– ಉಡುಪಿ : ಕುಖ್ಯಾತ ಅಂತರ್ ಜಿಲ್ಲಾ ಕಳ್ಳನ ಸೆರೆ
– 46.67 ಲಕ್ಷ ಮೌಲ್ಯದ ಸೊತ್ತು ವಶ
– ಮೂಡಬಿದ್ರೆ : ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ
– ಮಂಗಳೂರು: ವಿದ್ಯುತ್ ಶಾಕ್ ತಗುಲಿ ಕಾರ್ಮಿಕನ ಸಾವು
NAMMUR EXPRESS NEWS
ಉಡುಪಿ: ಕುಂಜಿಬೆಟ್ಟುವಿನಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಅವರು ಈತ ಅ.8ರಂದು ಕುಂಜಿಬೆಟ್ಟುವಿನ ಅಮ್ಮುಂಜೆ ವಿಠಲ್ದಾಸ್ ನಾಯಕ್ ಅವರ ಮನೆಯ ಬಾಗಿಲು ಮುರಿದು, ಬೆಡ್ ರೂಮ್ ನ ಅಲ್ಮೇರಾದಲ್ಲಿದ್ದ ಸುಮಾರು 66,36,300 ರೂ. ಮೌಲ್ಯದ ಅಂದಾಜು 1882 ಗ್ರಾಂ ತೂಕದ ಚಿನ್ನಾಭರಣ ಹಾಗೂ 6,70,500 ರೂ. ಮೌಲ್ಯದ 7,450 ಗ್ರಾಂ ತೂಕದ ಬೆಳ್ಳಿಯ ಸೊತ್ತುಗಳು ಸಹಿತ ಒಟ್ಟು 73,06,800 ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣದ ತನಿಖೆಗಾಗಿ ಪಿಎಸ್ ಐ ಪುನೀತ್ ಕುಮಾರ್ ಬಿ.ಇ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಕಾರ್ಯಾಚರಣೆಗೆ ಇಳಿದ ಪೊಲೀಸರು ಅ.31ರಂದು ಉಡುಪಿ ಬಲಾಯಿಪಾದೆಯ ಜಂಕ್ಷನ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಬ್ರಹ್ಮಾವರ, ತರೀಕೆರೆ, ಅರಸೀಕೆರೆ ಮತ್ತು ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿಯೂ ಕೂಡ ಭಾಗಿಯಾಗಿದ್ದಾನೆ. ಅಲ್ಲದೆ, ಈತನ ವಿರುದ್ಧ ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದರು.
ಇಸ್ಪೀಟ್ ಅಡ್ಡೆಕ್ಕೆ ಪೊಲೀಸರ ದಾಳಿ
ಮೂಡಬಿದ್ರೆ : ಮೂಡಬಿದ್ರೆ ಪೊಲೀಸರು ಬೆಳುವಾಯಿಯ ಮುಡೇಕಾಡು ಎಂಬಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿ ಜೂಜಾಟ ಆಡುತ್ತಿದ್ದ ಆರು ಮಂದಿಯನ್ನ ವಶಕ್ಕೆ ಪಡೆದಿದ್ದಾರೆ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದ ನಂತರ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಠಾಣಾ ಅಕ್ರ 167/2023 ಕಲಂ 87 ಕೆ ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಂದ ಸುಮಾರು 9000 ರೂ ಹಣ ಮತ್ತು ಒಂದು ಸ್ವಿಫ್ಟ್ ಕಾರು ಮತ್ತು ಒಂದು ಬೈಕ್ ನ್ನು ವಶಕ್ಕೆ ಪಡೆದಿದ್ದಾರೆ.
ವಿದ್ಯುತ್ ಶಾಕ್ ತಗುಲಿ ಕಾರ್ಮಿಕನ ಸಾವು
ಮಂಗಳೂರು: ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಹೊರವಲಯದ ಮೂಡುಶೆಡ್ಡೆ ಎಂಬಲ್ಲಿ ನಡೆದಿದೆ. ಸೋನ್ ಸಿಂಗ್ ಗೊಂಡ (22) ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿಯ ವೇಳೆ ಯುವರಾಜ್ ಶಿವ ಕೃಪ ಏರೇಂಜರ್ಸ್ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ. ಸೋನ್ ಸಿಂಗ್ ಶಿವ ಕೃಪ ಏರೇಂಜರ್ಸ್ ಗೋಡನ್ನಲ್ಲಿ ಕೆಲಸ ಮಾಡುತ್ತಿರುವ ವೇಳೆ ಗೋಂಡನ್ನ ಶೂಟರ್ ನಲ್ಲಿ ವಿದ್ಯುತ್ ಹರಿದು ಸಾವನ್ನಪ್ಪಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.