ಯಕ್ಷಗಾನಕ್ಕೆ ರಾಷ್ಟೀಯ ಮನ್ನಣೆ!
– ಯಕ್ಷಗಾನ ಥೀಮ್ ಹೊಂದಿರುವ ಅಂಚೆ ಚೀಟಿಗೆ ಸಮ್ಮತಿ
– ಜನವರಿ 25ಕ್ಕೆ ಮಂಗಳೂರಿನಲ್ಲಿ ಲೋಕಾರ್ಪಣೆ
NAMMUR EXPRESS NEWS
ಮಂಗಳೂರು : ಯಕ್ಷಗಾನ ಥೀಮ್ ಹೊಂದಿರುವ ವಿಶೇಷ ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರ ಹೊರತರುತ್ತಿದ್ದು, ಜ. 25ರಂದು ಮಂಗಳೂರಿನಲ್ಲಿ ಇದು ಬಿಡುಗಡೆಯಾಗಲಿದೆ. ಈ ಮೂಲಕ ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನಕ್ಕೆ ಕೇಂದ್ರ ಸರ್ಕಾರ ರಾಷ್ಟ್ರೀಯ ಮನ್ನಣೆ ಕೊಡುತ್ತಿದೆ. ಈಗಾಗಲೇ ಕೂಚಿಪುಡಿ, ಭರತನಾಟ್ಯ ಮೊದಲಾದ ಕಲೆಗಳ ಬಗ್ಗೆ ಅಂಚೆ ಚೀಟಿ ಬಿಡುಗಡೆಯಾಗಿದೆ. ಯಕ್ಷಗಾನ ಕವಿ ನಂದಳಿಕೆ ಮುದ್ದಣ್ಣ (ಲಕ್ಷ್ಮೀನಾರಾಯಣಪ್ಪ) ಅವರ ಅಂಚೆ ಚೀಟಿ 2017ರಲ್ಲಿ ಹೊರಬಂದಿತ್ತು. 2023ರ ಡಿಸೆಂಬರ್ ನಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಅಬ್ಬಕ್ಕ ದೇವಿ ಹೆಸರಿನ ಅಂಚೆ ಚೀಟಿಯೂ ಬಿಡುಗಡೆಗೊಂಡಿದೆ. ಯಕ್ಷಗಾನ ಮೇರು ಕಲಾವಿದರಾದ ಕರಾವಳಿ ಮೂಲದ ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ ಇವರ ಕುರಿತ ಅಂಚೆ ಚೀಟಿಗಳು ಹೊರಬಂದಿವೆ. ಆದರೆ ಯಕ್ಷಗಾನ ಥೀಮ್ ಬಗ್ಗೆ ಅಂಚೆ ಚೀಟಿ ಇದುವರೆಗೆ ಬಂದಿರಲಿಲ್ಲ.
ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಪ್ರಯತ್ನ :
ಯಕ್ಷಗಾನಕ್ಕೆ ರಾಷ್ಟ್ರೀಯ ಮನ್ನಣೆ ಸಿಗಲು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಕಳೆದ ಮೂರು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದರು. ಈ ಹಿಂದೆ ವಿಶೇಷ ಅಂಚೆ ಚೀಟಿಗಳನ್ನು ಅಂಚೆ ಇಲಾಖೆಯೇ ತನ್ನದೇ ಅನುದಾನದಲ್ಲಿ ಹೊರತರುತ್ತಿತ್ತು. ಆದರೆ ಈಗ ಅನುದಾನದ ಅಲಭ್ಯತೆ ಕಾರಣದಿಂದ ಹೊರಗಿನಿಂದ ಅನುದಾನ ನೀಡಿದರೆ ಮಾತ್ರ ವಿಶೇಷ ಅಂಚೆ ಚೀಟಿ ಹೊರತರಲು ಸಾಧ್ಯವಾಗುತ್ತದೆ. ಹೀಗಾಗಿ ನಳಿನ್ ಕೋರಿಕೆ ಮೇರೆಗೆ ಕೇಂದ್ರ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ ಲಿಮಿಟೆಡ್ (ಎಂಆರ್ಪಿಎಲ್ ಅಂಚೆ ಚೀಟಿ ಪ್ರಾಯೋಜನೆ ವಹಿಸಿಕೊಂಡಿದೆ. ಸುಮಾರು 5.36 ಲಕ್ಷ ರೂ. ಮೊತ್ತವನ್ನು ಅಂಚೆ ಇಲಾಖೆಗೆ ಬಿಡುಗಡೆಗೊಳಿಸಿದೆ. ಈ ಮೊತ್ತದಲ್ಲಿ ಸುಮಾರು 5 ಲಕ್ಷದಷ್ಟು ಯಕ್ಷಗಾನ ಥೀಮ್ನ ಅಂಚೆ ಚೀಟಿ ಮುದ್ರಣಗೊಂಡು ಹೊರಬರಲಿದೆ. ಪ್ರತಿ ಅಂಚೆ ಚೀಟಿ 5 ರೂ. ಮುಖಬೆಲೆ ಹೊಂದಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಹೇಗಿರಲಿದೆ ಅಂಚೆ ಚೀಟಿ :
ಯಕ್ಷಗಾನ ಥೀಮ್ನ ಈ ವಿಶೇಷ ಅಂಚೆ ಚೀಟಿಯಲ್ಲಿ ಯಕ್ಷಗಾನದ ರೇಖಾಚಿತ್ರ ಇರಲಿದೆ. ಇದರಲ್ಲಿ ಯಕ್ಷಗಾನದ ತೆಂಕು ಹಾಗೂ ಬಡಗು ಎರಡೂ ತಿಟ್ಟುಗಳಿಗೆ ಸಮಾನ ಪ್ರಾಧಾನ್ಯತೆ ನೀಡುವ ಸಲುವಾಗಿ ಎರಡೂ ತಿಟ್ಟುಗಳ ರೇಖಾಚಿತ್ರ ವಿನ್ಯಾಸವುಳ್ಳ ಚಿತ್ರವನ್ನು ಅಂಚೆ ಚೀಟಿಯಾಗಿ ರೂಪಿಸಲಾಗಿದೆ. ಒಂದು ಬಾರಿ ಮಾತ್ರ ಈ ವಿಶೇಷ ಅಂಚೆ ಚೀಟಿ ಮುದ್ರಣಗೊಳ್ಳುವುದು, ಮರು ಮುದ್ರಣಕ್ಕೆ ಇಲ್ಲಿ ಅವಕಾಶ ಇಲ್ಲ. ಈ ವಿಶೇಷ ಅಂಚೆ ಚೀಟಿ ಹೊರತರುವ ಮೂಲಕ ಕೇಂದ್ರ ಸರ್ಕಾರದ ಗರಿಷ್ಠ ಗೌರವಕ್ಕೆ ಪಾತ್ರವಾಗಿದೆ ಎಂದು ಅರ್ಥ. ಇಂತಹ ಅಂಚೆ ಚೀಟಿಗಳನ್ನು ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಾಹಕರು ಸಂಗ್ರಹಿಸುತ್ತಾರೆ.