ಕರಾವಳಿಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕಟ್ಟುನಿಟ್ಟು!
– ಲಾರ್ವ ಉತ್ಪತ್ತಿ ಕಂಡುಬಂದರೆ ಕಟ್ಟಡ ಮಾಲೀಕರಿಗೆ 500ರಿಂದ 15000ರೂ.ವರೆಗೆ ದಂಡ
– ಮಂಗಳೂರು ನಗರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾದ ಪಾಲಿಕೆ
– ಉಡುಪಿ: ಮಳೆ ಅನಾಹುತ ತಪ್ಪಿಸಲು ಅಗತ್ಯ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಹೀಗಾಗಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಲಾರ್ವಗಳನ್ನು ನಾಶಗೊಳಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಸಿಎಲ್ ಆನಂದ್ ತಿಳಿಸಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆದ ಡೆಂಗ್ಯೂ ರೋಗ ನಿರ್ಮೂಲನೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಸಭೆ ನಡೆಸಿದ್ದಾರೆ.
ಈ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ರೋಗ ಪತ್ತೆಯಾದ ಪ್ರದೇಶದಲ್ಲಿ ಇರುವ ಪ್ರತಿ ಮನೆ ಹಾಗೂ ಕಟ್ಟಡಗಳಲ್ಲಿ ಲಾರ್ವ ಉತ್ಪತ್ತಿಯಾಗುವ ಪ್ರದೇಶವನ್ನು ಗುರುತಿಸಿ ಪ್ರತಿನಿತ್ಯವೂ ರಾಸಾಯನಿಕ ಸಿಂಪಡನೆ ಮಾಡಬೇಕು. ಡೆಂಗ್ಯೂ ರೋಗವು ಪತ್ತೆಯಾದ ದಿನವೇ ರೋಗಿಯ ಮನೆಯ ಸುತ್ತಮುತ್ತ ಲಾರ್ವ ಉತ್ಪತ್ತಿಯನ್ನು ಗುರುತಿಸಿ ಸಿಂಪಡನೆ ನಡೆಸಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿ ಸಿಂಡನೆಯನ್ನು ಕೈಗೊಳ್ಳುವ ದಿನದ ಬಗ್ಗೆ ವೇಳಾಪಟ್ಟಿಯನ್ನು ತಯಾರಿಸಿ ಆಯಾ ಪ್ರದೇಶದ ಜನರಿಗೆ ಮಾಹಿತಿ ಒದಗಿಸಬೇಕು. ಜನರು ಡೆಂಗ್ಯೂ ರೋಗದ ಬಗ್ಗೆ ತಾತ್ಸಾರ ಮನೋಭಾದಿಂದ ರೋಗ ನಿರ್ಮೂಲನೆಯ ಬಗ್ಗೆ ಯೋಚಿಸುತ್ತಿಲ್ಲ. ಜನರಿಗೆ ಡೆಂಗ್ಯೂ ರೋಗದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಇನ್ನುಮುಂದೆ ಲಾರ್ವಗಳು ಕಂಡುಬರುವ ವಾಸ್ತವ್ಯದ ಕಟ್ಟಡಕ್ಕೆ 500ರೂ., ವಾಣಿಜ್ಯ ಕಟ್ಟಡಕ್ಕೆ 500ರೂ. ಹಾಗೂ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ 15,000ರೂ. ಹಾಗೂ ಬಹುಮಹಡಿ ವಾಸ್ತವ್ಯದ ಕಟ್ಟಡಗಳಿಗೆ 5000ರೂ. ದಂಡ ವಿಧಿಸುವ ಮೂಲಕ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ, ವಿಶ್ವ ಆರೋಗ್ಯ ಸಂಸ್ಥೆಯ ಸರ್ವಲೆನ್ಸ್ ಮೆಡಿಕಲ್ ಆಫೀಸರ್ ಡಾ. ಹರ್ಷಿತ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್, ಮಂಗಳೂರು ಮಹಾನಗರ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಇಲಾಖೆ ಅಧಿಕಾರಿಗಳು ಇದ್ದರು.
ಉಡುಪಿಯಲ್ಲಿ ಮಳೆ ಅನಾಹುತ ತಪ್ಪಿಸಲು ಅಗತ್ಯ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಜಿಲ್ಲಾಡಳಿತ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಚಿತವಾಗಿಯೇ ಉಡುಪಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಳೆಗಾಲಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಜೊತೆಗೆ ಬೀಳುವ ಹಂತದಲ್ಲಿರುವ ಮರಗಳನ್ನು ಕಡಿಯಬೇಕೆಂದು ಎಚ್ಚರಿಸಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ ಬೀಳುವ ಹಂತದಲ್ಲಿದ್ದ ಸುಮಾರು 400 ಮರಗಳನ್ನು ಕಡಿಯಲಾಗಿದ್ದು, 80 ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗಿದೆ. ಈ ಕಾರಣದಿಂದ ಎಡೆಬಿಡದೆ ಮಳೆಯಾಗಿದ್ದರೂ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ ಎಂದು ತಿಳಿಸಿದರು.
ಕೆಲವೊಂದು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಈ ಪ್ರದೇಶದಿಂದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ವರ್ಷ ಮಳೆಯಿಂದಾಗಿ ಎದುರಿಸಿದ್ದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಎಚ್ಚರಿಕೆ ವಹಿಸಲಾಗಿದೆ. ಗುಡ್ಡ ಕುಸಿತದಿಂದ ಕೆಲವು ಮನೆಗಳಿಗೆ ಹಾನಿ ಉಂಟಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ತ್ವರಿತ ಗತಿಯಲ್ಲಿ ಪರಿಹಾರ ನೀಡಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಉಡುಪಿ ನಗರದಲ್ಲಿ ನೀರು ಹರಿದು ಹೋಗುವುದಕ್ಕೆ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆ ಬಂದರೆ ರಸ್ತೆಯ ಮೇಲೆಯೇ ನೀರು ನಿಲ್ಲುತ್ತದೆ. ನಾನು ಉಸ್ತುವಾರಿ ಸಚಿವೆಯಾದ ನಂತರದಲ್ಲಿ ಒಳಚರಂಡಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಒಂದೆರಡು ವಾರಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ನಿನ್ನೆ ಹೆಚ್ಚು ಮಳೆಯಾದ ಕಾರಣ ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಹೇಳಿದರು.
ಇನ್ನು ಗುಂಡಿಬೈಲು, ಬಡಗುಪೇಟೆಯಲ್ಲಿರುವ ಹಲವು ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯುಂಟಾಗಿವೆ. ಅದೇರೀತಿ ಗುಂಡಿಬೈಲಿನ ಮನೆಗಳಿಗೂ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಬೈಲಕರೆಯಲ್ಲಿ ಜಲದಿಗ್ಭಂಧನಕ್ಕೆ ಒಳಗಾಗಿದ್ದ ಕೆಲವು ಕುಟುಂಬಗಳನ್ನು ಅಗ್ನಿಶಾಮಕ ದಳದವರು ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ. ಅಷ್ಟೇಅಲ್ಲದೆ ಪಾಡಿಗಾರು ಸಮೀಪ ಪಿಜಿಯಲ್ಲಿ ವಾಸವಾಗಿರುವ ವಿದ್ಯಾರ್ಥಿಗಳನ್ನು ಅಗ್ನಿ ಶಾಮಕ ದಳದ ಬೋಟಿನಲ್ಲಿ ಕರೆದುಕೊಂಡು ಬರಲಾಯಿತು. ಆ ಮೂಲಕ ಜಿಲ್ಲಾಡಳಿತವು ಮಳೆ ಪರಿಸ್ಥಿತಿಗೆ ಉತ್ತಮ ರೀತಿ ಸ್ಪಂದಿಸಲು ಪ್ರಯತ್ನಿಸಿರುವುದಾಗಿ ಸಚಿವರು ಅಭಿಪ್ರಾಯಪಟ್ಟರು.