ಹೊಳೆಯಲ್ಲಿ ಈಜಿ ಊರಿಗೆ ಕರೆಂಟ್ ಕೊಟ್ಟ ಲೈನ್ ಮ್ಯಾನ್!
– ಲೈನ್ ಮ್ಯಾನ್ ಸೇವೆಗೆ ಗ್ರಾಹಕರ ಮೆಚ್ಚುಗೆ
– ಮಂಗಳೂರು: ಪ್ಲೆಕ್ಸ್, ಬ್ಯಾನರ್ ಗಳಿಗೆ ಅಕ್ರಮವಾಗಿ ವಿದ್ಯುತ್ ಇಲ್ಲ
NAMMUR EXPRESS NEWS
ಹೆಬ್ರಿ: ಹೊಳೆಯಲ್ಲಿ ಸುಮಾರು 70 ಅಡಿ ದೂರದವರಗೆ ಈಜಾಡುತ್ತಾ ತುಂಡಾದ ವಿದ್ಯುತ್ ತಂತಿಯನ್ನು ದುರಸ್ತಿಗೊಳಿಸಿ ಮನೆಗೆ ವಿದ್ಯುತ್ ಸಂಪರ್ಕ ನೀಡಿದ ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ಅವರ ಸಾಧನೆ ಗಮನ ಸೆಳೆದಿದೆ.
ಶಿವಪುರ ಗ್ರಾಮದ ಉಪ್ಪಳ ಮೂರು ಸಾಲು ಹೊಳೆಯ ಮಧ್ಯದಲ್ಲಿ ಹಾದುಹೋದ ವಿದ್ಯುತ್ ತಂತಿ ತುಂಡಾಗಿ ಹಲವಾರು ದಿನಗಳು ಕಳೆದಿತ್ತು. ವಿಪರೀತ ಮಳೆಯಿಂದಾಗಿ ದುರಸ್ತಿ ಮಾಡಲಾಗದೆ ಹಾಗೆ ಉಳಿದಿತ್ತು.ಈ ಪರಿಸರದ ಜನ ವಿದ್ಯುತ್ ಮೋಟರ್ ಗಳನ್ನು ಬಳಸಲಾಗದೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ವಿಷಯ ತಿಳಿದ ದಾವಣಗೆರೆ ಚೆನ್ನಗಿರಿ ಮೂಲದ ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಹಾಗೂ ಅರೆಕಾಲಿಕ ಸಿಬ್ಬಂದಿ ಸುಧೀರ್ ಸಹಾಯದೊಂದಿಗೆ ಕೇವಲ ಇಬ್ಬರೇ ತೆರಳಿ ಸಮಸ್ಯೆ ಬಗೆಹರಿಸಿದ್ದಾರೆ.
ವಿದ್ಯುತ್ ತಂತಿಯ ಒಂದು ತುದಿಗೆ ಹಗ್ಗವನ್ನು ಕಟ್ಟಿ ಸುಮಾರು 70 ಅಡಿ ದೂರಕ್ಕೆ ಈಜಾಡಿಕೊಂಡು ಹೋಗಿ ತುಂಡಾಗಿದ್ದ ವಿದ್ಯುತ್ ತಂತಿಯನ್ನು ದುರಸ್ತಿಪಡಿಸಿ ಪರಿಸರದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಿದ್ದಾರೆ.
ಪ್ರಮೋದ್ ಅವರು ಕಳೆದ 2 ವರ್ಷದ ಹಿಂದೆ ಹೆಬ್ರಿ ಮೆಸ್ಕಾಂ ಗೆ ಸಿಬ್ಬಂದಿಯಾಗಿ ನೇಮಕಾತಿಗೊಂಡಿದ್ದು ಮೊದಲಿಂದಲೇ ಈಜನ್ನು ಕರಗತ ಮಾಡಿಕೊಂಡಿದ್ದರು. ಪ್ರಮೋದ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮಂಗಳೂರು: ಪ್ಲೆಕ್ಸ್, ಬ್ಯಾನರ್ ಗಳಿಗೆ ಅಕ್ರಮವಾಗಿ ವಿದ್ಯುತ್ ಇಲ್ಲ!
ಮಂಗಳೂರು: ದಸರಾ ಪ್ರಯುಕ್ತ ಅಳವಡಿಸುವ ಪ್ಲೆಕ್ಸ್, ಬ್ಯಾನರ್ ಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವಂತಿಲ್ಲ ಎಂದು ಮಂಗಳೂರು ಮಹಾನಗರಪಾಲಿಕೆ ಎಚ್ಚರಿಕೆ ನೀಡಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ನಗರದ ಮುಖ್ಯ ರಸ್ತೆಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿರುತ್ತದೆ. ಹಲವಾರು ಸ್ಥಳಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಂಘ ಸಂಸ್ಥೆಗಳು ತಮ್ಮತಮ್ಮಅನಧಿಕೃತ ಪ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸಿದ್ದು, ಅನಧಿಕೃತ ಪ್ಲೆಕ್ಸ್, ಬ್ಯಾನರ್ ಗಳಿಗೆ ಅಲಂಕಾರಿಕ ದೀಪಗಳನ್ನು ಅಳವಡಿಸಲು ಮಂಗಳೂರು ನಗರ ಪಾಲಿಕೆಯಿಂದ ಅಳವಡಿಸಿರುವ ಕಂಬ ಮತ್ತು ವಿದ್ಯುತ್ ದೀಪಗಳ ಸಂಪರ್ಕದಿಂದ ಅತಿಕ್ರಮಣವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ಕಂಡುಬಂದಿದೆ.ಅತಿಕ್ರಮಣ ಸಂಪರ್ಕಗಳಿಗೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಹಾಗೂ ಯಾವುದೇ ರೀತಿ ಅವಘಡಗಳು ಸಂಭವಿಸಿದ್ದಲ್ಲಿ ಪ್ಲೆಕ್ಸ್, ಬ್ಯಾನರ್ ಅಳವಡಿಸಿದವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.