ಕಾಡಲ್ಲೇ ಜೋಡಿಗಳ ಸರಸ.. ಛೇ ಎಂಥಾ ಕಾಲ ಮಾರ್ರೆ!
– ಬಂಟ್ವಾಳದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹುಡುಗ ಹುಡುಗಿ ಪರಾರಿ
– ಬಟ್ಟೆ ಬಿಟ್ಟು ಪರಾರಿ: ಅನೈತಿಕ ಚಟುವಟಿಕೆ ಬಗ್ಗೆ ಸ್ಥಳೀಯರ ಆಕ್ರೋಶ
– ಮಂಗಳೂರು: ಜೈಲಲ್ಲಿ 25 ಮೊಬೈಲ್,ಡ್ರಗ್ಸ್ ವಶ!
– ಮಂಗಳೂರು ಕಾರಾಗೃಹದ ಮೇಲೆ ಮೇಲೆ ಪೊಲೀಸರ ದಾಳಿ
– ಕಾಸರಗೋಡು: ಮೂವರು ಯುವಕರು ಆತ್ಮಹತ್ಯೆ
NAMMUR EXPRESS NEWS
ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನು ರಕ್ಷಿತಾರಣ್ಯಕ್ಕೆ ಬೈಕ್ ಸವಾರನೊಬ್ಬ ಕರೆತಂದು ಅಲ್ಲೇ ಸರಸದಲ್ಲಿದ್ದ ವೇಳೆ ಗ್ರಾಮಸ್ತರು ಅವರನ್ನು ಹುಡುಕುತ್ತಿದ್ದ ಬಗ್ಗೆ ಗಮನಕ್ಕೆ ಬಂದು ಬೈಕ್, ಬಟ್ಟೆ ಬರೆಗಳನ್ನು ಅಲ್ಲೇ ಬಿಟ್ಟು ಅರೆನಗ್ನರಾಗಿದ್ದ ಯುವಕ-ಯುವತಿ ಪರಾರಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ನಡೆದಿದೆ.
ಸಾರ್ವಜನಿಕರ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಿತಾರಣ್ಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ನಶೆಯೇರಿಸುವ ಮಾತ್ರೆಗಳು, ಕಾಂಡೋಮುಗಳು ಮತ್ತು ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಪೊಲೀಸರು ಯುವತಿ ಮತ್ತು ಯುವಕನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಅನೈತಿಕ ಚಟುವಟಿಕೆ, ಅಕ್ರಮ ದಂಧೆಗಳ ಅಡ್ಡೆಯಾಗ್ತಿದೆ ಕಾಡು!
ಅನೈತಿಕ ಚಟುವಟಿಕೆ, ಅಕ್ರಮ ದಂಧೆಗಳ ಅಡ್ಡೆಯಾಗುತ್ತಿದೆ. ಕೊಳ್ಳಲ್ನಾಡು ಗ್ರಾಮದ ಸಾಲೆತ್ತೂರು- ಕುಡ್ತಮುಗೇರು ಮೂಲಕ ಕನ್ಯಾನ ತಲುಪುವ ಕಾಂಕ್ರೀಟ್ ರಸ್ತೆ ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತಿದೆ. ಆದರೆ ದಿನವಿಡೀ ರಕ್ಷಿತಾರಣ್ಯ ಪ್ರದೇಶದಲ್ಲಿ ರಾಜಾರೋಷವಾಗಿ ಮದ್ಯ, ಡ್ರಗ್ಸ್ ಸೇವಿಸುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಾ ಜನ ಸಾಮಾನ್ಯರ ಪಾಲಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.
ರಕ್ಷಿತಾರಣ್ಯ ತಪ್ಪಲು ಪ್ರದೇಶದ ಕುಳಾಲು, ಕುದ್ರಿಯ, ಮಂಕುಡೆ, ಕೋಜಿಗುರಿ ಮತ್ತು ಕುಂಟ್ರಕಳ ಪರಿಸರದ ನೂರಾರು ವಿದ್ಯಾರ್ಥಿಗಳು ಕನ್ಯಾನ, ವಿಟ್ಲ, ಮುಡಿಪು ಶೈಕ್ಷಣಿಕ ಸಂಸ್ಥೆಗಳಿಗೆ ಹೋಗುತ್ತಿದ್ದಾರೆ. ಇದಲ್ಲದೇ ಹಲವಾರು ವಾಹನಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಅದ್ಯಾವುದರ ಪರಿವೆಯೇ ಇಲ್ಲದೇ ನಶೆಯಲ್ಲಿ ತೇಲಾಡುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪರಿಸರದ ಜನರ ತೀವ್ರ ಮುಜುಗರಕ್ಕೆ ಕಾರಣವಾಗಿದೆ.
ಮಂಗಳೂರು: ಜೈಲಲ್ಲಿ 25 ಮೊಬೈಲ್,ಡ್ರಗ್ಸ್ ವಶ!
ಮಂಗಳೂರು: ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಆರೋಪದಡಿ ಪೊಲೀಸರ ತಂಡ ಇಂದು ಮುಂಜಾನೆ ಮಂಗಳೂರಿನ ಜೈಲು ಮೇಲೆ ದಾಳಿ ನಡೆಸಿದ್ದು ಮೊಬೈಲ್ ಸೇರಿ ಹಲವು ನಿಷೇಧಿತ ವಸ್ತು ವಶಪಡಿಸಿಕೊಂಡಿದ್ದಾರೆ.
ಕೋಡಿಯಾಲ್ ಬೈಲ್ ನಲ್ಲಿರುವ ಜೈಲಿನಲ್ಲಿರುವ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಪೊಲೀಸ್ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಸುಮಾರು 150 ಮಂದಿ ಸಿಬ್ಬಂದಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಲಾಗಿದೆ.
ಈ ವೇಳೆ ಹಲವು ವಿಚಾರಣಾಧೀನ ಕೈದಿಗಳ ಬಳಿ 25 ಮೊಬೈಲ್ ಫೋನ್ಗಳು, ಒಂದು ಬ್ಲೂಟೂತ್ ಸಾಧನ, 5 ಇಯರ್ಫೋನ್, ಒಂದು ಪೆನ್ ಡ್ರೈವ್, 5 ಚಾರ್ಜರ್, ಒಂದು ಜತೆ ಕತ್ತರಿ, 3 ಕೇಬಲ್, ಗಾಂಜಾ ಪ್ಯಾಕೆಟ್ಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಕಾಸರಗೋಡು: ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆತ್ಮಹತ್ಯೆ
ಕಾಸರಗೋಡಿನ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜೇಶ್ವರ ಹೊಸಬೆಟ್ಟು ಸಸಿಹಿತ್ಲುವಿನ ಗೌತಮ್ ರಾಜ್(23), ಕುಂಜತ್ತೂರು ಮರಿಯಾಶ್ರಮ ಚರ್ಚ್ ಕಾಂಪೌಂಡ್ನ ಬ್ರಾಯನ್ ಪಿಂಟೊ(20) ಹಾಗೂ ಕಜೆಕೋಡಿಯ ಬಿ. ರಾಜೇಶ್(39) ಮೃತಪಟ್ಟವರು.
ಉಡುಪಿಯಲ್ಲಿ ವಿಡಿಯೋ ಅನಿಮೇಟರ್ ಆಗಿ ದುಡಿಯುತ್ತಿದ್ದ ಗೌತಮ್ ರಾಜ್ ಚಿಕ್ಕಮ್ಮನ ಮನೆಯಲ್ಲಿ ತಾಯಿ ಜೊತೆ ಮಂಜೇಶ್ವರ ಹೊಸಬೆಟ್ಟುನಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಎರಡು ತಿಂಗಳಿನಿಂದ ಉಡುಪಿಗೆ ಕೆಲಸಕ್ಕೆ ತೆರಳುತ್ತಿದ್ದ ಗೌತಮ್ ರಾಜ್ ಮಂಗಳವಾರ ಮನೆಯಲ್ಲಿದ್ದು ಮಧ್ಯಾಹ್ಮ ಕೋಣೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹಾಗೆಯೇ ಮಂಜೇಶ್ವರದ ಮೊರತ್ತಣೆಯ ರಾಜೇಶ್(40) ಮನೆ ಸಮೀಪ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕಾಂಕ್ರೀಟ್ ಕಾರ್ಮಿಕರಾಗಿದ್ದರು. ಇನ್ನು ಕುಂಜತ್ತೂರಿನ ಬ್ರಾಯನ್ ಪಿಂಟೊ ಸೋಮವಾರ ರಾತ್ರಿ ಮನೆಯಿಂದ ಸ್ಕೂಟರ್ನಲ್ಲಿ ತೆರಳಿದ್ದು, ಬಳಿಕ ಮರಳಿ ಬಂದಿರಲಿಲ್ಲ. ಮಂಗಳವಾರ ಬ್ರಾಯನ್ನ ತರವಾಡು ಮನೆ ಬಳಿ ಸ್ಕೂಟರ್ ಪತ್ತೆಯಾಗಿದ್ದು, ಸಂಶಯಗೊಂಡು ಮನೆಯೊಳಗೆ ಗಮನಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.