1 ರೂ.ಗೆ ಪ್ಯಾಂಟ್, ಶರ್ಟ್ ಆಫರ್ಗೆ ಮುಗಿಬಿದ್ದ ಜನ!
– ಉಪ್ಪಿನಂಗಡಿಯಲ್ಲಿ ಮುಂಜಾನೆ 4ಕ್ಕೆ ಸಾಲುನಿಂತ ಜನ
– 20 ಜನಕ್ಕೆ ಮಾತ್ರ 1 ರೂ.ಗೆ ಬಟ್ಟೆ ನೀಡಿದ ಮಾಲೀಕ
NAMMUR EXPRESS NEWS
ಉಪ್ಪಿನಂಗಡಿ : ‘ಒಂದು ರೂ.ತನ್ನಿ, ಒಂದು ಪ್ಯಾಂಟ್, ಶರ್ಟ್ ಕೊಂಡೊಯ್ಯಿರಿ’ ಎಂಬ ಬಟ್ಟೆ ಅಂಗಡಿಯವನ ಬಕ್ರೀದ್ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಲು ಜನ ನಸುಕಿನ ಜಾವ 4 ಗಂಟೆಯಿಂದಲೇ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಬಸ್ ನಿಲ್ದಾಣದ ಪಕ್ಕದ ಪಂಚಾಯಿತಿ ಸ್ವಾಮ್ಯದ ವಾಣಿಜ್ಯ ಮಳಿಗೆಯಲ್ಲಿರುವ ಒಂದು ಜವಳಿ ಅಂಗಡಿಯಲ್ಲಿ ಗ್ರಾಹಕರನ್ನು ಸೆಳೆಯುವ ಸಲುವಾಗಿ ಈ ಕೊಡುಗೆ ಘೋಷಿಸಲಾಗಿತ್ತು. ಈ ಕೊಡುಗೆ ಜೂನ್ 16ರಂದು ಒಂದು ರು.ನೋಟಿನೊಂದಿಗೆ ಆಗಮಿಸುವ ಮೊದಲ 20 ಗ್ರಾಹಕರಿಗೆ ಮಾತ್ರ ಎಂಬ ಷರತ್ತು ವಿಧಿಸಲಾಗಿತ್ತು.
ಮೊದಲ ಗ್ರಾಹಕರಾಗುವ ಆಸೆಯಿಂದ ನಸುಕಿನ ಜಾವ 4 ಗಂಟೆಗೆ ಎದ್ದು ಬಂದು ಅಂಗಡಿ ಮುಂದೆ ಜನ ನಿಲ್ಲಲಾರಂಭಿಸಿದ್ದಾರೆ. ಮುಂಜಾನೆ 7 ಗಂಟೆಗೆ 20ಕ್ಕೂ ಅಧಿಕ ಮಂದಿ ಸರತಿ ಸಾಲಿನಲ್ಲಿ ನಿಂತಿದ್ದು, ಹಲವು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಗಳ ಸಂಖ್ಯೆಯನ್ನು ಲೆಕ್ಕ ಹಾಕಿ 20 ದಾಟಿರುವುದನ್ನು ದೃಢಪಡಿಸಿಕೊಂಡು ನಿರ್ಗಮಿಸಿದರು. ಇನ್ನು ಕೆಲವರು ತಮಗೂ ದೊರೆಯಬಹುದೆಂದು ಆಸೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಮುಂಜಾನೆ 9 ಗಂಟೆಯ ಸುಮಾರಿಗೆ ಆಗಮಿಸಿದ ಅಂಗಡಿ ಮಾಲಿಕ, ನುಡಿದಂತೆ ಸರತಿ ಸಾಲಿನಲ್ಲಿ ಮೊದಲಾಗಿ ಇದ್ದ 20 ಮಂದಿಗೆ 1 ರು. ಪಡೆದು ಪ್ಯಾಂಟ್, ಶರ್ಟ್ ವಿತರಿಸಿದರು. ಉಳಿದ ಮಂದಿಗೆ ಗ್ರಾಹಕರಾಗಿ ಪ್ಯಾಂಟ್, ಶರ್ಟ್ ಖರೀದಿಸಲು ಅವಕಾಶ ಕಲ್ಪಿಸಿದರು.