– ಗೂಗಲ್ ಪೇ ಸರಿ ಮಾಡುವ ನೆಪದಲ್ಲಿ 38 ಸಾವಿರ ರೂ. ಮೋಸ!
– ಕಾರ್ಕಳದಲ್ಲಿ ನಡೆದ ಘಟನೆ: ಹೇಗೆ ಮಾಡಿದ್ದು ಮೋಸ?
– ಮೂಡಬಿದಿರೆ: ಗಾಂಜಾ ಮಾರಾಟ: ಹುಡುಗರ ಬಂಧನ
– ಬಂಟ್ವಾಳ: ಖೋಟಾ ನೋಟು ಪ್ರಕರಣ; 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
– ಬೆಳ್ತಂಗಡಿ : ಕಡಿರುದ್ಯಾವರದಲ್ಲಿ ಆನೆ ದಾಳಿ
NAMMUR EXPRESS NEWS :
ಕಾರ್ಕಳ : ಗೂಗಲ್ ಪೇ ಸರಿ ಮಾಡುವ ನೆಪದಲ್ಲಿ 38 ಸಾವಿರ ರೂ. ವಂಚನೆ ಮಾಡಿರುವ ಘಟನೆ ಕಾರ್ಕಳದಿಂದ ವರದಿಯಾಗಿದೆ. ಕಾರ್ಕಳದ ಕಸಬಾದ ಚೋಲ್ಪಾಡಿ ನಿವಾಸಿ ಹರೀಶ್ ರಾಘವ ಹೆಗ್ಡೆ (66) ಎಂಬವರು ಆನ್ಲೈನ್ ವಂಚನೆಗೆ ಗುರಿಯಾಗಿ 38 ಸಾವಿರ ರೂ. ಕಳೆದುಕೊಂಡಿದ್ದಾರೆ. ತಮ್ಮಗೂಗಲ್ ಪೇ ಆಪ್ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಅವರು ಸೆ. 4ರಂದು ಇಂಟರ್ನೆಟ್ ಮೂಲಕ ಹುಡುಕಿ ಗೂಗಲ್ ಪೇ ಗೆ ದೂರು ಸಲ್ಲಿದ್ದರು. ಅಂದೇ ರಾತ್ರಿ ಓರ್ವ ವ್ಯಕ್ತಿ 9330944212 ಮತ್ತು 9064210959 ಎಂಬ ಎರಡು ನಂಬರ್ಗಳಿಂದ ಅವರಿಗೆ ಕರೆಮಾಡಿ ಗೂಗಲ್ ಪೇಯಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾನೆ. ಗೂಗಲ್ ಪೇ ಸಮಸ್ಯೆಯ ಬಗ್ಗೆ ವಿಚಾರಿಸಿ, ಬ್ಯಾಂಕ್ ಖಾತೆಯ ವಿವರ ಪಡೆದುಕೊಂಡು ಒಟಿಪಿ ಕೇಳಿ ಪಡೆದುಕೊಂಡು ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ 38 ಸಾವಿರ ರೂ. ಲಪಟಾಯಿಸಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಂಜಾ ಮಾರಾಟ ಮಾರುವ ಹುಡುಗರ ಬಂಧನ
ಮೂಡುಬಿದ್ರೆ : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಯುವಕರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡವು ಬುಧವಾರ ವಶಕ್ಕೆ ಪಡೆದಿದೆ. ಬೆಳುವಾಯಿ ನಿವಾಸಿಗಳಾದ ಮಹಮ್ಮದ್ ಅಯಾನ್ (22), ಫರ್ಹಾನ್ ಖಾನ್ (18) ಹಾಗೂ ಶೇಖ್ ಮುಹಮ್ಮದ್ ಜುಬೈರ್ (19) 19) ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಬೆಳುವಾಯಿ ಕಾಂತಾವಾರ ದ್ವಾರದ ಬಳಿ ಸ್ಕೂಟರ್ ನಲ್ಲಿ ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂದ ಖಚಿತ ಮಾಹಿತಿಯನ್ನು ಮೇರೆಗೆ ಸ್ಥಳಕ್ಕೆ ಧಾವಿಸಿದ್ದಾರೆ ಮೂವರು ವ್ಯಕ್ತಿಗಳ ಸಹಿತ 800 ಗ್ರಾಂ ಗಾಂಜಾ ಮತ್ತು ಸ್ಕೂಟರನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 62,000 ಆಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಖೋಟಾ ನೋಟು ಪ್ರಕರಣ; 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬಂಟ್ವಾಳ: ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಳೆಯ ಆರೋಪಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ತಾಲೂಕಿನ ನೆಲ್ಯಾಡಿ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಇಬ್ರಾಹಿಂ (55) ಎಂದು ಗುರುತಿಸಲಾಗಿದೆ. 2004 ರಲ್ಲಿ ಕೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು. ಇನ್ನೊಬ್ಬ ಆರೋಪಿ ಶರಣಾಗತನಾಗಿದ್ದು, ಈತ ತಲೆಮರೆಸಿಕೊಂಡಿದ್ದ. ಇದೀಗ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರ ಮಾರ್ಗದರ್ಶನದಂತೆ ಸಿಬ್ಬಂದಿಗಳಾದ ಗಣೇಶ್ ಮತ್ತು ಗೋಪಾಲಕೃಷ್ಣ ಅವರು ನೆಲ್ಯಾಡಿಯಲ್ಲಿ ಬಂಧಿಸಿದ್ದಾರೆ. ಇದೀಗ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಕಡಿರುದ್ಯಾವರದಲ್ಲಿ ಆನೆ ದಾಳಿ..!
ಬೆಳ್ತಂಗಡಿ: ಅಡಿರುದ್ಯಾವರ ಗ್ರಾಮದ ಹಣಿಯಲು ಪರಿಸರದಲ್ಲಿ ಕಾಡಾನೆಗಳು ಕಂಡುಬಂದಿದ್ದು ಮಂಗಳವಾರ ರಾತ್ರಿ ಕೃಷ್ಣ ಭಟ್ ಅವರ ತೋಟದ 10 ಅಡಿಕೆ ಗಿಡ, 40 ಬಾಳೆ ಗಿಡಗಳಿಗೆ ಹಾಗೂ ಗುಮ್ಮಣ್ಣ ಗೌಡ ಅವರ ಗದ್ದೆಗೆ ಹಾನಿ ಉಂಟುಮಾಡಿವೆ.
ಕಾಡಾನೆಗಳು ಕಂಡುಬಂದ ತತ್ಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸಿಬಂದಿ ಆಗಮಿಸಿ ಕಾಡಿಗೆ ಅಟ್ಟಿದ ಕಾರಣ ಹೆಚ್ಚಿನ ಹಾನಿ ತಪ್ಪಿದೆ. ಚಿಬಿದ್ರೆ ಗ್ರಾಮದ ಮದರ ಬೆಟ್ಟು ಶ್ರೀನಿವಾಸ ಹೆಬ್ಬಾರ್ ಅವರ ತೋಟಕ್ಕೆ ಕಳೆದ ವಾರ 2 ಬಾರಿ ಕಾಡಾನೆಗಳು ದಾಳಿ ಇಟ್ಟು 100ಕ್ಕಿಂತ ಅಧಿಕ ಅಡಿಕೆ ಮರ, 7 ತೆಂಗು ಹಾಗೂ 50 ಬಾಳೆ ಗಿಡಗಳನ್ನು ನಾಶ ಮಾಡಿವೆ.