ಮಾರ್ಬಲ್ ಲಾರಿ ಬ್ರೇಕ್ ಫೈಲ್: ಓರ್ವ ಸಾವು
– ವಿಟ್ಲ ಒಡಿಯೂರಿಗೆ ಬರುತ್ತಿದ್ದ ಮಾರ್ಬಲ್ ಲಾರಿ
– ಕಾರ್ಕಳ : ಕಾಣೆಯಾದವ ಶವವಾಗಿ ಪತ್ತೆ..!
– ಉಡುಪಿ: 50 ಅಡಿ ಆಳದ ಬಾವಿಗೆ ಬಿದ್ದ ಮಹಿಳೆ ರಕ್ಷಣೆ
– ಮಂಗಳೂರು: ಮನೆಯಲ್ಲೆ ವೇಶ್ಯಾವಾಟಿಕೆ ದಂಧೆ
– ಕಾರ್ಕಳ : ರಬ್ಬರ್ ಹೌಸ್ನಲ್ಲಿ ಅಗ್ನಿ ಅವಘಡ
NAMMUR EXPRESS ನ್ಯೂಸ್
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆ ಬಂಟವಾಳ ತಾಲೂಕು ವಿಟ್ಲ ಒಡಿಯೂರಿಗೆ ಬರುತ್ತಿದ್ದ ಮಾರ್ಬಲ್ ಲಾರಿ ಇಳಿಜಾರು ರಸ್ತೆಯಲ್ಲಿ ಬ್ರೇಕ್ ಫೈಲ್ ಆಗಿ ನೇರವಾಗಿ ದೇವಸ್ಥಾನದ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಸಾವನ್ನು ಕಂಡಿದ್ದು ಮೂವರಿಗೆ ಗಾಯವಾಗಿದೆ. ಮಾರ್ಬಲ್ ತುಂಬಿಕೊಂಡು ಬಂದ ಲಾರಿ ಪಲ್ಟಿಯಾಗಿ ಗಂಭೀರ ಗಾಯಗೊಂಡ ನಾಲ್ವರಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಮೃತಪಟ್ಟ ವ್ಯಕ್ತಿಯನ್ನು ಉತ್ತರಭಾರತ ಮೂಲದವರು ಎನ್ನಲಾಗಿದೆ. ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಸಾವನ್ನಪ್ಪಿದ್ದ ವ್ಯಕ್ತಿಯನ್ನು ಉತ್ತರ ಭಾರತ ಮೂಲದ ಸುಭಾಶ್ಚಂದ್ರ ಎನ್ನಲಾಗಿದ್ದು, ಹರ್ಷದ್ ಮತ್ತು ಪವನ್ ಹಾಗೂ ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಮೂವರಿಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ ನಾಲ್ವರಲ್ಲಿ ಇಬ್ಬರು ಉತ್ತರ ಭಾರತದ ಮೂಲದವರು ಮತ್ತು ಇಬ್ಬರು ಮಂಗಳೂರಿನವರು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಾಣೆಯಾದವ ಶವವಾಗಿ ಪತ್ತೆ..!
ಕಾರ್ಕಳ : ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.
ದುರ್ಗಾ ಗ್ರಾಮದ ಸಂದೇಶ್ ಶೆಟ್ಟಿ ಅ. 4ರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಕಾರ್ಕಳ ಪುರಸಭಾ ವ್ಯಾಪ್ತಿಯ ಕಾವೇರಡ್ಕ ಅಯೋಧ್ಯಾ ನಗರ ದುರ್ಗ ತೆಳ್ಳಾರು ಸಂಪರ್ಕ ಸೇತುವೆಯಡಿ ಶವವೊಂದನ್ನು ಗಮನಿಸಿದ ಸ್ಥಳೀಯರು ಕಾರ್ಕಳ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮೇಲಕ್ಕೆತ್ತಿದರು.
ಸಂದೇಶ್ ಶೆಟ್ಟಿ ಕಾಣೆಯಾಗಿರುವ ಕುರಿತು ಅ. 3 ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
50 ಅಡಿ ಆಳದ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ
ಉಡುಪಿ: 50 ಅಡಿ ಆಳದ ಬಾವಿಗೆ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದ ಘಟನೆ ಕೊಳಂಬೆ ಬೈಲೂರು ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಸವಿತಾ ಕಾಮತ್ ಎಂಬವರು ಸೋಮವಾರ ರಾತ್ರಿ ಸುಮಾರು 50 ಅಡಿ ಆಳದ 10 ಅಡಿ ಅಗಲದ ಮತ್ತು 30 ಅಡಿ ನೀರಿರುವ ಬಾವಿಗೆ, ಅಕಸ್ಮಿಕವಾಗಿ ಬಿದ್ದರೆನ್ನಲಾಗಿದೆ. ಈ ವೇಳೆ ಬಾವಿಯೊಳಗೆ ಇವರು ಪಂಪ್ ಸೆಟ್ ನ ಫುಟ್ಬಾಲ್ ಗೆ ಜೋಡಿಸಿರುವ ಹಗ್ಗವನ್ನು ಹಿಡಿದು ಜೀವನ್ಮರಣ ಪರಿಸ್ಥಿತಿಯಲ್ಲಿದ್ದರು. ಕೂಡಲೇ ಉಡುಪಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ಸತೀಶ್ ನೇತೃತ್ವದಲ್ಲಿ ಸಿಬ್ಬಂದಿ ವಿನಾಯಕ ಬಾವಿಗೆ ಹಗ್ಗದ ಸಹಾಯದಿಂದ ಇಳಿದು ಮಹಿಳೆಯನ್ನು ಹಗ್ಗದ ಮೂಲಕ ಮೇಲಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿದ್ದಾರೆ.
ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ – ಇಬ್ಬರು ಸೆರೆ.!
ಮಂಗಳೂರು: ಹೆರ್ಗಾ ಗ್ರಾಮದ ಸರಳೇಬೆಟ್ಟುವಿನ ಮನೆಯೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ಸಂಬಂಧ ಇಬ್ಬರನ್ನು ಮಣಿಪಾಲ ಪೊಲೀಸರು ಅ.2ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.ಮಂಡ್ಯದ ಶಿವರಾಜ(38) ಮತ್ತು ಬಾಗಲಕೋಟೆಯ ನಿಂಗಪ್ಪ ಅಂಬಿಗೇರಾ (29) ಬಂಧಿತಆರೋಪಿಗಳು. ಇನ್ನೋರ್ವ ಆರೋಪಿ ನವೀನ್ ಗೌಡ ಎಂಬಾತ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಎರಡು ಮೊಬೈಲ್ ಫೋನ್ ಹಾಗೂ 15 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಹಣಗಳಿಸುವ ಉದ್ದೇಶದಿಂದ ಹುಡುಗಿಯರನ್ನು ಪುಸಲಾಯಿಸಿ ಕರೆ ತಂದು ಅವರಿಗೆ ಬಲವಂತಾಗಿ ಪುರುಷರನ್ನು ಒದಗಿಸಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದಾಗಿ ದೂರಲಾಗಿದೆ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಬ್ಬರ್ ಸ್ಕೋಕ್ ಹೌಸ್ನಲ್ಲಿ ಅಗ್ನಿ ಅವಘಡ
ಕಾರ್ಕಳ : ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರೆಬೈಲು ಎಂಬಲ್ಲಿ ರಬ್ಬರ್ ಸ್ಕೋಕ್ ಹೌಸ್ನಲ್ಲಿ ಅ. 4 ರಂದು ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಬ್ಬರ್ ಶೀಟ್ ಮಾಡಲು ಹಾಕಿದ್ದ ಬೆಂಕಿ ಕಟ್ಟಡಕ್ಕೆ ತಗುಲಿ ಅವಘಡ ಸಂಭವಿಸಿದೆ. ಪರಿಣಾಮವಾಗಿ 50 ರಬ್ಬರ್ ಶೀಟ್, ಕಟ್ಟಡದ ಮೇಲ್ಯಾವಣಿಗೆ ಹಾಕಿದ್ದ ಶೀಟ್ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬೀ. ಎಂ. ಸಂಜೀವ್, ಸಿಬ್ಬಂದಿ ಸುರೇಶ್, ಜಯಮೂಲ್ಯ ಕೇಶವ್, ಸುಜಯ್, ವಿನಾಯಕ್ ಪಾಲ್ಗೊಂಡಿದ್ದರು.