ಕಾರಿನೊಳಗೆ ಇತ್ತು ಹೆಬ್ಬಾವು!
– ಬೈಂದೂರು: ಕಾರಿನ ಬಾನೆಟಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
– ಮೂಡುಬಿದಿರೆ: ಪರೀಕ್ಷೆ ಬರೆದು ಮನೆಗೆ ಬರುತ್ತಿದ್ದ ಬಾಲಕ ಅಪಘಾತಕ್ಕೆ ಬಲಿ!
– ಪುತ್ತೂರು: ಸಾಲ ವಸೂಲಿಗೆ ಹೋದ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲಿಂದ ಶೂಟ್ ಬೆದರಿಕೆ: ಕೇಸ್!
NAMMUR EXPRESS NEWS
ಉಡುಪಿ: ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಬೃಹತ್ ಹೆಬ್ಬಾವು ಕಂಡು ಕಾರು ಮಾಲೀಕ ಬೆಚ್ಚಿಬಿದ್ದಿದ್ದಾರೆ.
ಬಡಕೆರೆ ಜೋಯಿಸರಬೆಟ್ಟು ನಿವಾಸಿ ಚಂದ್ರಪ್ರಕಾಶ್ ಶೆಟ್ಟಿ ಎಂಬವರ ಕಾರಿನ ಬಾನೆಟ್ ನಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಅವರು ಕಾರು ಚಲಾಯಿಸಿಕೊಂಡು ಬರುವಾಗ ಕಾರಿನಲ್ಲಿ ವಿಪರೀತ ಸದ್ದು ಕೇಳಿಸಿದೆ. ಕಾರು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 12ಅಡಿ ಉದ್ದದ ಹೆಬ್ಬಾವೊಂದು ಬಾನೆಟ್ ಒಳಗೆ ತಣ್ಣಗೆ ಮಲಗಿತ್ತು. ಕಾರು ಚಲಾಯಿಸಿಕೊಂಡು ಹೋದಾಗ ಬಿಸಿಯ ಹಿನ್ನೆಲೆಯಲ್ಲಿ ಹೆಬ್ಬಾವು ಹೊರಗೆ ಬರಲು ಒದ್ದಾಡಿತ್ತು. ಕಾರಿನ ಮಾಲೀಕ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಸುರಕ್ಷಿತವಾಗಿ ಹೆಬ್ಬಾವನ್ನು ಅಭಯಾರಣ್ಯಕ್ಕೆ ಬಿಡಲಾಯಿತು.
ಮೂಡುಬಿದಿರೆ: ಪರೀಕ್ಷೆ ಬರೆದು ಮನೆಗೆ ಬರುತ್ತಿದ್ದ ಬಾಲಕ ಅಪಘಾತಕ್ಕೆ ಬಲಿ!
ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿ ಓರ್ವ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ದುರ್ಘಟನೆ ರಾಷ್ಟ್ರೀಯ ಹೆದ್ದಾರಿ ಬನ್ನಡ್ಕದಲ್ಲಿ ಸಂಭವಿಸಿದೆ.
ಪಡುಮಾರ್ನಾಡು ಪಂಚಾಯತ್ ಬಳಿಯ ಅಚ್ಚರಕಟ್ಟೆ ನಿವಾಸಿ ರವಿ ಅವರ ಪುತ್ರ, ಮೂಡುಬಿದಿರೆ ಜೈನ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಮೃತಪಟ್ಟ ದುರ್ದೈವಿ. ವಿದ್ಯಾರ್ಥಿ ಆದಿತ್ಯ ಪರೀಕ್ಷೆ ಮುಗಿಸಿ ತನ್ನ ಗೆಳೆಯರೊಡನೆ ಮನೆಗೆ ಹೋಗಲು ಬನ್ನಡ್ಕದಲ್ಲಿ ಬಸ್ಸಿನಿಂದಿಳಿದು ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆದಿತ್ಯ ಹೆದ್ದಾರಿಯಿಂದ ಚರಂಡಿಗೆ ಎಸೆಯಲ್ಪಟ್ಟಿದ್ದು ಈ ಸಂದರ್ಭ ಕಾರಿನವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಆದರೆ ಅಧಿಕ ರಕ್ತಸ್ರಾವವಾಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿ ವಿದ್ಯಾರ್ಥಿಯೋರ್ವನನ್ನು ಬಲಿ ತೆಗೆದುಕೊಂಡಿದೆ.
ಪುತ್ತೂರು: ಸಾಲ ವಸೂಲಿಗೆ ಹೋದ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲಿಂದ ಶೂಟ್ ಬೆದರಿಕೆ: ಕೇಸ್!
ಪುತ್ತೂರು: 2 ಕೋಟಿ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿಯೊಬ್ಬರ ಮನೆಗೆ ಹೋದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಪಿಸ್ತೂಲ್ ತೋರಿಸಿ ಬೆದರಿಸಿದ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಪಿರ್ಯಾದಿದಾರರಾದ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿಯಾದ ಶ್ರೀ ಚೈತನ್ಯ ಹೆಚ್.ಸಿ (40)ರವರ ದೂರಿನಂತೆ, ಸದ್ರಿಯವರು ಭಾರತೀಯ ಸ್ಟೇಟ್ ಬ್ಯಾಂಕ್, ಕೋರ್ಟ್ ರಸ್ತೆ, ಪುತ್ತೂರು ಇಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬ್ಯಾಂಕ್ ನಲ್ಲಿ ಪುತ್ತೂರು ತಾಲೂಕು, ಬಲ್ನಾಡು ಗ್ರಾಮದ ಉಜಿರ್ಪಾದೆ ನಿವಾಸಿ ಶ್ರೀಮತಿ ಕೀರ್ತಿ ಅಖಿಲೇಶ್ ಎಂಬವರು ರೂ 2 ಕೋಟಿ ಸಾಲ ಮಾಡಿದ್ದು, ಸಾಲ ಮರುಪಾವತಿ ಮಾಡದೇ ಡಿಫಲ್ಟರ್ ಆಗಿರುತ್ತದೆ. ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್ ನೋಟೀಸ್ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ, ದಿನಾಂಕ 25.09.2024 ರಂದು ಮಧ್ಯಾಹ್ನ, ಪಿರ್ಯಾದಿದಾರರು ಸಹೋದ್ಯೋಗಿಗಳಾದ ಆಕಾಶ್ ಚಂದ್ರಬಾಬು ಮತ್ತು ಶ್ರೀಮತಿ ದಿವ್ಯಶ್ರೀರವರೊಂದಿಗೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಉಜಿರ್ಪಾದೆಯಲ್ಲಿರುವ ಕೀರ್ತಿ ಅಖಿಲೇಶ್ ರವರ ಮನೆಗೆ ಹೋದಾಗಅಖಿಲೇಶ್ ರವರ ಮನೆಗೆ ಹೋದಾಗ ಮನೆಯಲ್ಲಿದ್ದ ಶ್ರೀಮತಿ ಅರುಣ್ ಕಿಶೋರ್ ರವರು ಪಿರ್ಯಾದುದಾರರನ್ನು ಮನೆ ಒಳಗೆ ಬರಮಾಡಿಕೊಂಡಿರುತ್ತಾರೆ. ಬಳಿಕ ಅಖಿಲೇಶ್ ರವರಿಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ. ಅಖಿಲೇಶ್ ರವರು ಮನೆಗೆ ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿರುತ್ತಾರೆ. ಬಳಿಕ ಕೃಷ್ಣ ಕಿಶೋರ್ ರವರು ಕೂಡಾ ಮನೆಗೆ ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್ ತೋರಿಸಿ ಶೂಟ್ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.