ಸಿಂಪಲ್ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ!
– ಅಚ್ಚರಿ ಸ್ಪರ್ಧೆ ಹಿಂದಿನ ರಾಜಕೀಯ ಲೆಕ್ಕಾಚಾರ ಏನು..?
– ಶಿವಮೊಗ್ಗ ಗೆಲುವಿಗೆ ಚಿಕ್ಕಮಗಳೂರು ಲಿಂಕ್ ಮಾಡಲಾಯ್ತಾ?
NAMMUR EXPRESS NEWS
ಉಡುಪಿ/ಚಿಕ್ಕಮಗಳೂರು: ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿಯ ಎರಡು ಪ್ರಮುಖ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಚುನಾವಣಾ ಕಾವು ಕೂಡ ಜೋರಾಗುತ್ತಿದೆ. ಗಮನಾರ್ಹ ವಿಚಾರವೆಂದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಅಭ್ಯರ್ಥಿಯಾಗುತ್ತಾರೆ ಎನ್ನುವುದನ್ನು ಹೆಚ್ಚಿನವರು ಊಹಿಸಿರಲಿಲ್ಲ. ಆದರೆ, ಕೋಟ ಅವರ ಈ ಅಚ್ಚರಿಯ ಆಯ್ಕೆ ಹಿಂದೆಯೂ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪುತ್ರ ಬಿವೈ ವಿಜಯೇಂದ್ರ ಅವರ ರಾಜಕೀಯ ಲೆಕ್ಕಾಚಾರ, ತಂತ್ರಗಾರಿಕೆ ಅಡಗಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಶಿವಮೊಗ್ಗದಲ್ಲಿ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಿರುವುದು ಪ್ರತಿಸ್ಪರ್ಧಿ ಬಿವೈ ರಾಘವೇಂದ್ರ ಅವರ ರಾಜಕೀಯ ಲೆಕ್ಕಾಚಾರಗಳಿಗೆ ಕೊಂಚ ಹಿನ್ನಡೆ ಉಂಟುಮಾಡುವ ಭೀತಿ ಸೃಷ್ಟಿಸಿದೆ. ಹೀಗಿರುವಾಗ, ತಮ್ಮ ಮಗನ ಗೆಲುವಿನ ಅನುಕೂಲಕರ ರಾಜಕಾರಣದ ಉದ್ದೇಶವಿಟ್ಟುಕೊಂಡೇ ಯಡಿಯೂರಪ್ಪನವರ ಒತ್ತಾಯದ ಮೇರೆಗೆ ಕೋಟ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.
ಹಲವು ಬಾರಿ ಸಚಿವರಾಗಿ ಸದ್ಯ ಎಂಎಲ್ಸಿ ಕೂಡ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ರಾಷ್ಟ್ರ ರಾಜಕಾರಣದ ಒಲವು ಇರಲಿಲ್ಲ. ಅಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೇ ಎದುರಿಸಿದ ಅನುಭವ ಜಾಸ್ತಿಯಿರುವ ಕಾರಣ ಲೋಕಸಭೆಯಂಥ ದೊಡ್ಡ ಚುನಾವಣೆಯನ್ನು ಎದುರಿಸುವ ಇಚ್ಛೆಯೂ ಕೋಟ ಅವರಿಗಿರಲಿಲ್ಲ. ಆದರೆ ರಾಜ್ಯ ಹಾಗೂ ರಾಷ್ಟ್ರ ನಾಯಕರ ಒತ್ತಡಕ್ಕೆ ಮಣಿದು ಕೋಟ ಅವರು ಕೊನೆಯ ಗಳಿಗೆಯಲ್ಲಿ ಸ್ಪರ್ಧಿಸುವುದಕ್ಕೆ ಒಪ್ಪಿದ್ದಾರೆ ಎಂದು ವರದಿಯಾಗಿವೆ.
ಶಿವಮೊಗ್ಗ ಕ್ಷೇತ್ರದ ನಾಲ್ಕು ತಾಲೂಕುಗಳಲ್ಲಿ ಈಡಿಗರ ಮತಗಳ ಸಂಖ್ಯೆ ಜಾಸ್ತಿಯಿದೆ. ಈ ಲೆಕ್ಕಾಚಾರ ಇಟ್ಟುಕೊಂಡು ಸಚಿವ ಮಧು ಬಂಗಾರಪ್ಪ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಈಡಿಗರ ಮತಗಳ ಬೇಟೆ ಆರಂಭಿಸಿದ್ದು, ಇದು ಹಾಲಿ ಸಂಸದ ಬಿವೈ ರಾಘವೇಂದ್ರ ಅವರಿಗೆ ಸವಾಲು ಸೃಷ್ಟಿಸುತ್ತಿದೆ. ಹೀಗಿರುವಾಗ, ಬಿಜೆಪಿಯಿಂದ ಕರಾವಳಿ ಭಾಗದಲ್ಲಿ ಈಡಿಗ ಸಮುದಾಯದ ನಾಯಕನಾಗಿರುವ ಕೋಟ ಅವರನ್ನು ಕಣಕ್ಕಿಳಿಸಿದರೆ, ತಾವು ಕೂಡ ಈಡಿಗ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟಿರುವುದಾಗಿ ಬಿಂಬಿಸುವುದಕ್ಕೆ ಅನುಕೂಲವಾಗುತ್ತದೆ; ಆ ಮೂಲಕ ಶಿವಮೊಗ್ಗದಲ್ಲಿಯೂ ಈಡಿಗರ ವಿಶ್ವಾಸ ಗೆಲ್ಲಬಹುದು. ಬಿಜೆಪಿ ಪರವಾಗಿರುವ ಈಡಿಗರ ಮತಗಳನ್ನು ಕೂಡ ಸುಲಭವಾಗಿ ಪಡೆಯಬಹದು ಎಂಬಿತ್ಯಾದಿ ಲೆಕ್ಕಾಚಾರ ಇಟ್ಟುಕೊಂಡು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ಫೈನಲ್ ಮಾಡಲಾಗಿದೆ ಎನ್ನುವುದು ಹಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.