ಅಯ್ಯೋ ಸೆಕೆ ತಡೆಯೋಕಾಗಲ್ಲ!
– ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ ದಾಖಲು
– ಏರಿಕೆ ಕಾಣುತ್ತಿರುವ ಬಿಸಿಲು: 36 ಡಿ.ಸೆ.ನತ್ತ ಗರಿಷ್ಠ ತಾಪಮಾನ
– ಉಷ್ಣ ಗಾಳಿ ಬೀಸುವ ಸೂಚನೆ
NAMMUR EXPRESS NEWS
ಉಡುಪಿ/ಮಂಗಳೂರು: ಬಿಸಿಲಿನ ತೀವ್ರತೆ ಜೋರಾಗುತ್ತಿದ್ದಂತೆ ರಾಜ್ಯದೆಲ್ಲೆಡೆ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಏರಿಕೆಯಾಗುವ ಆತಂಕ ಎದುರಾಗಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಕರಾವಳಿ ಭಾಗದಲ್ಲಿಯೂ ಬಿಸಿಲಿನ ಝಳಕ್ ಜೋರಾಗಿರುತ್ತದೆ. ಅದೇರೀತಿ ಇದೀಗ ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಒಂದೆರಡು ಡಿಗ್ರಿ ಸೆಲ್ಶಿಯಸ್ನಷ್ಟು ಏರಿಕೆಯಾಗಿದ್ದು, ಅದು ಮುಂದಿನ ದಿನಗಳಲ್ಲಿ ಮತ್ತಷ್ಟು ಜಾಸ್ತಿಯಾಗುವ ಮುನ್ಸೂಚನೆ ಇರುವುದಾಗಿ ಹವಾಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹವಾಮಾನ ಇಲಾಖೆ ದಾಖಲೆಗಳ ಪ್ರಕಾರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶವು 34.5 ಡಿಗ್ರಿ ಸೆಲ್ಶಿಯಸ್ನಷ್ಟು ದಾಖಲಾಗಿದೆ. ಅದೇರೀತಿ ಉಡುಪಿ ಜಿಲ್ಲೆಯಲ್ಲಿ 35.5 ಡಿಗ್ರಿ ಸೆಲ್ಶಿಯಸ್ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮುನ್ಸೂಚನೆಗಳ ಪ್ರಕಾರ, ಈ ಸಲ ಕಡು ಬೇಸಿಗೆಯಲ್ಲಿ ಕರಾವಳಿ ಭಾಗದಲ್ಲಿ ತಾಪಮಾನವು 36 ಡಿಗ್ರಿ ಸೆಲ್ಶಿಯಸ್ನ್ನು ದಾಟುವ ಸಾಧ್ಯತೆಯಿದೆ. ಇನ್ನು ರಾಜ್ಯದಲ್ಲಿಯೇ ಅತಿಹೆಚ್ಚಿನ ಉಷ್ಣಾಂಶವು 41.8 ಡಿಗ್ರಿ ಸೆಲ್ಶಿಯಸ್ ಕಲಬುರಗಿಯಲ್ಲಿ ಶನಿವಾರ ದಾಖಲಾಗಿದೆ. ಆ ಮೂಲಕ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿರುವುದು ಗಮನಾರ್ಹ.
ಉಷ್ಣ ಗಾಳಿ ಬೀಸುವ ಮುನ್ಸೂಚನೆ
ಇನ್ನೊಂದೆಡೆ ಉಷ್ಣ ಗಾಳಿ ಬೀಸುವ ಮುನ್ಸೂಚನೆ ಇರುವ ಕಾರಣ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆಯೂ ಹವಾಮಾನ ಇಲಾಖೆ ಸೂಚನೆ ನೀಡಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಸೂರ್ಯನಿಗೆ ಮೈಯೊಡ್ಡುವುದನ್ನು ತಪ್ಪಿಸಬೇಕು. ಜತೆಗೆ ತಿಳಿ ಬಣ್ಣದ ಹತ್ತಿ ಉಡುಪುಗಳನ್ನೇ ಹೆಚ್ಚಾಗಿ ಧರಿಸಬೇಕು ಹಾಗೂ ಹೊರಗಡೆ ಓಡಾಡುವಾಗ ತಪ್ಪದೆ ಕಪ್ಪು ಛತ್ರಿ, ಬಿಸಿ ಟೋಪಿ ಬಳಸುವ ಮೂಲಕ ಬಿಸಿಲಿನ ತೀವ್ರತೆಯಿಂದ ರಕ್ಷಣೆ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.