ಸೌಜನ್ಯ ಪ್ರಕರಣ: ಆ.26ಕ್ಕೆ ಪಾದಯಾತ್ರೆ!
– ಧರ್ಮಸ್ಥಳದಿಂದ ಬೆಂಗಳೂರಿನವರೆಗೆ ಪಾದಯಾತ್ರೆ
– ಅಮರನಾಥದಲ್ಲಿ ಪುತ್ತೂರು ಯುವಕರ ಪ್ರಾರ್ಥನೆ
NAMMUR EXPRESS NEWS
ಮೂಡುಬಿದಿರೆ: ಸೌಜನ್ಯ ಮೇಲಿನ ಅತ್ಯಾಚಾರವನ್ನು ವಿರೋಧಿಸಿ ಕರ್ನಾಟಕ ರಾಷ್ಟ ಸಮಿತಿ ಪಕ್ಷ ವತಿಯಿಂದ ಧರ್ಮಸ್ಥಳದಿಂದ ಬೆಂಗಳೂರಿನವರೆಗೆ ಆ.26ರಿಂದ ದೌರ್ಜನ್ಯ ವಿರುದ್ಧ ಸೌಜನ್ಯ ಪಾದಯಾತ್ರೆಗೆ ಸಿದ್ಧತೆ ನಡೆದಿದೆ.
ಮೂಡುಬಿದಿರೆಯಲ್ಲಿ ಕೆಆರ್ಎಸ್ ಕಾರ್ಯಕರ್ತರು ಮಾತ್ರವಲ್ಲದೆ, ಮೂಡುಬಿದಿರೆ ಜನರು ಬೆಂಬಲ ಸೂಚಿಸಿದ್ದಾರೆ. ಆನ್ಲೈನ್ ಮೂಲಕ ನೂರಾರು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೆಆರ್ಎಸ್ ಜಿಲ್ಲಾ ಕಾರ್ಯದರ್ಶಿ ದಯಾನಂದ ಮಾಹಿತಿ ನೀಡಿದ್ದು, ಸುಮಾರು 14 ದಿನ ನಡೆಯಲಿರುವ ಸುಮಾರು 330 ಕಿ.ಮೀ ಈ ಪಾದಯಾತ್ರೆಯಲ್ಲಿ ಕೆಆರ್ಎಸ್ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಹಕ್ಕೋತ್ತಾಯ ಮಂಡಿಸಲಿದೆ ಎಂದರು.
ಸೌಜನ್ಯ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಮರು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ಪ್ರಕರಣಕ್ಕೆ ಸಂಬoಧಿಸಿದಂತೆ ವಿಶೇಷ ಪೊಲೀಸ್ ತನಿಖಾ ತಂಡ ರಚಿಸಿ ಪರ್ಯಾಯವಾಗಿ ಈಗಾಗಲೇ ತನಿಖೆ ಮಾಡಿರುವ ತನಿಖಾಧಿಕಾರಿಗಳು ಸಮರ್ಪಕವಾಗಿ ಮತ್ತು ವೃತ್ತಿಪರವಾಗಿ ತನಿಖೆ ನಡೆಸಿಲ್ಲ ಎನ್ನುವ ಆರೋಪಗಳ ಹಿನ್ನಲೆಯಲ್ಲಿ ಅವರನ್ನೂ ತನಿಖೆ ಒಳಪಡಿಸಬೇಕು. ಸೌಜನ್ಯ ಪ್ರಕರಣ ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಕೆಆರ್ಎಸ್ ಸರ್ಕಾರವನ್ನು ಈ ಪಾದಯಾತ್ರೆಯ ಮೂಲಕ ಒತ್ತಾಯಿಸಲಿದೆ ಎಂದು ತಿಳಿಸಿದ್ದಾರೆ.
ಅಮರನಾಥದಲ್ಲಿ ಪುತ್ತೂರು ಯುವಕರ ಪ್ರಾರ್ಥನೆ
ಸೌಜನ್ಯಳಿಗೆ ನ್ಯಾಯ ಸಿಗುವಂತೆ ಅಮರನಾಥದಲ್ಲಿ ಪುತ್ತೂರು ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ವಿಶೇಷ ಪ್ರಾರ್ಥನೆ ಮಾಡಲಾಗಿದೆ. ಕಾಶ್ಮೀರದ ಅಮರನಾಥದಲ್ಲಿ ಪುತ್ತೂರಿನ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರಿಂದ ಸೌಜನ್ಯಳ ಹತ್ಯೆ ಆರೋಪಿಗಳಿಗೆ ಶೀಘ್ರವಾಗಿ ಶಿಕ್ಷೆ ಸಿಗುವಂತೆ ಹಾಗೂ ಸೌಜನ್ಯಳಿಗೆ ನ್ಯಾಯ ಸಿಗುವಂತೆ ಅಮರನಾಥದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.