ಟಾಪ್ 5 ನ್ಯೂಸ್ ಕರಾವಳಿ
ಕಡಬ: ವಿದ್ಯುತ್ ಕಂಬದಿಂದ ಬಿದ್ದು ಗಂಭೀರ ಗಾಯಗೊಂಡು ಮೃತ ಪಟ್ಟ ಕಾರ್ಮಿಕ
– ಕಾಸರಗೋಡು: ಅನ್ಯಾರೋಗ್ಯದಿಂದ ಅಸುನೀಗಿದ ತಾಯಿ, ಪುಟ್ಟ ಕಂದಮ್ಮನಿಗೆ ಎದೆಹಾಲು ಉಣಿಸಿದ ನರ್ಸಿಂಗ್ ಅಧಿಕಾರಿ
– ಉಪ್ಪಿನಂಗಡಿ: ಶಂಕಾಸ್ಪದ ರೀತಿಯಲ್ಲಿ ಮಹಿಳೆ ಮೃತ್ಯು ಕೊಲೆ ಶಂಕೆ
– ಮಣಿಪಾಲ : ಗಾಂಜಾ ಸೇವನೆ ಐವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
– ಪುತ್ತೂರು: ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಇಬ್ಬರು ದುರ್ಮರಣ
NAMMUR EXPRESS NEWS
ಕಡಬ: ಪಂಜ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಕಾರ್ಮಿಕನೊಬ್ಬ ಕಂಬದಿಂದ ಬಿದ್ದು ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ. ಅಲೆಕ್ಕಾಡಿ ಸಮೀಪ ಪಿಜಾವು ಎಂಬಲ್ಲಿ ಕಡಬದ ಕೃಷ್ಣ ಎಲೆಕ್ಟಿಕಲ್ ನ ಕಾರ್ಮಿಕರು ವಿದ್ಯುತ್ ಲೈನ್ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಈ ವೇಳೆ ಕಂಬದಿಂದ ಬಿದ್ದು ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ವಿದ್ಯುತ್ ಆಫ್ ಮಾಡಿ ಕೆಲಸ ನಿರ್ವಹಿಸಲಾಗುತ್ತಿದ್ದು ವಿದ್ಯುತ್ ಶಾಕ್ ನಿಂದ ಬಿದ್ದಿರುವುದೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪಂಜ ಶಾಖಾ ಜೆಇ ತಿಳಿಸಿದ್ದಾರೆ.
– ಕಾಸರಗೋಡು: ಅನ್ಯಾರೋಗ್ಯದಿಂದ ಅಸುನೀಗಿದ ತಾಯಿ, ಪುಟ್ಟ ಕಂದಮ್ಮನಿಗೆ ಎದೆಹಾಲು ಉಣಿಸಿದ ನರ್ಸಿಂಗ್ ಅಧಿಕಾರಿ
ಕಾಸರಗೋಡು: ಅನಾರೋಗ್ಯದಿಂದ ತಾಯಿ ಮೃತಪಟ್ಟ 37 ದಿನದ ಮಗುವಿಗೆ ಹಾಲುಣಿಸುವ ಮೂಲಕ ಕಾಸರಗೋಡು ಜನರಲ್ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಮೆರಿನ್ ಮಾದರಿ ಮಾನವೀಯತೆ ಹಾಗೂ ತಾಯ್ತನ ಪ್ರದರ್ಶಿಸಿದ್ದಾರೆ. ಕುಣಿಯ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿರುವ ಅಸ್ಸಾಂ ಮೂಲದ ರಾಜೇಶ್ ಬರ್ಮನ್ ಅವರ ಪತ್ನಿ ಏಕಾದಶಿ ಮಾಲಿ ಮೇ 5 ರಂದು ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಅತಿಸಾರದಿಂದ ಬಳಲುತ್ತಿದ್ದ ಆಕೆಯನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆಕೆ ಸಾವನ್ನಪ್ಪಿದ್ದಾಳೆ. ಮಾಲಿಯವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಗು ರಿಯಾ ಬರ್ಮನ್ ಹಸಿವಿನಿಂದ ಅನಿಯಂತ್ರಿತವಾಗಿ ಅಳಲು ಪ್ರಾರಂಭಿಸಿದಾಗ, ಶುಶ್ರೂಷಾ ಅಧಿಕಾರಿ ಮೆರಿನ್ ಮಗುವನ್ನು ಎತ್ತಿದರು ಮತ್ತು ಮಗುವಿಗೆ ಹಾಲುಣಿಸಿದರು. ಆಕೆಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಪತ್ರೆಯ ಉಪ ಅಧೀಕ್ಷಕ ಡಾ.ಜಮಾಲ್ ಅಹಮದ್, ಸಹೋದರಿ ಮೆರಿನ್ ಅವರ ಮಾನವೀಯ ಕಾರ್ಯಕ್ಕಾಗಿ ಅಭಿನಂದಿಸಿದ್ದಾರೆ.
– ಉಪ್ಪಿನಂಗಡಿ: ಶಂಕಾಸ್ಪದ ರೀತಿಯಲ್ಲಿ ಮಹಿಳೆ ಮೃತ್ಯು ಕೊಲೆ ಶಂಕೆ
ಉಪ್ಪಿನಂಗಡಿ: ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್ ಎಂಬಲ್ಲಿ ಮಹಿಳೆಯೋರ್ವರು ಮತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ನಿವಾಸಿ ಹೇಮಾವತಿ (37 ) ಮೃತ ಮಹಿಳೆ. ಹೇಮಾವತಿ ಅವರು ತಾಯಿ, ಅಕ್ಕನ ಮಗನೊಂದಿಗೆ ಈ ಮನೆಯಲ್ಲಿದ್ದ ವೇಳೆ ರಾತ್ರಿ ಕೃತ್ಯ ನಡೆದಿದೆ. ಮೊದಲಿಗೆ ಪರಿಸರದಲ್ಲಿ ಹೃದಯಾಘಾತವೆಂಬ ಸುದ್ದಿ ಹರಡಿತ್ತು. ಆದರೆ ಬಳಿಕ ಈ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ವಿಚಾರಣೆಗಾಗಿ ಮೃತರ ಅಕ್ಕನ ಮಗ ಎಸೆಸೆಲ್ಸಿ ಓದುತ್ತಿರುವ ಬಾಲಕನನ್ನು, ಆತನ ತಂದೆ ಶಂಕರ ಎಂಬವರನ್ನು ಕರೆದೊಯ್ದಿದ್ದಾರೆ. ಮೃತರು ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದರು.
– ಮಣಿಪಾಲ : ಗಾಂಜಾ ಸೇವನೆ ಐವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
ಮಣಿಪಾಲ: ಗಾಂಜಾ ಸೇವನೆಗೈದ ಐವರು ವಿದ್ಯಾರ್ಥಿಗಳನ್ನು ಹಯಗ್ರೀವ ನಗರ 5 ನೇ ಕ್ರಾಸ್ ಬಳಿ ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಣಿಪಾಲದ ವಿದ್ಯಾರ್ಥಿಗಳಾದ ಅಶೀಲ (20), ರೆನಜೋ ಎಸ್. ಚಂದ್ರಗಿರಿ(20), ಅಭಿನವ ಸುರೇಶ್(20), ಶ್ರೀಹರಿ(19), ಅಭಿಜಿತ್(20) ಎಂಬವರನ್ನು ವಶಕ್ಕೆ ಪಡೆದ ಪೊಲೀಸರು. ಮಣಿಪಾಲ ಕೆಎಂಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆ ವರದಿಯಲ್ಲಿ ಇವರೆಲ್ಲ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
– ಪುತ್ತೂರು: ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಇಬ್ಬರು ದುರ್ಮರಣ
ಪುತ್ತೂರು: ಆಲ್ಟೋ ಕಾರು ಮತ್ತು ಬೊಲೆರೋ ಕಾರು ನಡುವೆ ಡಿಕ್ಕಿಯಾಗಿದ್ದು, ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂಬ್ರದ ಶೇಖಮಲೆ ಎಂಬಲ್ಲಿ ನಡೆದಿದೆ. ಮಡಿಕೇರಿ ಮೂಲದ ರವೀಂದ್ರ ಹಾಗೂ ಲೊಕೇಶ್ ಮೃತ ದುರ್ದೈವಿಗಳು. ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರು ಕುಂಬ್ರದ ಶೇಖಮಲೆ ಬಳಿ ಬೈಕ್ಗೆ ಮೊದಲು ಡಿಕ್ಕಿ ಆಗಿತ್ತು. ನಂತರ ನಿಯಂತ್ರಣ ತಪ್ಪಿದ್ದ ಕಾರು ಪುತ್ತೂರು ಕಡೆ ಬರುತ್ತಿದ್ದ ಬೊಲೆರೋ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಲ್ಟೋ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಬೈಕ್ ಸವಾರನಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.