ಸಿಬಿಐ ಅಧಿಕಾರಿ ಹೆಸರಲ್ಲಿ ಆನ್ ಲೈನ್ ಹಣ ವರ್ಗಾವಣೆ!
– ಕುಂದಾಪುರ: 3.80 ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು
– ಮಂಗಳೂರು: ತಲೆಮರೆಸಿಕೊಂಡಿದ್ದ, ಆರೋಪಿ ಅರೆಸ್ಟ್!
– ಮಂಗಳೂರು:ಅಕ್ರಮ ಮದ್ಯ, ಅವಧಿ ಮೀರಿದ ಬಿಯರ್ ವಶ
– ಸುರತ್ಕಲ್: ನೀರಿನಲ್ಲಿ ಆಡಿ,ಯುವಕನೋರ್ವ ಸಮುದ್ರ ಪಾಲು!
ಮಂಗಳೂರು: ಮಂಗಳೂರು ನಗರದಲ್ಲಿ ಹೆಲ್ಮೆಟ್ ಕಳ್ಳರ ಕಾಟ!
NAMMUR EXPRESS NEWS
ಕುಂದಾಪುರ: ಸಿಬಿಐ ಆಫೀಸರ್ ಎಂದು ಹೇಳಿಕೊಂಡು ವ್ಯಕ್ತಿಯನ್ನು ವಂಚಿಸಿದ ಪ್ರಕರಣ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ನಿವಾಸಿ ಪ್ರವೀಣ್ ಕುಮಾರ್ ವಂಚನೆಗೊಳಗಾದವರು. ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಅ.19ರಂದು ಇವರ ಸಂಚಾರಿ ದೂರವಾಣಿಗೆ ಕರೆ ಬಂದಿದ್ದು ನಿಮ್ಮ ಸಂಚಾರಿ ದೂರವಾಣಿ ಸಂಖ್ಯೆಯನ್ನು 2 ಗಂಟೆಯೊಳಗೆ ಸ್ಥಗಿತಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ 9 ಪ್ರೆಸ್ ಮಾಡುವಂತೆ ತಿಳಿಸಿದ ಮೇರೆಗೆ ಪ್ರೆಸ್ ಮಾಡಿದ್ದಾರೆ. ಕೂಡಲೇ ಅದು ಬೇರೆಯವರಿಗೆ ಕನೆಕ್ಟ್ ಆಗಿದೆ. ನಿಮ್ಮ ಆಧಾರ್ ಕಾರ್ಡ್ ಪ್ರಾಡ್ ಆಗಿದೆ ಎಂದು ತಿಳಿಸಿ ಕೂಡಲೇ ಸಿಬಿಐ ಲೋಗೊ ನಂಬರ್ನಿಂದ ಕರೆಮಾಡಿ ಸಿಬಿಐ ಆಫೀಸರ್ ಎಂದು ಹೇಳಿಕೊಂಡು ಮನಿ ಲ್ಯಾಂಡರಿಂಗ್ನಲ್ಲಿ ನಿಮ್ಮ ಮೇಲೆ ಕೇಸ್ ಆಗಿದ್ದು ನಿಮ್ಮ ದಾಖಲೆ ತೋರಿಸಿ ಎಂದಿದ್ದಾರೆ. ಅದರಂತೆ ಆಧಾರ್ ಕಾರ್ಡ್, ಪಾಸ್ ಪುಸ್ತಕ, ಪಾನ್ ಕಾರ್ಡ್ ಗಳನ್ನು ಇವರು ತೋರಿಸಿದ್ದಾರೆ.
ಅರ್ಧಗಂಟೆಯ ನಂತರ ಕೆನರಾ ಬ್ಯಾಂಕ್ನ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಸಾಬೀತಾಗಿದೆ. ಅದರಂತೆ ಪ್ರವೀಣ್ ಕೆನರಾ ಬ್ಯಾಂಕ್ ಖಾತೆಯಿಂದ 3.80 ಲಕ್ಷ ರೂ. ಆರ್ಟಿಜಿಎಸ್ ಮಾಡಿದ್ದಾರೆ. ನಂತರ ಆತ ವಾಟ್ಸಾಪ್ ವಿಡಿಯೊ ಕಾಲ್ ಮಾಡಿ ನಿಮ್ಮ ಇನ್ನೊಂದು ಬ್ಯಾಂಕ್ಗೆ ಹೋಗಿ ಹಣವನ್ನು ವರ್ಗಾವಣೆ ಮಾಡುವಂತೆ ತಿಳಿಸಿದಾಗ ಅನುಮಾನಗೊಂಡು ಸ್ಥಳೀಯ ಪೊಲೀಸರಿಗೆ ತಿಳಿಸುತ್ತೇನೆ ಎಂದಾಗ ಪೊಲೀಸರು ಏನು ಮಾಡುತ್ತಾರೆ ಎಂದು ಉಡಾಫೆಯಿಂದ ಉತ್ತರ ನೀಡಿದ್ದಾನೆ. ಸಿಬಿಐ ಆಫೀಸರ್ ಎಂದು ಹೇಳಿಕೊಂಡು 3.80 ಲಕ್ಷ ರೂ. ವಂಚಿಸಿದ್ದಾನೆ ಎಂದು ಪ್ರವೀಣ್ ಕುಮಾರ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ತಲೆಮರೆಸಿಕೊಂಡಿದ್ದ, ಆರೋಪಿ ಮಹಮ್ಮದ್ ಸಲೀಂ ಅರೆಸ್ಟ್
ಮಂಗಳೂರು : ಸೈಬರ್ ಇಕೋನಾಮಿಕ್ ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಒಳಪೇಟೆಯ ಸಲೀಂ ಯಾನೆ ಮುಹಮ್ಮದ್ ಸಲೀಂ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು 2019ರಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜಾಮೀನು ಪಡೆದ ಬಳಿಕ ಕಳೆದ ನಾಲ್ಕು ವರ್ಷದಿಂದ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಅ. 22ಕ್ಕೆ ಸೆನ್ ಕ್ರೈಂ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಮಾದೇವ್ ಮಾಂಗ್ ಮತ್ತು ತಿಪ್ಪಾರೆಡ್ಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
* ಮಂಗಳೂರು:ಅಕ್ರಮ ಮದ್ಯ, ಅವಧಿ ಮೀರಿದ ಬಿಯರ್ ವಶ
ಮಂಗಳೂರು: ಬೈಕಂಪಾಡಿಯ ಕೆ.ಎಸ್.ಬಿ.ಸಿ.ಎಲ್ ಡಿಪೋ-2ಕ್ಕೆ ಹಾಸನದಿಂದ ಒಟ್ಟು 1,100 ಪೆಟ್ಟಿಗೆ (10,680 ಲೀ.) ಬಿಯರ್ ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಲಾರಿಯ ಮೂಲಕ ಸರಬರಾಜಾಗಿದ್ದು, ಅಬಕಾರಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆಹಚ್ಚಿ ವಾಹನ ಮತ್ತು ಬಿಯರ್ ಅನ್ನು ಜಫ್ತಿಪಡಿಸಿ ಕೇಸು ದಾಖಲಿಸಲಾಗಿದೆ.
ಅ.14ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕದ ಅಂಗಡಿಯೊಂದರಲ್ಲಿ ಹೋಮ್ ಮೇಡ್ ವೈನ್ ಅನ್ನು ಅಕ್ರಮವಾಗಿ ದಾಸ್ತಾನು ಹೊಂದಿ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 111.750 ಲೀ. ವೈನ್ ಜಪ್ತಿ ಮಾಡಿ ಅಬಕಾರಿ ಇಲಾಖೆಯ ಅ ಧಿಕಾರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅ. 20ರಂದು ಬೈಕಂಪಾಡಿಯಿಂದ ಬಜಪೆಗೆ ಹೋಗುವ ರಸ್ತೆಯ ಕರ್ಕೇರ ಮೂಲ ಸ್ಥಾನದ ಬಳಿ ಯಾವುದೇ ರಹದಾರಿಯಿಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 3.690 ಲೀ. ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ ಎಂದು ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್ ತಿಳಿಸಿದ್ದಾರೆ.
ಸುರತ್ಕಲ್: ನೀರಿನಲ್ಲಿ ಆಡಿ,ಯುವಕನೋರ್ವ ಸಮುದ್ರ ಪಾಲು!
ಸುರತ್ಕಲ್: ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಅ. 22ರಂದು ಸಂಜೆ ಸುರತ್ಕಲ್ ಮುಕ್ಕ ರೆಡ್ ರಾಕ್ ಕಡಲ ಕಿನಾರೆಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ ಪ್ರಜ್ವಲ್ (21) ನೀರು ಪಾಲಾದ ಯುವಕ. ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರ ಜೊತೆ ಅ. 22ರಂದು ಸಂಜೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರ ಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ನಗರದಲ್ಲಿ ಹೆಲ್ಮೆಟ್ ಕಳ್ಳರ ಕಾಟ!
ಮಂಗಳೂರು ನಗರದಲ್ಲಿ ಹೆಲ್ಮೆಟ್ ಕಳವು ಮಾಡಲಾಗುತ್ತಿದ್ದು, ಇದೀಗ ಓರ್ವ ಹೆಲ್ಮೆಟ್ ಕಳ್ಳನ ಕೈ ಚಳಕದ ದೃಶ್ಯ ಸಿಸಿ ಕಾಮರಾದಲ್ಲಿ ಸೆರೆಯಾಗಿದೆ. ನಗರದ ವಾಣಿಜ್ಯ ಕಟ್ಟಡವೊಂದರ ಸಮೀಪ ನಿಲ್ಲಿಸಿದ್ದ ಬೈಕ್ನಲ್ಲಿದ್ದ ಹೊಸ ಹೆಲ್ಮೆಟನ್ನು ಕಳ್ಳ ಕಳವು ಮಾಡಿದ್ದು, ಆತನ ಬಳಿ ಇದ್ದ ಹಳೆಯ ಹೆಲ್ಮೆಟನ್ನು ಬೈಕ್ನ ಮೇಲಿಟ್ಟು ಹೋಗಿದ್ದಾನೆ. ಬಳಿಕ ತಾನು ಬಂದಿದ್ದ ಸ್ಕೂಟರ್ನಲ್ಲಿ ಮರಳಿದ್ದಾನೆ. ಇನ್ನು ಈತ ಇದೇ ರೀತಿ ಹಲವೆಡೆ ಹೆಲ್ಮೆಟ್ ಕದ್ದಿರುವ ಶಂಕೆ ವ್ಯಕ್ತವಾಗಿದೆ.