ಹಬ್ಬುತ್ತಿದೆ ಕರಾವಳಿ ಡ್ರಗ್ಸ್ ಜಾಲ!
– ಮಾದಕ ವಸ್ತು ನಶೆಗೆ ವಿದ್ಯಾರ್ಥಿಗಳ ಬದುಕು ಬಲಿ
– ಶಿಕ್ಷಣ ಸಂಸ್ಥೆಗಳಲ್ಲಿ ಆ್ಯಂಟಿ ಡ್ರಗ್ ಕಮಿಟಿ ಸ್ಥಾಪನೆ
– 15 ನೈಟ್ ಪಾರ್ಟಿಗಳ ಮೇಲೆ ಪೊಲೀಸ್ ದಾಳಿ!
NAMMUR EXPRESS NEWS
ಉಡುಪಿ/ ಮಂಗಳೂರು: ಮಾದಕ ದ್ರವ್ಯದಂತಹ ಸಮಾಜ ಘಾತಕ ಚಟುವಟಿಕೆಗಳು ಇದೀಗ ಕರಾವಳಿಯನ್ನು ಟಾರ್ಗೆಟ್ ಮಾಡಿವೆ. ಇಲ್ಲಿನ ಯುವ ಜನತೆಯನ್ನು ಮಾಧಕತೆಯ ನಶೆಗೆ ತಳ್ಳಿ ಅವರ ಬದುಕನ್ನು ಹಾಳು ಮಾಡುತ್ತಿವೆ. ಈ ಹಿನ್ನೆಲೆ ರಾಜ್ಯ ಗೃಹ ಸಚಿವರ ಸಲಹೆಯಂತೆ ಸದ್ಯದಲ್ಲೇ ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಆ್ಯಂಟಿ ಡ್ರಗ್ ಕಮಿಟಿಯನ್ನು ಸ್ಥಾಪನೆ ಮಾಡಲು ಸಿದ್ಧತೆ ನಡೆದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಜಿಪಂ ಸಿಇಓ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳ ಸಭೆ ಬಳಿಕ ಈ ಸಮಿತಿ ಸ್ಥಾಪನೆ ಆಗಲಿದೆ.
ಅನೇಕ ಪೋಷಕರು ಕೂಡ ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿರುವ ತಮ್ಮ ಮಕ್ಕಳ ಬಗ್ಗೆಯೂ ಮಾಹಿತಿ ನೀಡಿದ್ದು ಪ್ರಕರಣ ತನಿಖೆ ಹಂತದಲ್ಲಿವೆ. ಗಾಂಜಾ, ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ನೀಡಬೇಕು. ಹೆಸರನ್ನು ಬಹಿರಂಗ ಪಡಿಸದೆ ಸಮಾಜ ಘಾತಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಮುಂದೆ ಬರಬೇಕು. ನಿಮ್ಮ ಹೆಸರನ್ನು ನಾವು ಕೂಡ ಗೌಪ್ಯವಾಗಿರಿಸಿಕೊಳ್ಳುತ್ತೇವೆ. ಯಾವುದೇ ಮಾಹಿತಿ ಇದ್ದರೂ ನನ್ನ ಮೊಬೈಲ್ಗೆ ಕಳುಹಿಸಿಕೊಡಬಹುದು. ಈ ಕಾರ್ಯಚರಣೆಯಲ್ಲಿ ಸಾರ್ವಜನಿಕರ ಪಾತ್ರ ಕೂಡ ಅಗತ್ಯವಾಗಿ ಬೇಕಾಗಿದೆ ಎಂದು ಉಡುಪಿ ಎಸ್ಪಿ ತಿಳಿಸಿದ್ದಾರೆ.
15 ನೈಟ್ ಪಾರ್ಟಿಗಳಿಗೆ ದಾಳಿ!
ಉಡುಪಿ ಜಿಲ್ಲೆಯಲ್ಲಿ ಡ್ರಗ್ಸ್ ಜಾಲದ ಬೇರನ್ನು ಹುಡುಕುವ ಕಾರ್ಯ ಮಾಡಲಾಗುತ್ತಿದೆ. ಮಣಿಪಾಲದಲ್ಲಿ ಮಧ್ಯರಾತ್ರಿ 12ಗಂಟೆ ನಂತರ ಪಾರ್ಟಿಗಳು ನಡೆಯುತ್ತಿರುತ್ತವೆ. ಕಳೆದ ನಾಲೈದು ತಿಂಗಳಲ್ಲಿ ಒಟ್ಟು ಇಂತಹ 15 ಪಾರ್ಟಿಗಳಿಗೆ ದಾಳಿ ನಡೆಸಲಾಗಿದೆ. ಅಲ್ಲಿ ಸಿಕ್ಕಿದ ವಿದ್ಯಾರ್ಥಿಗಳನ್ನು ಹಿಡಿದುಕೊಂಡು ಈ ಜಾಲವನ್ನು ಭೇದಿಸುತ್ತಿದ್ದೇವೆ ಪೊಲೀಸರು ಮಾಹಿತಿ ನೀಡಿದ್ದಾರೆ.