ಧರ್ಮಸ್ಥಳ ಸಂಘದಿಂದ ಸಾವಿರಾರು ಬಡ ಕುಟುಂಬಗಳಿಗೆ ಸ್ವಾವಲಂಬಿ ಬದುಕು
– ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ತುಂಬಿನಕೆರೆ ಬಸವರಾಜ್ ಅಭಿಮತ
– ವಾತ್ಸಲ್ಯ ಯೋಜನೆ, ಮಧ್ಯವರ್ಜನ ಶಿಬಿರ ಸೇರಿ ನೂರಾರು ಯೋಜನೆ
NAMMUR EXPRESS NEWS
ಹೊಸದುರ್ಗ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವಾತ್ಸಲ್ಯ ಯೋಜನೆ, ಮಧ್ಯವರ್ಜನ ಶಿಬಿರ ಹಾಗೂ ಇನ್ನೂ ಹಲವಾರು ಯೋಜನೆಗಳ ಪರಿಣಾಮ ಗ್ರಾಮೀಣ ಭಾಗದ ಬಡ ಜನರು ಬದುಕು ಸುಧಾರಿಸಿಕೊಂಡಿದ್ದಾರೆ. ಅಲ್ಲದೇ, ನೂರಾರು ಕುಟುಂಬಗಳು ಸ್ವಾವಲಂಬನೆಯಿಂದ, ನೆಮ್ಮದಿಯಾಗಿ ಜೀವನ ನಡೆಸುವಂತಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚಿತ್ರದುರ್ಗ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ತುಂಬಿನಕೆರೆ ಬಸವರಾಜ್ ಅಭಿಮತ ವ್ಯಕ್ತಪಡಿಸಿದ್ದಾರೆ.
ನಗರದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಲು ರಾಮೇಶ್ವರ ಯೋಜನಾ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಸಮಾಜಮುಖಿ ಸೇವಾ ‘ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಕುಗ್ಗದೇ ದೃಢನಂಬಿಕೆ, ಆತ್ಮವಿಶ್ವಾಸದೊಂದಿಗೆ ಮುನ್ನಡೆದಾಗ ಸಮಸ್ಯೆಗಳು ಮಂಜಿನ ತರಹ ಮಾಯವಾಗುತ್ತವೆ.’ ಎಂಬ ಅವರ ಮಾತುಗಳು ಸರ್ವಕಾಲಕ್ಕೂ ಸತ್ಯ. ನಾವು ಎಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿದರು ಟೀಕಾಕಾರರು ಇದ್ದೇ ಇರುತ್ತಾರೆ. ಅಂತಹವುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ, ನಮ್ಮ ಗುರಿಯ ಕಡೆಗೆ ನಮ್ಮ ಗಮನವಿರಬೇಕು. ಬೆರಳೆಣಿಕೆಯ ಕೆಲವರು ಧರ್ಮಸ್ಥಳ ಸಂಸ್ಥೆಯ ಹೆಸರು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅದು ಅವರಿಗೆ ಫಲಪ್ರದವಾಗುವುದಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಯಾವುದೇ ಸ್ವಾರ್ಥವಿಲ್ಲದೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರು ಎಂದಿಗೂ ಸಂಬಳಕ್ಕಾಗಿ ಕೆಲಸ ಮಾಡುವುದಿಲ್ಲ ಬದಲಾಗಿ ಅವರು ಗ್ರಾಮೀಣ ಭಾಗದ ಬಡ ಕುಟುಂಬದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಮಾಜ ಸೇವಕ, ಹಾಗೂ ಮುಸ್ಲಿಂ ಮುಖಂಡ ಸದಸ್ಯ ಅಲ್ತಾಪ್ ಪಾಷಾ ಮಾತನಾಡಿ, ಧರ್ಮಸ್ಥಳ ಸಂಘ ಜಾತ್ಯಾತೀತವಾಗಿ ಯಾವುದೇ ಭೇದವಿಲ್ಲದೆ, ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ಜನರಲ್ಲಿ ನಿರಂತರವಾಗಿ ಸದ್ವಿಚಾರ- ಸದ್ಭಾವನೆಗಳನ್ನು ಬೆಳೆಸುತ್ತಿದೆ. ದುಶ್ಚಟಗಳಿಗೆ ಬಲಿಯಾಗಿರುವ ಜನರನ್ನು ಬದಲಾಯಿಸಿ ಒಳ್ಳೆಯ ಜೀವನಕ್ಕೆ ಕರೆತರುತ್ತಿದೆ. ಸಂಘದ ಕಾರ್ಯಕ್ರಮಗಳಿಗೆ ನಮ್ಮ ನಿರಂತರ ಸಹಕಾರವಿರುತ್ತದೆ ಎಂದು ತಿಳಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ಹೊಸದುರ್ಗ ಶಾಖೆಯ ಹಿರಿಯ ವ್ಯವಸ್ಥಾಪಕ ಶೇಷ ನಾಯ್ಕ್ , ಬ್ಯಾಂಕ್ ಆಫ್ ಬರೋಡ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವ್ಯವಹಾರಗಳ ಬಗ್ಗೆ ಪದಾಧಿಕಾರಿಗಳಿಗೆ ಮನವರಿಕೆ ಮಾಡಿದರು ಸಂಘದ ಜಿಲ್ಲಾ ಕಚೇರಿ ಹಿರಿಯೂರು ವಿಭಾಗದ ಹಿರಿಯ ನಿರ್ದೇಶಕ ವಿನಯ್ ಕುಮಾರ್ ಸುವರ್ಣ, ಹೊಸದುರ್ಗ ತಾಲ್ಲೂಕು ವಿಭಾಗದ ಯೋಜನಾಧಿಕಾರಿ ಶಿವಣ್ಣ ಮತ್ತು ಹಾಲು ರಾಮೇಶ್ವರ ವಿಭಾಗದ ಯೋಜನಾಧಿಕಾರಿ ಚಂದ್ರಶೇಖರ್ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು