ವಿದ್ಯುತ್ ನಿಗಮದಿಂದ ತುರ್ತು ಸಹಾಯವಾಣಿ ಓಪನ್!
– ತುರ್ತು ಸಂದರ್ಭದಲ್ಲಿ ಸ್ಪಂದನೆಗೆ ಮೆಸ್ಕಾಂನಿಂದ 2 ಹೊಸ ದೂರವಾಣಿ
– ಕರಾವಳಿ, ಮಲೆನಾಡು ಜನರ ಸ್ಪಂದನೆಗೆ ಸಿದ್ಧ
– ಶಿಥಿಲ ತಂತಿ, ಕಂಬ ಮುರಿದಿದ್ದರೆ, ತುರ್ತು ವೇಳೆ ಕರೆ ಮಾಡಿ…
NAMMUR EXPRESS NEWS
ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಮೆಸ್ಕಾಂ ವ್ಯಾಪ್ತಿಯಲ್ಲಿ ಶಿಥಿಲ ತಂತಿ ಅಥವಾ ಕಂಬ ಮುರಿದು ಗಂಭೀರ ಅಥವಾ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವುದಕ್ಕೆ ಎರಡು ದೂರವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ. ಈ ಕುರಿತ ದೂರುಗಳಿಗೆ ಸಾರ್ವಜನಿಕರು 8277883388 ಹಾಗೂ 0824, 2950953 ಸಂಖ್ಯೆಯನ್ನು ಸಂಪರ್ಕಿಸಬೇಕು. ಇನ್ನುಳಿದಂತೆ ಮೆಸ್ಕಾಂನ ಇತರೆ ಸೇವೆಗಳಿಗೆ ಇಲಾಖೆಯ ಉಚಿತ ಸಹಾಯವಾಣಿಯಾಗಿರುವ 1912 ಹಾಗೂ ಇಲಾಖೆ ಈಗಾಗಲೇ ವ್ಯವಸ್ಥೆಗೊಳಿಸಿರುವ ಸ್ಥಳೀಯ ಕಚೇರಿ ದೂರವಾಣಿಗೆ ಸಂಪರ್ಕ ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದೊಮ್ಮೆ ಶಿಥಿಲ ತಂತಿ, ಕಂಬಗಳು, ದೋಷಪೂರಿತ ವಿದ್ಯುತ್ ಪರಿವರ್ತಕಗಳು ಇಲಾಖೆ ಗಮನಕ್ಕೆ ಬಾರದೆ ಉಳಿದುಕೊಂಡಿದ್ದಲ್ಲಿ, ಸಾರ್ವಜನಿಕರು ಇದನ್ನು ಸ್ಥಳೀಯ ಮೆಸ್ಕಾಂ ಸಿಬ್ಬಂದಿ ಗಮನಕ್ಕೆ ತರಬೇಕು. ಆ ಬಳಿಕವೂ ಸ್ಪಂದನೆ ದೊರೆಯದಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.