ಸುಬ್ರಹ್ಮಣ್ಯದಲ್ಲಿ ನೀರಿನಲ್ಲಿ ತೇಲಿಬಂದ ಆನೆ ಮೃತ ದೇಹ!
– ಮಲ್ಪೆ: ನಿಂತಿದ್ದ ಬಸ್ಗೆ ಬೈಕ್ ಡಿಕ್ಕಿ: ಸವಾರ ಗಂಭೀರ
– ಪುತ್ತೂರು: ಬಸ್ ನಿಲ್ದಾಣದ ಮೆಟ್ಟಿಲುಗಳ ಮೇಲೆ ವ್ಯಕ್ತಿಯ ಶವ ಪತ್ತೆ!
-ಹೆಚ್ಚು ಹಣ ವಸೂಲು: ರೆಸಾರ್ಟ್ ಗೆ ದಂಡ ವಿಧಿಸಿದ ಗ್ರಾಹಕರ ವೇದಿಕೆ
NAMMUR EXPRESS NEWS
ಸುಬ್ರಮಣ್ಯ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಹೀಗಿರುವಾಗ, ಸುಬ್ರಹ್ಮಣ್ಯದ ಬಳಿ ನದಿ ನೀರಿನಲ್ಲಿ ಆನೆಯ ಕಳೇಬರ ತೇಲಿಬಂದಿರುವ ಘಟನೆ ನಡೆದಿದೆ.
ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದ್ದು, ಸೋಮವಾರ ತಡರಾತ್ರಿ ಸುಮಾರು ಒಂದು ಗಂಟೆಯ ಸುಮಾರಿಗೆ ಕುಮಾರಧಾರ ನದಿಯಲ್ಲಿ ಎಷ್ಟು ನೀರು ತುಂಬಿದೆ ಎಂಬುದನ್ನು ನೋಡುವುದಕ್ಕೆ ಮನ್ಮಥ ಬಟ್ಟೋಡಿ ಅವರಿಗೆ ನೀರಿನಲ್ಲಿ ಆನೆಯ ಕಳೇಬರ ತೇಲಿ ಬರುತ್ತಿರುವ ದೃಶ್ಯ ಕಾಣಿಸಿದೆ. ಕೂಡಲೇ ಅವರು ಅದನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಲ್ಪೆಯಲ್ಲಿ ನಿಂತಿದ್ದ ಬಸ್ಗೆ ಬೈಕ್ ಡಿಕ್ಕಿ: ಸವಾರ ಗಂಭೀರ
ನಿಂತಿದ್ದ ಬಸ್ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಲ್ಪೆ ಸಿಟಿಜನ್ ಸರ್ಕಲ್ ಸಮೀಪದ ನೆರ್ಗಿ ಎಂಬಲ್ಲಿ ಇಂದು ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ.
ಗಾಯಾಳುವನ್ನು ಉಡುಪಿ ಗುಂಡಿಬೈಲು ನಿವಾಸಿ ಲಕ್ಷ್ಮಣ್(60) ಎಂದು ಗುರುತಿಸಲಾಗಿದೆ. ಆಪತ್ಪಾಂಧವ ಈಶ್ವರ್ ಮಲ್ಲೆ ಹಾಗೂ ತಂಡವು ಆಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಕ್ಷ್ಮಣ್ ಅವರು ಗುಂಡಿಬೈಲುವಿನಲ್ಲಿ ಕಾರ್ತಿಕ್ ಹೆಸರಿನ ವೆಲ್ಡಿಂಗ್ ಶಾಪ್ ನಡೆಸುತ್ತಿದ್ದಾರೆ.
ಹೆಚ್ಚು ಹಣ ವಸೂಲು: ರೆಸಾರ್ಟ್ ಗೆ ದಂಡ ವಿಧಿಸಿದ ಗ್ರಾಹಕರ ವೇದಿಕೆ
ವಿವಾಹ ಕಾರ್ಯಕ್ರಮದ ವೆಚ್ಚವಾಗಿ ಹೆಚ್ಚುವರಿ ಹಣ ಪಡೆದುಕೊಂಡ ರೆಸಾರ್ಟ್ನವರು ಆ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕು ಎಂದು ಮಂಗಳೂರಿನ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ನೀಡಿದೆ.
ಮಂಗಳೂರಿನ ಕುಲಶೇಖರ ಸಮೀಪದ ಕಲ್ಪನೆಪದವಿನ ಗಣೇಶ ಕೃಷ್ಣ ಮತ್ತು ಶ್ರುಂಗ ಅವರ ವಿವಾಹವು 2023ರ ನ.27ರಿಂದ ನ.30ರವರೆಗೆ ಚಿಕ್ಕಮಗಳೂರಿನ ಮಲ್ಲೆನಳ್ಳಿ ಗ್ರಾಪಂ ವ್ಯಾಪ್ತಿಯ ಕರ್ಕ್ನಳ್ಳಿ ಬಿಂದಿಗ ಗ್ರಾಮದ ಬಿಂದಿಗ ಪೀಕ್ ರೆಸಾರ್ಟ್ನಲ್ಲಿ ನಡೆದಿತ್ತು. ಮದುವೆ ಕಾರ್ಯಕ್ರಮದ ಮುಂಚಿತವಾಗಿ ರೆಸಾರ್ಟ್ನವರು ಮತ್ತು ಮದುವೆ ಆಯೋಜಕರ (ದೂರುದಾರರು) ಮಧ್ಯೆ ವಿವಾಹದ ಖರ್ಚಿನ ಬಾಬ್ತು 14,21,345 ರೂ.ಗಳಿಗೆ ಕರಾರು ಒಪ್ಪಂದ ನಡೆದಿತ್ತು.
ಆಯೋಜಕರು ಕರಾರಿನ ಷರತ್ತುಗಳಂತೆ ಹಣ ಪಾವತಿಸಿದ್ದರು. ಆದರೆ 18,55,038 ರೂ.ಗಳನ್ನು ಪಾವತಿಸದಿದ್ದರೆ ರೆಸಾರ್ಟ್ ನಿಂದ ಕದಲುವಂತಿಲ್ಲ ಎಂದು ರೆಸಾರ್ಟ್ನವರು ತಾಕೀತು ಮಾಡಿದ್ದರು ಎನ್ನಲಾಗಿದೆ. ಉಪಾಯವಿಲ್ಲದೆ ಆಯೋಜಿಕರು ಹೆಚ್ಚುವರಿ ಪಾವತಿಸಿದ್ದರು. ಹೆಚ್ಚುವರಿಯಾಗಿ 4,33,693 ರೂ.ಗಳನ್ನು ರೆಸಾರ್ಟ್ನವರು ಪಡೆದಿದ್ದಾರೆ ಎಂದು ಆರೋಪಿಸಿ ಮಂಗಳೂರಿನ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು. ನ್ಯಾಯಾಲಯವು ದೂರನ್ನು ಪರಿಶೀಲಿಸಿ ರೆಸಾರ್ಟ್ನವರು ಹೆಚ್ಚುವರಿಯಾಗಿ ಪಡೆದ 4,33,693 ರೂ.ಗಳನ್ನು ವಾಪಸ್ ನೀಡುವಂತೆ ಹಾಗೂ ಆ ಹಣದ ಮೇಲೆ ಶೇ.8ರಷ್ಟು ಬಡ್ಡಿಯನ್ನು 2024ರ ಎ.18ರಿಂದ ಅನ್ವಯವಾಗುವಂತೆ ನೀಡಬೇಕು. ಅಲ್ಲದೆ 35,000 ರೂ.ವನ್ನು ಪರಿಹಾರ ಧನವಾಗಿ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಪುತ್ತೂರು: ಬಸ್ ನಿಲ್ದಾಣದ ಮೆಟ್ಟಿಲುಗಳ ಮೇಲೆ ವ್ಯಕ್ತಿಯ ಶವ ಪತ್ತೆ!
ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮೆಟ್ಟಿಲುಗಳ ಮೇಲೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಬಸ್ ಸ್ಟ್ಯಾಂಡ್ ನ ಕೆಳಗಿನ ಫ್ಲೋರ್ ನಿಂದ ಮೇಲಿನ ಫ್ಲೋರ್ ಗೆ ಸಾಗುವ ಮೆಟ್ಟಿಲುಗಳ ಮೇಲೆ ಮಲಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಹೃದಯಾಘಾತವಾಗಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.