ನಮ್ಮೂರ್ ಎಕ್ಸ್ ಪ್ರೆಸ್: ಕರಾವಳಿ ನ್ಯೂಸ್
ಉಡುಪಿಯಲ್ಲಿ ಹೆಚ್ಚಾಗಿದೆ ರೌಡಿಸಂ!
– ರಸ್ತೆಯಲ್ಲೇ ಗ್ಯಾಂಗ್ ವಾರ್: ಪೊಲೀಸ್ ಭಯವೇ ಇಲ್ವಾ?
– ಕಾಸರಗೋಡು: ನೀರುಪಾಲಾದ ಇಬ್ಬರು ಮಕ್ಕಳು!
– ಉಡುಪಿ: ಖ್ಯಾತ ವಕೀಲ ಚೇರ್ಕಾಡಿ ವಿಜಯ ಹೆಗ್ಡೆ ವಿಧಿವಶ
– ಬಂಟ್ವಾಳ: ಚರಂಡಿಯಲ್ಲಿ ಪ್ರಾಣಿ ಅವಶೇಷಗಳು ಪತ್ತೆ!
– ಉಡುಪಿ: ತಲವಾರಿನಿಂದ ಯುವಕನ ಕೊಲೆಗೆ ಯತ್ನ
– ಕಾಪು: ರಸ್ತೆಯಲ್ಲಿ ಹೊಡೆದಾಟ: ಆರು ಮಂದಿ ವಿರುದ್ಧ ಕೇಸ್
NAMMUR EXPRESS NEWS
ಕಾಸರಗೋಡು: ಅವಳಿ ಸಹೋದರರು ಕಲ್ಲಿನ ಕ್ವಾರಿಯಲ್ಲಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಕಾಸರಗೋಡಿನ ಚೀಮೇನಿ ಕನಿಯಾಂದಲದಲ್ಲಿ ನಡೆದಿದೆ.
ಚೀಮೇನಿ ಕನಿಯಾಂದಲದಲ್ಲಿ ರಾಧಾಕೃಷ್ಣ ಅವರ ಮಕ್ಕಳಾದ ಸುದೇವ್(10) ಹಾಗೂ ಶ್ರೀದೇವಿ(10) ಮೃತರು. ಚೀಮೇನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದರು.
ಮಧ್ಯಾಹ್ನ ಇಬ್ಬರು ಕೂಡ ಆಟವಾಡುವುದಕ್ಕೆಂದು ಸೈಕಲ್ನಲ್ಲಿ ತೆರಳಿದ್ದು, ಸಂಜೆಯಾದರೂ ಮನೆಗೆ ಆಗಮಿಸದ ಹಿನ್ನಲೆಯಲ್ಲಿ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಕ್ವಾರಿ ಬಳಿ ಸೈಕಲ್ ಪತ್ತೆಯಾಗಿದೆ. ಸಂಶಯಗೊಂಡು ತೀವ್ರವಾಗಿ ಶೋಧಾ ಕಾರ್ಯ ನಡೆಸಿದಾಗ ಕ್ವಾರಿಯಲ್ಲಿ ಇಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಮೃತದೇಹವನ್ನು ಮೇಲೆತ್ತಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.
– ಉಡುಪಿ: ಖ್ಯಾತ ವಕೀಲ ಚೇರ್ಕಾಡಿ ವಿಜಯ ಹೆಗ್ಡೆ ವಿಧಿವಶ
ಉಡುಪಿಯಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದ ಚೇರ್ಕಾಡಿ ವಿಜಯ ಹೆಗ್ಡೆ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರೂ ಆಗಿದ್ದ ವಿಜಯ ಹೆಗ್ಡೆ ಅವರು ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಚುನಾವಣಾ ಏಜೆಂಟ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ, ಓತರ್ವ ಪುತ್ರ ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
– ಬಂಟ್ವಾಳ: ಚರಂಡಿಯಲ್ಲಿ ಪ್ರಾಣಿ ಅವಶೇಷಗಳು ಪತ್ತೆ!
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್ ಕಲ್ಲಡ್ಕ ರಸ್ತೆಯ ಮಧ್ಯೆ ನರಹರಿ ಪರ್ವತದ ಬಳಿ ಚರಂಡಿಯಲ್ಲಿ ಮಾಂಸಕ್ಕಾಗಿ ಉಪಯೋಗಿಸಿದ ಪ್ರಾಣಿಯ ಅವಶೇಷಗಳು ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಹಲವಾರು ಅನುಮಾನಗಳು ಸೃಷ್ಟಿಯಾಗಿದ್ದು, ಪೋಲೀಸ್ ಇಲಾಖೆ ತನಿಖೆಗೆ ಮುಂದಾಗಿದೆ. ಈಗಾಗಲೇ ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರು ಸ್ಥಳಕ್ಕೆ ಧಾವಿಸಿದ್ದು,ಮೇಲ್ನೋಟಕ್ಕೆ ಇದು ಕೋಳಿ ಹಾಗೂ ಕುರಿ,ಆಡುಗಳ ಅವಶೇಷಗಳಂತೆ ಕಾಣುತ್ತಿದ್ದು, ಪ್ರಸ್ತುತ ಗೋಹತ್ಯೆಯ ಆರೋಪಗಳು ಕೂಡ ಇರುವುದರಿಂದ ಪಶುಸಂಗೋಪನೆ ಇಲಾಖೆಯ ವೈದ್ಯರ ಮೂಲಕ ಅವಶೇಷಗಳ ಪರೀಕ್ಷೆ ನಡೆಸಿ ,ಯಾವ ಪ್ರಾಣಿ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪೋಲೀಸರು ಸಿದ್ದತೆ ನಡೆಸಿದ್ದಾರೆ. ಇತ್ಯರ್ಥಪಡಿಸಲು ಸೂಚಿಸಿದ್ಧಾರೆ ಎನ್ನಲಾಗಿದೆ.
– ಉಡುಪಿ:ತಲವಾರಿನಿಂದ ಯುವಕನ ಕೊಲೆಗೆ ಯತ್ನ
ಉಡುಪಿ : ಸುಶಿಕ್ಷಿತರ ಜಿಲ್ಲೆ ಉಡುಪಿಯಲ್ಲಿ ಇದೀಗ ಪುಡಿ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ಗ್ಯಾಂಗ್ ವಾರ್ ಪ್ರಕರಣದ ಬಳಿಕ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ತಂಡವೊಂದು ಇನ್ನೊಂದು ತಂಡದ ಮೇಲೆ ಹಲ್ಲೆಗೆ ಯತ್ನಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ಜೂನ್ 15ರ ರಾತ್ರಿ ನಡೆದಿದೆ ಎಂದು ಹೇಳಲಾಗಿದೆ. ಪುಂಡರು ತಾವು ಕೃತ್ಯವೆಸಗಿರುವ ದೃಶ್ಯವನ್ನು ವೀಡಿಯೋ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದು, ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ, ಒಟ್ಟಾರೆ ಸುಶಿಕ್ಷಿತರ ನಾಡಾಗಿದ್ದ ಉಡುಪಿ ಜಿಲ್ಲೆಯಲ್ಲಿ ಇದೀಗ ಗ್ಯಾಂಗ್ ವಾರ್ ಗಳ ಸುದ್ದಿ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ಗ್ಯಾಂಗ್ ವಾರ್ನಿಂದ ಉಡುಪಿ ನಗರದ ಜನತೆ ಭಯ ಭೀತರಾಗಿದ್ದಾರೆ.
– ಬಂಟ್ವಾಳ: ರಸ್ತೆಯಲ್ಲಿ ಮಗುಚಿ ಬಿದ್ದ ಪಿಕಪ್
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಮಧ್ಯೆ ತುಂಬೆ ತಿರುವಿನಲ್ಲಿ ಹೆಚ್ಚುತ್ತಿರುವ ಅಪಘಾತದಿಂದ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ. ಎರಡು ವಾರಗಳ ಅಂತರದಲ್ಲಿ ಎರಡು ವಾಹನಗಳು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮಗುಚಿ ಬಿದ್ದ ಘಟನೆ ನಡೆದಿದೆ. ಕಳೆದ ವಾರ ಎಲ್.ಪಿ.ಜಿ ಗ್ಯಾಸ್ ಟ್ಯಾಂಕ್ ಹೊಂದಿದ ಲಾರಿಯೊಂದು ರಸ್ತೆಗೆ ಪಲ್ಟಿಯಾಗಿದೆ. ಇದೀಗ ಇಂದು ಬೆಳಿಗ್ಗೆ ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ವಾಹನವೊಂದರ ಇಂಜಿನ್ ನ್ನು ಕೊಂಡು ಹೋಗುತ್ತಿದ್ದ ಪಿಕಪ್ ವಾಹನ ತುಂಬೆ ತಿರುವಿನಲ್ಲಿ ಪಲ್ಟಿಯಾಗಿದೆ. ಅವೈಜ್ಞಾನಿಕ ರೀತಿಯ ಹೆದ್ದಾರಿಯ ನಿರ್ಮಾಣಗೊಂಡ ಬಳಿಕ ಈ ಜಾಗದಲ್ಲಿ ಅನೇಕ ವಾಹನಗಳು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯಾಗಿರುವುದು ಕಂಡು ಬಂದಿದೆ.
– ಕಾಪು: ರಸ್ತೆಯಲ್ಲಿ ಹೊಡೆದಾಡುತ್ತಿದ್ದ ಆರು ಮಂದಿ ವಿರುದ್ಧ ಪ್ರಕರಣ
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಳ್ಳುತ್ತಿದ್ದ ಆರು ಮಂದಿಯ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು ಪೊಲೀಸ್ ಠಾಣೆಯ ಎಎಸ್ಐ ರವೀಶ್ ಹೊಳ್ಳ ಸಿಬ್ಬಂದಿಗಳ ಜತೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಂಜೆ 6.30 ಗಂಟೆಯ ವೇಳೆ ಸಾರ್ವಜನಿಕ ಸ್ಥಳದಲ್ಲಿ 6 ಜನ ಪುರುಷರು ಸೇರಿಕೊಂಡು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಕೈ-ಕೈ ಮಿಲಾಯಿಸಿಕೊಂಡು ಹೊಡೆದಾಡುತ್ತಿರುವುದನ್ನು ಗಮನಿಸಿದ್ದರು. ಕೂಡಲೇ ಸ್ಥಳಕ್ಕೆ ಹೋಗಿ ಜಗಳವನ್ನು ತಡೆಯಲು ಮುಂದಾಗಿದ್ದು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದು ಈ ವೇಳೆ 6 ಜನರಲ್ಲಿ 4 ಜನರು ಓಡಿ ಹೋಗಿದ್ದರು. ಉಳಿದ ಇಬ್ಬರನ್ನು ವಿಚಾರಿಸಲಾಗಿದ್ದು ಅವರು ಸ್ಥಳೀಯ ಬಾರ್ವೊಂದರಲ್ಲಿ ಕುಡಿದು ಯಾವುದೋ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆಸಿ ಪರಸ್ಪರ ಜಗಳ ಮಾಡುತ್ತಿದ್ದುದಾಗಿ ತಿಳಿಸಿದ್ದರು. ಅದರಂತೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವಂತೆ ಹೊಡೆದಾಡಿಕೊಳ್ಳುತ್ತಿದ್ದ ಹಂಜಾ ಶೇಖ್, ತುಫೇಲ್ ಹಾಗೂ ಸ್ಥಳದಿಂದ ಓಡಿ ಹೋಗಿರುವ ಮಸಾಬ್ ಉಚ್ಚಿಲ, ನಮೀತ್ ಉಚ್ಚಿಲ, ಸುಜಿತ್ ಉಚ್ಛಿಲ, ಕೃಷ್ಣರಾಜ ಕರ್ಕೇರ ಮೂಳೂರು ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.