ಟಾಪ್ ನ್ಯೂಸ್ ಕರಾವಳಿ
ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ!
– ಮಂಗಳೂರು ನಗರದಲ್ಲಿ ಘಟನೆ
– ದಕ್ಷಿಣ ಕನ್ನಡದಲ್ಲಿ 5 ಕೋಟಿ ರೂ. ಮೌಲ್ಯದ ಮದ್ಯ ವಶ
– ಹಿಂದೂ ಸಂಘಟನೆ ಮುಖಂಡನಿಗೆ ಚೂರಿ ಇರಿತ: ಅರೆಸ್ಟ್
NAMMUR EXPRESS NEWS
ಮಂಗಳೂರು: ನಗರದ ಉರ್ವಾ ಚಿಲಿಂಬಿ ಸಮೀಪದ ಸಾಯಿಮಂದಿರದ ಬಳಿ ಚುನಾವಣೆ ಪ್ರಚಾರ ನಡೆಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿದ್ದಲ್ಲದೇ ವಾಗ್ವಾದ ನಡೆದು ಮಾತಿಗೆ ಮಾತು ಬೆಳೆದು ಅದು ಹೊಡೆದಾಡುವ ಹಂತಕ್ಕೆ ಬಂದ ಘಟನೆ ನಡೆದಿದೆ. ರಾಮನವಮಿ ಪ್ರಯುಕ್ತ ಸಾಯಿ ಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಭಕ್ತರರು ಹೆಚ್ಚುನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದೇ ವೇಳೆ, ಮಂದಿರದ ಮುಂದಿನ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತ ತೆರಳುತ್ತಿದ್ದರು. ಇದನ್ನು ಕಂಡ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ಹೇಳಿದ್ದು ವಾಗ್ವಾದಕ್ಕೆ ಕಾರಣವಾಯಿತು. ಘಟನೆ ನಡೆದ ಕೆಲಹೊತ್ತಿನಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಸೇರಿ ಮಾತಿಗೆ ಮಾತು ಬೆಳೆದಿದೆ.
ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ನಮ್ಮಲ್ಲಿ ಹೇಳೋಕೆ ನೀವು ಯಾರು ಎಂದು ಬಿಜೆಪಿಯವರು ಪ್ರಶ್ನಿಸಿ, ಮಂದಿರದಲ್ಲಿ ರಾಜಕೀಯ ಇಲ್ಲನಾವು ಹೊರಗಡೆಯಿಂದ ತೆರಳುತ್ತಿದ್ದಾಗ ನೀವು ಯಾಕೆ ಅಡ್ಡಿ ಬಂದಿದ್ದು ಎಂದು ಪ್ರಶ್ನಿಸಿದ್ದಾರೆ. ಇತ್ತಂಡಗಳು ಮಾತಿಗೆ ಮಾತು ಬೆಳೆಸಿ ಹೊಡೆದಾಟ ಹಂತಕ್ಕೆ ತಲುಪಿತ್ತು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಕಾಂಗ್ರೇಸ್ ಮುಖಂಡ ಮಿಥುನ್ ರೈ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಉರ್ವಾ ಇನ್ಸ್ ಪೆಕ್ಟರ್ ಭಾರತಿ ಹಾಗೂ ಸಿಬ್ಬಂದಿ ವರ್ಗ ಎರಡು ಗುಂಪುಗಳನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ನೀತಿ ಸಂಹಿತೆ ಜಾರಿಯಾದ ಬಳಿಕ 5ಕೋಟಿ ರೂ. ಮೌಲ್ಯದ ಮದ್ಯ ವಶ
ಮಂಗಳೂರು: ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೫ ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಏ.17ರವರೆಗೆ ಜಿಲ್ಲೆಯಲ್ಲಿ 5,65,72,108 ರೂಪಾಯಿ ಮೌಲ್ಯದ 1,42,442 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಇದಲ್ಲದೇ 8,69,950 ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.ಅಬಕಾರಿ ನಿಯಮ ಉಲ್ಲಂಘನೆ ಹಾಗೂ ಇತರೆ ಸೇರಿದಂತೆ ಒಟ್ಟು 1022 ಎಫ್.ಐ.ಆರ್ ಪ್ರಕರಣ ದಾಖಲಾಗಿದೆ.
ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿ ಇರಿತ : ಆರೋಪಿ ಅರೆಸ್ಟ್
ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬಂಟ್ವಾಳ ನಿವಾಸಿ ರವಿ ಯಾನೆ ರವೀಂದ್ರ ಬಂಧಿತ ಆರೋಪಿಯಾಗಿದ್ದಾನೆ. ಎ.14 ರಂದು ಭಾನುವಾರ ರಾತ್ರಿ ವೇಳೆ ಜಕ್ರಿಬೆಟ್ಟು ಎಂಬಲ್ಲಿ ಹಿಂದೂ ಯುವಸೇನೆಯ ಮುಖಂಡ ಪುಷ್ಪರಾಜ್ ಎಂಬಾತನಿಗೆ ರವಿ ಎಂಬಾತ ಚೂರಿಯಿಂದ ಇರಿದು ಪರಾರಿಯಾಗಿದ್ದ. ಆಟೊ ರಿಕ್ಷಾದಲ್ಲಿ ಜೊತೆಯಾಗಿ ಹೋಗುತ್ತಿದ್ದಾಗ ಪುಷ್ಪರಾಜ್ ಗೆ ರವಿ ಚೂರಿದು ಪರಾರಿಯಾಗಿದ್ದ ಎನ್ನಲಾಗಿದೆ
ಚೂರಿ ಇರಿತದಿಂದ ಗಾಯಗೊಂಡಿದ್ದ ಪುಷ್ಪರಾಜನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಬಳಿಕ ಆರೋಪಿ ರವಿ ಮೊಬೈಲ್ ಫೋನ್ ಸ್ವಿಚ್ ಆಪ್ ಮಾಡಿ ಪರಾರಿಯಾಗಿದ್ದ. ಇದೀಗ ಘಟನೆ ನಡೆದು ನಾಲ್ಕು ದಿನಗಳ ಬಳಿಕ ಈತನನ್ನು ಕಾವಳಕಟ್ಟೆ ಎಂಬಲ್ಲಿಂದ ಪೋಲೀಸರು ವಶಕ್ಕೆ ಪಡೆದುಕೊಂಡು ಗಲಾಟೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ. ಚೂರಿ ಇರಿದ ಘಟನೆಗೆ ಸ್ಪಷ್ಟವಾದ ಕಾರಣ ಪೋಲಿಸ್ ತನಿಖೆಯ ಬಳಿಕ ತಿಳಿಯಬೇಕಿದೆ.