* ಉಪ್ಪಿನಂಗಡಿ:ಕಾಡಿಗೆ ಕರೆದೊಯ್ದು,ವಿದ್ಯಾರ್ಥಿನಿ ಮೇಲೆ ಅತ್ಯಾಚಾರ:
* ಬಜಪೆ:ಕಾರು ಢಿಕ್ಕಿ : 6 ವಿದ್ಯುತ್ ಕಂಬಗಳಿಗೆ ಹಾನಿ!
* ಉಡುಪಿ: ಸೀಮೆಎಣ್ಣೆ ಕುಡಿದು ವ್ಯಕ್ತಿ ಮೃತ್ಯು!!
NAMMUR EXPRESS NEWS
ಉಪ್ಪಿನಂಗಡಿ: ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾಡಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ನಿವಾಸಿ ಸತೀಶ್ (38) ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ನೆಲ್ಯಾಡಿಯ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಜು. 21ರಂದು ಆಕೆಯನ್ನು ನೆಲ್ಯಾಡಿಗೆ ಕರೆಸಿಕೊಂಡು ಪಿಕಪ್ ವಾಹನದಲ್ಲಿ ಬಜತ್ತೂರು ಗ್ರಾಮದ ಕಾಂಚನ ಎಂಬಲ್ಲಿನ ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿರುತ್ತಾನೆ ಹಾಗೂ ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿರುತ್ತಾನೆಂದು ಸಂತ್ರಸ್ತೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾಳೆ.
* ಕಾರು ಢಿಕ್ಕಿ : 6 ವಿದ್ಯುತ್ ಕಂಬಗಳಿಗೆ ಹಾನಿ!
ಬಜಪೆ: ಬಜಪೆ -ಕಟೀಲು ರಾಜ್ಯ ಹೆದದಾರಿ 67ರ ಎಕ್ಕಾರು ಪೇಟೆಯಲ್ಲಿ ಕಟೀಲು ಕಡೆಯಿಂದ ವೇಗವಾಗಿ ಬಂದ ಕಾರು ಎಕ್ಕಾರು ಬಂಟರ ಭವನದ ಬಳಿಯ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದು, ಜತೆಗೆ ಇತರ ಕೆಲವು ವಿದ್ಯುತ್ ಕಂಬಗಳೂ ಎಳೆಯಲ್ಪಟ್ಟು ಒಟ್ಟು ಆರು ಕಂಬಗಳು ತುಂಡಾಗಿವೆ. ಮೆಸ್ಕಾಂಗೆ ಒಟ್ಟು 1.10 ಲಕ್ಷ ರೂಪಾಯಿ ನಷ್ಟವಾಗಿದೆ.
ವಿದ್ಯುತ್ ತಂತಿಗಳು ಹಾಗೂ ಎಚ್ಟಿ ಲೈನ್ಗಳು ಕೂಡ ರಸ್ತೆಗೆ ಜೋತು ಬಿದ್ದಿದ್ದು,ಕೂಡಲೇ ಮೆಸ್ಕಾಂನ ಲೈನ್ಮನ್ ಗುರು ಭಟ್ ಅವರು ವಿದ್ಯುತ್ ಅನ್ನು ಸ್ಥಗಿತಗೊಳಿಸಿದ ಕಾರಣ ಕಾರಿನಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಮೂವರು ಯುವಕರು ಪಾರಾಗಿದ್ದಾರೆ. ನಂತರ ಎಕ್ಕಾರು ಭಜನ ಮಂದಿರದ ಬಳಿ ಇನ್ನೊಂದು ವಿದ್ಯುತ್ ಕಂಬ ರಸ್ತೆಗೆ ಬಿದ್ದಿದ್ದು, ಕಂಬ ಹಾಗೂ ತಂತಿಗಳು ರಸ್ತೆಯಲ್ಲಿ ನೇತಾಡುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ಅಪಾಯವಿತ್ತು. ಮಾಹಿತಿ ಅರಿತ ಗುರು ಭಟ್ ಮತ್ತೆ ಸ್ಥಳಕ್ಕೆ ಆಗಮಿಸಿದ್ದಾರೆ.
ಉಡುಪಿ: ಸೀಮೆಎಣ್ಣೆ ಕುಡಿದು ವ್ಯಕ್ತಿ ಮೃತ್ಯು!!
ಉಡುಪಿ: ಮಲ್ಪೆ ತೊಟ್ಟಂ ಎಂಬಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಯಿಗೆ ಸೀಮೆಎಣ್ಣೆ ಹಾಕಿ ಬೆಂಕಿ ಉಗುಳುತ್ತಿದ್ದ ವ್ಯಕ್ತಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮಲ್ಪೆಯ ಸತೀಶ(39) ಎಂದು ಗುರುತಿಸಲಾಗಿದೆ.
ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು ಸೆ.9ರಂದು ರಾತ್ರಿ ತೊಟ್ಟಂನ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಯಿಗೆ ಸೀಮೆಎಣ್ಣೆ ಹಾಕಿಕೊಂಡು ಬೆಂಕಿ ಉಗುಳುತ್ತಿದ್ದರು.
ಈ ವೇಳೆ ಅವರು ಆಕಸ್ಮಿಕವಾಗಿ ಸೀಮೆಎಣ್ಣೆ ಕುಡಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡರೆನ್ನಲಾಗಿದೆ. ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಸೆ.12ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ