ಕರಾವಳಿಯಲ್ಲಿ ಮಹಾ ಮಳೆಗೆ ಮೂವರು ಬಲಿ!
– ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ
– ಭಾರೀ ಹಾನಿ: ಶಾಲೆ, ಕಾಲೇಜುಗಳಿಗೆ ರಜೆ
– ಎರಡು ದಿನದಲ್ಲಿ ನಾಲ್ಕು ಮಂದಿ ದುರ್ಮರಣ
NAMMUR EXPRESS NEWS
ದಕ್ಷಿಣ ಕನ್ನಡ/ ಉಡುಪಿ: ಕರಾವಳಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಇದೀಗ ಉಗ್ರ ರೂಪ ತಾಳಿದೆ.
ಎರಡು ಜಿಲ್ಲೆಯಲ್ಲಿ ಮಳೆ ತೀವ್ರತೆ ಹೆಚ್ಚಾಗಿದ್ದು ಮಂಗಳೂರು ನಗರ ಸೇರಿದಂತೆ ಎಲ್ಲಾ ಕಡೆ ಅಪಾಯ ಸೃಷ್ಟಿ ಮಾಡಿದೆ.
ಭಾರೀ ಮಳೆಯಿಂದಾಗಿ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ಸವಾರ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ವೇಳೆ ನಡೆದಿದೆ. ಮೃತರನ್ನು ಸ್ಥಳಿಯ ನಿವಾಸಿ ದಿವಾಕರ್ ಶೆಟ್ಟಿ( 65) ಎಂದು ಗುರುತಿಸಲಾಗಿದೆ.
ಸ್ಕೂಟರಿನಲ್ಲಿ ರಾತ್ರಿ ಮನೆಗೆ ಬರುತ್ತಿದ್ದಾಗ ಮನೆ ಸಮೀಪದ ರಸ್ತೆಯ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ನಿಯಂತ್ರಣ ತಪ್ಪಿ, ರಸ್ತೆ ಬದಿ ಯಾವುದೇ ತಡೆಗೋಡೆ ಇಲ್ಲದ ಸುಮಾರು 15- 20 ಅಡಿ ಆಳದ ಕೆರೆಗೆ ಸ್ಕೂಟರ್ ಸಮೇತ ಬಿದ್ದರೆನ್ನಲಾಗಿದೆ. ಕೂಡಲೇ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಅಗ್ನಿಶಾಮಕ ದಳ ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ಕೆರೆಗೆ ಧುಮುಕಿ ಮೊದಲು ಸ್ಕೂಟರ್ ಅನ್ನು ಮೇಲಕ್ಕೆ ಎತ್ತಿದರು. ನಂತರ ಹುಡುಕಾಟ ನಡೆಸಿ ಬುಧವಾರ ನಸುಕಿನ ವೇಳೆ 1:30ರ ಸುಮಾರಿಗೆ ಮೃತದೇಹವನ್ನು ಮೇಲಕ್ಕೆ ತಂದರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಮೊದಲ ಬಲಿ!:
ಮಂಗಳೂರು ಹೊರವಲಯದ ಪಿಲಾರು ಎಂಬಲ್ಲಿ ಸುರೇಶ್ ತನ್ನ ಮನೆ ಸಮೀಪದ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದು, ಇವರು ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು: ವಿದ್ಯುತ್ ತಂತಿ ತುಳಿದು ಯುವಕನೋರ್ವ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಕುಳಾಯಿಯಲ್ಲಿ ನಡೆದಿದೆ.
ಮೃತ ಪಟ್ಟ ಯುವಕನನ್ನು ಸಂತೋಷ್ ಎಂದು ಗುರುತಿಸಲಾಗಿದೆ.ಮಂಗಳವಾರ ತಡರಾತ್ರಿ ಸಮುದ್ರ ತೀರದಲ್ಲಿ ಇದ್ದ ಭಾರಿ ಸುಂಟರಗಾಳಿಗೆ ವಿದ್ಯುತ್ ತಂತಿ ಕಡಿದು ಬಿದಿದ್ದು ಮುಂಜಾನೆ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ಎಂಬವರು ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ತಿಳಿಯದೆ ಅದನ್ನು ತುಳಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಸುಂಟರಗಾಳಿಗೆ ವಿವಿಧಡೆ ಮನೆಯ ಛಾವಣಿ ಶೀಟುಗಳು ಹಾರಿ ಹೋಗಿ ಹಾನಿ ಉಂಟಾಗಿದೆ.
ಆರಿದ್ರಾ ಆರ್ಭಟ: ಶಾಲೆ, ಕಾಲೇಜಿಗೆ ರಜೆ
ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಅದ್ರಲ್ಲೂ ಆರಿದ್ರಾ ಮಳೆಯಿಂದಾಗಿ ಕರ್ನಾಟಕ ಕರಾವಳಿಯಲ್ಲಿ ಮುಂಗಾರು ಚುರುಕಾಗಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಮೂರು ಜಿಲ್ಲೆಗಳ ಶಾಲೆ, ಕಾಲೇಜುಗಳಿಗೆ ಆಯಾಯ ಜಿಲ್ಲಾಡಳಿತ ರಜೆ ಘೋಷಿಸಿವೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಕರಾವಳಿ ಜಿಲ್ಲೆಗಳಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಇಂದೂ ಕೂಡ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಸಮುದ್ರದಲ್ಲಿ ಅಪಾಯದ ಎಚ್ಚರಿಕೆ
ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ತೀರ ಪ್ರದೇಶಗಳಲ್ಲಿ ಕಡಲ್ಕೊರೆತ ಉಂಟಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ.
ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದೆ. ಬ್ರಹ್ಮಾವರ, ಕಾಪು, ಬೈಂದೂರು, ಕಾರ್ಕಳದಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿದೆ. ಬಹುತೇಕ ಪ್ರದೇಶಗಳಲ್ಲಿ ಇದೀಗ ಕೃತಕ ನೆರೆಯ ಭೀತಿ ಎದುರಾಗಿದೆ. ಇಂದೂ ಕೂಡ ಜಿಲ್ಲಾಡಳಿತ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿನ ಅಂಗನವಾಡಿ, ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಎಡೆಬಿಡದೆ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವ್ಯಾಪಕ ಮಳೆ ಸುರಿಯುತ್ತಿದೆ. ಜುಲೈ 4 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಮೂಲ್ಕಿ, ಮೂಡಬಿದಿರೆ, ಬಂಟ್ವಾಳ ತಾಲೂಕುಗಳ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಮಂಗಳವಾರವೂ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜುಲೈ 5 ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜೋರಾಗಿರಲಿದೆ. ಹೀಗಾಗಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಜಾರಿ ಮಾಡಿದೆ.
ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿನ ಅಂಗನವಾಡಿ, ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಲಿನ್ ಅವರು ಅವರು ಆದೇಶ ಹೊರಡಿಸಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರು ಕೂಡ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆಯನ್ನು ನೀಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಇದ್ದು, ವಿಪತ್ತು ನಿರ್ವಹವಣೆಯ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡದಲ್ಲೂ ಭಾರೀ ಮಳೆ
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಜೋರಾಗಿದೆ. ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023