ಪಾರ್ಟ್ ಟೈಮ್ ಜಾಬ್’ ಆಮಿಷ: 6.32 ಲಕ್ಷರೂ. ವಂಚನೆ!
– ಮಂಗಳೂರಲ್ಲಿ ಆನ್ಲೈನ್ ಮೋಸಕ್ಕೆ ಮತ್ತೊಬ್ಬರ ಹಣ ಹೋಯ್ತು
– ಉಡುಪಿ: ಮಲ್ಪೆ ಬೀಚ್ನಲ್ಲಿ ಅಪರಿಚಿತ ಶವ ಪತ್ತೆ
– ಮಂಗಳೂರು: ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
NAMMUR EXPRESS NEWS
ಮಂಗಳೂರು: ಇನ್ಸ್ಟಾಗ್ರಾಂ ಖಾತೆಗೆ ಪಾರ್ಟ್ಟೈಮ್ ಜಾಬ್ ಬಗ್ಗೆ ಸಂದೇಶ ಕಳುಹಿಸಿ ಅನಂತರ 6.32 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ಇನ್ಸ್ಟಾಗ್ರಾಂ ಖಾತೆಗೆ ಸೆ. 9ರಂದು ಅಪರಿಚಿತ ಕಂಪೆನಿಯ ಹೆಸರಿನಲ್ಲಿ ಒಂದು ಜಾಹೀರಾತು ಬಂದಿತ್ತು. ಅದರಲ್ಲಿದ್ದ ಲಿಂಕ್ ಅನ್ನು ಒತ್ತಿದಾಗ ಪ್ರತೀದಿನ ಹಣ ತೊಡಗಿಸಿ ಟಾಸ್ಕ್ ಪೂರ್ಣಗೊಳಿಸಿ ಹಣ ಗಳಿಸುವ ಬಗ್ಗೆ ತಿಳಿಸಲಾಗಿತ್ತು. ಅದರಂತೆ ಮೊದಲು ತೆರಿಗೆ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ 1,66,348 ರೂ. ವರ್ಗಾಯಿಸಿದ್ದರು. ಸೆ. 10ರಂದು 1,000 ರೂ. ವರ್ಗಾಯಿಸಿದ್ದರು. ಬಳಿಕ ಹಂತ-ಹಂತವಾಗಿ ಸೆ. 18ರ ವರೆಗೆ ಒಟ್ಟು 6,32,218 ರೂ. ವರ್ಗಾಯಿಸಿದ್ದಾರೆ.
ಮಲ್ಪೆ ಬೀಚ್ನಲ್ಲಿ ಅಪರಿಚಿತ ಶವ ಪತ್ತೆ
ಮಲ್ಪೆಯ ಬಡಾನಿಡಿಯೂರು ಆಸರೆ ಬೀಚ್ ಬಳಿಯ ಕಡಲ ತೀರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ ಬೂದು ಬಣ್ಣದ ಬರ್ಮುಡ ಹಾಕಿಕೊಂಡಿದ್ದರು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ: ಇಬ್ಬರ ಬಂಧನ
ಮಂಗಳೂರು: ‘ಡ್ರಗ್ಸ್ ಫ್ರಿ ಮಂಗಳೂರು’ ಮಾಡುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಮುಂದುವರಿಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿಯ ಪಿ.ಎಸ್. ಅಬ್ದುಲ್ ಅಜೀಜ್ ಯಾನೆ ಅಜೀಜ್(31) ಮತ್ತು ಸುರತ್ಕಲ್ ನ ಅಕ್ಷಿತ್ ಕುಮಾರ್(26) ಬಂಧಿತರು.
ಬಂಧಿತರಿಂದ ಒಟ್ಟು 35 ಗ್ರಾಂ ತೂಕದ ರೂ. 1,75,000 ಮೌಲ್ಯದ ಎಂಡಿಎಂಎ ಮಾದಕ ವಸ್ತು ಮೊಬೈಲ್ ಫೋನ್ ಗಳು-2, ನಗದು ರೂ. 600 ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 1,96,000 ಆಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.