಿ ರೋಗ ಉಲ್ಬಣಗೊಂಡು ನಿತ್ರಾಣಗೊಂಡು ಸಾವನ್ನಪ್ಪುತ್ತವೆ, ಆದರೆ ಇಲ್ಲಿನ ಮಂಗಗಳು ಓಡಾಡಿಕೊಂಡು ಇರುವಾಗಲೇ ಹಠಾತ್ತಾಗಿ ಬಿದ್ದು ಸಾವನ್ನಪ್ಪುತ್ತಿದ್ದು, ಅವುಗಳಿಗೆ ವಿಶಪ್ರಾಶನವಾಗಿರುವ ಸಾಧ್ಯತೆಯೂ ಇರಬಹುದೆಂದು ಹೆಸರು ಹೇಳಲಿಚ್ಚಿಸದ ಶಾಲಾ ಮಕ್ಕಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಂತೋಷ್ ಅಮೀನ್, ಅಧ್ಯಕ್ಷ ವರಂಗ ಗ್ರಾ.ಪಂ ಮುನಿಯಾಲು ಶಾಲಾ ವಠಾರದಲ್ಲಿ ಮಂಗಗಳ ಸರಣಿ ಸಾವಿನ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಜತೆ ಸಭೆ ನಡೆಸಲಾಗಿದ್ದು ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾವನ್ನಪ್ಪಿರುವ ಮಂಗಗಳ ಶವದ ಮರಣೋತ್ತರ ಪರೀಕ್ಷೆ ನಡೆಸಿ ಸ್ಯಾಂಪಲ್ಗಳನ್ನು ವೈರಾಲಜಿ ಲ್ಯಾಬ್ ಗೆ ರವಾನಿಸಲಾಗಿದೆ, ಮಂಗಗಳ ಶವವನ್ನು ಸರ್ಕಾರದ ನಿಯಮಾವಳಿ ಪ್ರಕಾರ ಪಂಚಾಯಿತಿ ಸಿಬ್ಬಂದಿ ಮೂಲಕ ಬೆಂಕಿಯಲ್ಲಿ ಸುಡಲಾಗಿದೆ. ವೈರಾಲಜಿ ವಿಭಾಗದ ವರದಿ ಬಂದ ಬಳಿಕ ಮಂಗಗಳ ಸಾವಿನ ಕಾರಣ ತಿಳಿಯಲಿದೆ ಎಂದು ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಅಮೀನ್ ಅಂಡಾರು ಹೇಳಿದ್ದಾರೆ.