ಟ್ರಾಫಿಕ್ ಜಾಮ್ ಮಾಡಿ ನಡುರಸ್ತೆಯಲ್ಲೇ ನಮಾಜ್: ಭಾರೀ ವಿವಾದ!
– ಮಂಗಳೂರಲ್ಲಿ ನಡೆದ ಘಟನೆ ವೈರಲ್: ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ
– ಏನಿದು ಘಟನೆ…ಸಂಘಟನೆಗಳ ಆಕ್ರೋಶ
– ಮನೆಗೆ ನುಗ್ಗಿದ ಕಾಳಿಂಗ: ಬೆಳ್ತಂಗಡಿಯಲ್ಲಿ ಘಟನೆ
NAMMUR EXPRESS NEWS
ಮಂಗಳೂರು: ನಡುರಸ್ತೆಯಲ್ಲೇ ನಮಾಜ್ ಮಾಡಿರುವ ಆರೋಪದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಮಾಡಲಾಗಿದ್ದ ನಮಾಜ್ನ ವಿಡಿಯೋ ಎನ್ನಲಾಗಿದೆ. ಈ ರೀತಿ ನಮಾಜ್ ಮಾಡಿರುವುದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ಅಡ್ಡಿಯಾಗಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಆದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಈ ವಿಡಿಯೋ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇನ್ನು ಸಂಸದ ನಳಿನ್ ಕುಮಾರ್ ಕಟೀಲು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಮಂಗಳೂರಿನ ಹೃದಯಭಾಗದಲ್ಲಿ ಹಾಡುಹಗಲೇ ರಸ್ತೆಯನ್ನು ಬ್ಲಾಕ್ ಮಾಡಿ, ನಮಾಜು ಮಾಡುತ್ತಾ, ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಅಡ್ಡಿಪಡಿಸುವ ಮಟ್ಟಕ್ಕೆ ಪರಿಸ್ಥಿತಿ ತಲುಪಿರುವುದು ರಾಜ್ಯದ ಕಾಂಗ್ರೆಸ್ ಸರಕಾರದ ಸ್ವೇಚ್ಚಾಚಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ನಾವು ಕಾನೂನು, ನೀತಿ, ನಿಯಮ ಯಾವುದನ್ನು ಕ್ಯಾರ್ ಮಾಡುವುದಿಲ್ಲ ಎನ್ನುವ ಧೋರಣೆ ಕೆಲವರಲ್ಲಿ ಸೃಷ್ಟಿಯಾಗಲು ಕಾಂಗ್ರೆಸ್ ಸರಕಾರ ಅಂತವರ ಮೇಲೆ ತೋರಿಸುತ್ತಿರುವ ವಿಶೇಷ ‘ಪ್ರೀತಿ’ ಯೇ ಕಾರಣ ಎಂದು ಟೀಕಿಸಿದ್ದಾರೆ. ಇನ್ನೊಂದೆಡೆ, ರಸ್ತೆಯಲ್ಲೇ ನಮಾಜ್ ಮಾಡಿರುವುದನ್ನು ಶ್ರೀರಾಮ ಸೇನೆಯು ಖಂಡಿಸಿದ್ದು, ಇಂತಹ ಕೃತ್ಯಗಳನ್ನು ಪೊಲೀಸರು ತಡೆಯಬೇಕೆಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಹೇಳಿದ್ದಾರೆ.
ಮನೆಯೊಳಗೆ ಮಂಚದಡಿಯಲ್ಲಿತ್ತು12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ!
ಮನೆಯೊಳಗೆ ಬಂದು ಆತಂಕ ಸೃಷ್ಟಿಸಿದ ಬೃಹತ್ ಗಾತ್ರ ಕಾಳಿಂಗ ಸರ್ಪವೊಂದನ್ನು ಯಶಸ್ವಿಯಾಗಿ ಸೆರೆಹಿಡಿದು ಕಾಡಿಗೆ ಬಿಟ್ಟ ಘಟನೆ ಬೆಳ್ತಂಗಡಿಯ ಬಂಗಾಡಿ ಇಂದಬೆಟ್ಟುವಿನಲ್ಲಿ ನಡೆದಿದೆ. ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರ ಕಾಳಿಂಗ ಸರ್ಪ ಮನೆಯ ಮಂಚದ ಅಡಿಯಲ್ಲಿತ್ತು. ಮನೆಮಂದಿ ಮನೆಯ ಒಂದು ಭಾವನ್ನು ಮಾತ್ರ ತಮ್ಮ ವಾಸ್ತವ್ಯಕ್ಕೆ ಬಳಸುತ್ತಿದ್ದರು. ಮತ್ತೊಂದು ಪಾರ್ಶ್ವದ ಕೋಣೆಯ ಮಂಚದ ಅಡಿಯಲ್ಲಿ ಕಾಳಿಂಗ ಸರ್ಪ ಇತ್ತು. ಕೋಣೆಯ ಬಾಗಿಲು ತೆಗೆದಾಗ ಮಂಚದಡಿಯಲ್ಲಿ ಶಬ್ದ ಕೇಳಿಬಂದಿದೆ. ಏನೆಂದು ಮಂಚದಡಿ ನೋಡಿದಾಗ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದೆ. ನಂತರ ಮನೆಯವರು ಉರಗ ರಕ್ಷಕ ಅಶೋಕ್ ಲಾಯಿಲ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕ ಅಶೋಕ್ ಲಾಯಿಲ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.