ಕುಂದಾಪುರ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು
– ವೈದ್ಯರ ನಿರ್ಲಕ್ಷ್ಯ ಶಿಶುವಿನ ಮರಣಕ್ಕೆ ಕಾರಣವೆಂದು ಸಿಟ್ಟು
– ಆಸ್ಪತ್ರೆ ಮುಂದೆ ಬಿಗುವಿನ ವಾತಾವರಣ
NAMMUR EXPRESS NEWS
ಕುಂದಾಪುರ: ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಹೆರಿಗೆ ಸಂದರ್ಭ ಮರಣಹೊಂದಿದೆ ಎಂದು ಆರೋಪಿಸಿ ಮಹಿಳೆಯ ಸಂಬಂಧಿ ಹಾಗೂ ಸಾರ್ವಜನಿಕರು ಕುಂದಾಪುರದ ಸಾರ್ವಜನಿಕ ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರನ್ನು ಅಮಾನತುಗೊಳಿಸಬೇಕೆಂದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ. ಶಿಶುವನ್ನು ಕಳೆದುಕೊಂಡ ಮಹಿಳೆ ಗಂಗೊಳ್ಳಿ ಗುಡ್ಡಕೇರಿಯ ಜ್ಯೋತಿ ಖಾರ್ವಿ (29) ಎಂದು ತಿಳಿದು ಬಂದಿದೆ. ಶ್ರೀನಿವಾಸ್ ಖಾರ್ವಿ ತನ್ನ ಪತ್ನಿಯನ್ನು ನ. 17 ರಂದು ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಿರುತ್ತಾರೆ. ಅವರನ್ನು ಪರೀಕ್ಷಿಸಿದ ಡಾ. ಚಂದ್ರ ಮೊಗವೀರ ಅವರು ಗರ್ಭಿಣಿ ಮಹಿಳೆ ಅರೋಗ್ಯವಾಗಿದ್ದರೆ ಎಂದು ಹೇಳಿದ್ದರು. ಅದಕ್ಕೆ ಶ್ರೀನಿವಾಸ್ ಖಾರ್ವಿಯು ತನ್ನ ಪತ್ನಿಗೆ ಹೊಟ್ಟೆ ನೋವು ಇರುವುದಾಗಿ ತಿಳಿಸಿ ತಕ್ಷಣ ಸ್ಕ್ಯಾನಿಂಗ್ ಮಾಡಲು ಕೇಳಿಕೊಂಡಿರುತ್ತಾರೆ. ಅದಕ್ಕೆ ವೈದ್ಯರು ಸ್ಕ್ಯಾನಿಂಗ್ ಮಾಡಲು ವೈದ್ಯ ನಾನಾ ನೀವಾ ಎಂದು ಉಡಾಪೆ ಮಾತಾಡಿದ್ದು ಯಾವುದೇ ಕ್ರಮ ವಹಿಸದೆ ಮೂರು ದಿನದ ನಂತರ ಇಂದು (ನ. 20) ಸೋಮವಾರ ಬೆಳಿಗ್ಗೆ ನಾರ್ಮಲ್ ಹೆರಿಗೆ ಮಾಡಿಸುವ ಸಂದರ್ಭ ಮಗು ತಾಯಿಯ ಹೊಟ್ಟೆಯಲ್ಲೇ ಕರಳು ಬಳ್ಳಿ ಸುತ್ತಿಕೊಂಡಿದ್ದು ಇದರಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಹಾಗಾಗಿ ವೈದ್ಯರು ಮಾಡಿದ ನಿರ್ಲಕ್ಷ್ಯದಿಂದ ಮಗು ಮಾತ್ರ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿ ಹಾಗೂ ಸಾರ್ವಜನಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ ವೈದ್ಯ ಚಂದ್ರ ಮೊಗವೀರ ಅವರನ್ನು ತಕ್ಷಣ ಅಮಾನತು ಮಾಡಿ ನಮಗೆ ನ್ಯಾಯ ಕೊಡಬೇಕು ಎಂದು ಪಟ್ಟು ಹಿಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಕುಂದಾಪುರ ತಹಸೀಲ್ದಾರ್ ಶೋಭಾ ಲಕ್ಷ್ಮೀ ಅವರು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನ ಪಟ್ಟರು. ಸಂಪೂರ್ಣ ತನಿಖೆ ಮಾಡಿ ಕ್ರಮ ಕೈಗೊಳ್ಳುದಾಗಿ ಭರವಸೆ ನೀಡಿದರು. ಆದರೂ ಜಗ್ಗದ ಪ್ರತಿಭಟನಾಕಾರರು ಜಿಲ್ಲಾ ಆರೋಗ್ಯಧಿಕಾರಿ ಬರುವವರೆಗೂ ಮಗುವಿನ ಮೃತದೇಹ ಮುಟ್ಟುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ನ್ಯಾಯಕ್ಕಾಗಿ ಪ್ರತಿಭಟನಾಕಾರರಿಗೆ ಸಾಥ್ ನೀಡಿದರು. ಜಿಲ್ಲಾ ಆರೋಗ್ಯಧಿಕಾರಿ ಆಗಮಿಸಿ ಸಂಪೂರ್ಣ ತನಿಖೆ ಮಾಡಿ ವೈದ್ಯರನ್ನು ಅಮಾನತು ಮಾಡುವುದಾಗಿ ಹೇಳಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಪಟ್ಟರು. ಆದರೂ ಸಾಧ್ಯವಾಗಲಿಲ್ಲ ಧರಣಿ ಮುಂದುವರಿಯಿತು.