ಕರಾವಳಿಯಲ್ಲಿ ಸಂಭ್ರಮದ ಸಾರ್ವಜನಿಕ ಗಣೇಶೋತ್ಸವ!
– ಉಡುಪಿ ಜಿಲ್ಲೆಯಲ್ಲಿ 481 ಕಡೆ ಸಾರ್ವಜನಿಕ ಗಣೇಶೋತ್ಸವ
– ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 386 ಕಡೆ ಸಾರ್ವಜನಿಕ ಆಚರಣೆ
– ಗಣೇಶ ಹಬ್ಬದ ರಂಗು: ಎಲ್ಲೆಡೆ ಸಾಂಸ್ಕೃತಿಕ ಕಾರ್ಯಕ್ರಮ
NAMMUR EXPRESS NEWS
ಮಂಗಳೂರು: ಶನಿವಾರ ನಾಡಿನಾದ್ಯಂತ ಶ್ರೀ ಗಣೇಶ ಚತುರ್ಥಿ ಶ್ರದ್ಧಾ ಭಕ್ತಿ ಸಂಭ್ರಮದಿಂದ ಜರುಗಿದ್ದು ಶನಿವಾರ, ಭಾನುವಾರ, ಸೋಮವಾರ ಎಲ್ಲೆಡೆ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಭಕ್ತರು ಗಣೇಶನಿಗೆ ಜೈ ಎಂದರು.
ಉಡುಪಿ ಜಿಲ್ಲೆಯಲ್ಲಿ 481 ಕಡೆಗಳಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಯಿತು. ಗಣಪತಿ ದೇವಸ್ಥಾನಗಳಲ್ಲದೆ ಇತರ ದೇವಸ್ಥಾನ, ವಿವಿಧ ಮಠಗಳಲ್ಲೂ ಸಂಪ್ರದಾಯದಂತೆ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ಕರಾವಳಿಯಲ್ಲಿ ಗಣೇಶನ ವಿಶೇಷ ಆಚರಣೆ
ದ.ಕ. ಜಿಲ್ಲೆಯ ಶರವು, ಸೌತಡಕ, ಕಾಸಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು, ಪೆರ್ಣಂಕಿಲ, ಬಾರಕೂರು ಬಟ್ಟೆವಿನಾಯಕ, ಉದ್ಯಾವರ, ಉಪ್ಪೂರು, ಪಡುಬಿದ್ರಿ ದೇವಸ್ಥಾನ, ಹಿರಿಯಡಕ ಪುತ್ತಿಗೆಯ ಸ್ತಂಭೋದ್ಭವ ಗಣಪತಿ, ಉಡುಪಿ ಅನಂತೇಶ್ವರ ದೇವಸ್ಥಾನದ ಗಣಪತಿ ಸಾನ್ನಿಧ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು.
ವಿವಿಧ ದೇವಸ್ಥಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಪ್ಪ, ಅಷ್ಟದ್ರವ್ಯ ಪಂಚಕಜ್ಜಾಯ, ಕಡಲೆಬೇಳೆ ಪಂಚಕಜ್ಜಾಯ, ಲಡ್ಡು, ಮೋದಕ, ಕೊಟ್ಟೆ ಕಡುಬು ದೇವರಿಗೆ ಸಮರ್ಪಿಸಿ ಭಕ್ತರಿಗೆ ವಿತರಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ, ಸಾರ್ವಜನಿಕ ಗಣೇಶೋತ್ಸವ ಕೇಂದ್ರದಲ್ಲಿ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು,ಗಣಪತಿ ಹೋಮಗಳು, ಮುಡಿಅಕ್ಕಿ ಕಡುಬು, ಮೂಡುಗಣಪತಿ ಸೇವೆಗಳು, ಮನೆಗಳಲ್ಲಿ ಗಣಪತಿ ವಿಗ್ರಹವಿಟ್ಟು ಪೂಜಿಸುವವರು ಮೊದಲ ದಿನವೇ ಜಲಸ್ತಂಭನ ಮಾಡಿದ್ದಾರೆ.ಹಲವು ಗಣೇಶೋತ್ಸವ ಪೆಂಡಾಲುಗಳಲ್ಲಿಯೂ ಮೊದಲ ದಿನವೇ ಜಲಸ್ತಂಭನ ಮಾಡಲಾಯಿತು. ಸೆ. 7ರಂದು ಆಗಾಗ್ಗೆ ಮಳೆ ಸುರಿದಿತ್ತಾದರೂ ಹಬ್ಬದ ಸಂಭ್ರಮಕ್ಕೆ ತೊಡಕಾಗಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶೋತ್ಸವ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶೋತ್ಸವ ಸಂಭ್ರಮ ವಿವಿಧ ದೇವಸ್ಥಾನ, ಗಣೇಶೋತ್ಸವ ಸಮಿತಿ ನೇತೃತ್ವದ ಸಂಘ-ಸಂಸ್ಥೆಗಳು ಹಾಗೂ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ವಿವಿಧ ದೇವಸ್ಥಾನಗಳು, ಸಾರ್ವಜನಿಕ ಗಣೇಶೋತ್ಸವ ನಡೆಯಿತು.
ಮಂಗಳೂರಿನ ಸಂಘನಿಕೇತನ, ಹಿಂದೂ ಯುವ ಸೇನೆ ವತಿಯಿಂದ ನೆಹರೂ ಮೈದಾನ ಸಹಿತ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಭ್ರಮ ಸಡಗರದಿಂದ ಗಣೇಶ ಚತುರ್ಥಿ ನಡೆಯಿತು. ಕೆಲವೆಡೆ ಪೂಜಿಸಲ್ಪಟ್ಟ ಗಣಪತಿ ವಿಗ್ರಹಗಳನ್ನು ಜಲಸ್ತಂಭನ ಮಾಡಲಾಯಿತು. ಉಳಿದ ಬಹುತೇಕ ಕಡೆ ಎರಡು ದಿನಗಳಿಂದ ಏಳು ದಿನಗಳವರೆಗೆ ಪೂಜಿಸಿ ಶೋಭಾಯಾತ್ರೆಯೊಂದಿಗೆ ಜಲಸ್ತಂಭನ ಮಾಡಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವದ ಅಂಗವಗ ವಿವಿಧೆಡೆ ಧಾರ್ಮಿಕ, ಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯನ್ನು ಒಳಗೊಂಡಿ ರುವ ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 165 ಕಡೆಗಳಲ್ಲಿ ಮತ್ತು ಜಿಲ್ಲಾ ವ್ಯಾಪ್ತಿಯ 221 ಸಹಿತ ಒಟ್ಟು 386 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯಿತು.