ಶಿರಸಿಯಲ್ಲಿ ಕ್ರಿಯೇಟಿವ್ ಸಂಸ್ಥೆಯಿಂದ ಪ್ರೇರಣಾ ಶಿಬಿರ
– ಮಕ್ಕಳಿಗೆ ಭವಿಷ್ಯದ ಶಿಕ್ಷಣದ ಪಾಠ ಮಾಡಿದ ಶಿಕ್ಷಕರು
– 300ಕ್ಕೂ ಹೆಚ್ಚು ಎಸ್. ಎಸ್. ಎಲ್. ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಜರ್
– ಕ್ರಿಯೇಟಿವ್ ಸಂಸ್ಥಾಪಕರಾದ ಗಣಪತಿ ಭಟ್, ಗಣಪತಿ ಕೆ.ಎಸ್ ಅವರಿಗೆ ಗೌರವ ಸಮರ್ಪಣೆ
NAMMUR EXPRESS NEWS
ಶಿರಸಿ: ಶಾಲಾ ಶಿಕ್ಷಣ ಇಲಾಖೆ ಶಿರಸಿ ಹಾಗೂ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರೇರಣಾ ಶಿಬಿರ ಒಂದು ವಾರಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಯಿತು. ಜ.29ರಿಂದ ಫೆ.3ರವರೆಗೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ಅಧ್ಯಯನ ಹಾಗೂ ಕಲಿಕಾ ಗುಣಮಟ್ಟ ಹೆಚ್ಚಿಸುವ ಸಲುವಾಗಿ ನಡೆಸಿದ ಶಿಬಿರದಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ, ಶಿರಸಿ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಶಿಬಿರ – 2024 ಆಯೋಜಿಸಲಾಗಿದ್ದು ವಿವಿಧ ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಪ್ರೇರಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಲಯನ್ಸ್ ಅಧ್ಯಕ್ಷರಾದ ಪ್ರಭಾಕರ್ ಹೆಗಡೆ, ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಎಂ. ಎಚ್. ನಾಯಕ್, ಕ್ರಿಯೇಟಿವ್ ಪಿಯು ಕಾಲೇಜಿನ ಪ್ರಿನ್ಸಿಪಾಲರು, ಸಂಸ್ಥಾಪಕರಲ್ಲಿ ಒಬ್ಬರಾದ ವಿದ್ವಾನ್ ಗಣಪತಿ ಭಟ್, ಸಹ ಸಂಸ್ಥಾಪಕರಾದ ಗಣಪತಿ ಕೆ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಏಳು ದಿನಗಳ ಕಾಲ ಎಸ್ ಎಸ್ ಎಲ್ ಸಿ ಮಕ್ಕಳಿಗೆ 625 ಅಂಕಗಳಿಗೆ 625 ಅಂಕ ತೆಗೆಯುವುದು ಹೇಗೆ?, ಮಕ್ಕಳು ಪರೀಕ್ಷೆ ಎದುರಿಸುವಲ್ಲಿ ಆಗುವ ಗೊಂದಲ, ಪೂರ್ವ ಸಿದ್ಧತೆ, ಸಮಯ ಪಾಲನೆ, ಓದುವ ಶಿಸ್ತು ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಲಾಯಿತು. ವಿವಿಧ ನುರಿತ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಿದರು. ಮಕ್ಕಳು ಕೂಡ ಉತ್ಸುಕತೆಯಿಂದ ಶಿಬಿರದಲ್ಲಿ ಭಾಗಿಯಾದರು. ಈ ಶಿಬಿರಕ್ಕೆ ಪೋಷಕ ವಯಲದಿಂದ ಮೆಚ್ಚುಗೆ ವ್ಯಕ್ತವಾಯಿತು.
ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲರಾದ ವಿಧ್ವಾನ್ ಗಣಪತಿ ಭಟ್ ಮಾತನಾಡಿ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳ ವಿಕಸನ ಶಿಬಿರಗಳಿಗೆ ಎಂದಿಗೂ ಬೆಂಬಲ ನೀಡಲಿದೆ ಎಂದರು. ನೀದಳೋದೆ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಮತ್ತೋರ್ವ ಸಂಸ್ಥಾಪಕರಾದ ಗಣಪತಿ ಕೆ. ಎಸ್ ಅವರಿಗೆ ಶಿರಸಿ ವಲಯದ ಶಾಲಾ ಶಿಕ್ಷಣ ಇಲಾಖೆಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯರು, ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕ ವರ್ಗ, ಪೋಷಕರು ಹಾಜರಿದ್ದರು.