ಟಾಪ್ 5 ನ್ಯೂಸ್ ಕರಾವಳಿ
– ಹಲಸಿನಕಾಯಿ ಜೀವ ತೆಗೆಯಿತು!
– ವಿಟ್ಲ: ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವಾಗ ತಲೆ ಮೇಲೆ ಬಿದ್ದ ಹಲಸಿನ ಕಾಯಿ: ಹಿರಿಯ ನಾಗರಿಕ ಸಾವು
– ಬಂಟ್ವಾಳ: ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
– ಮಂಗಳೂರು: ಎಮ್ಮೆಕೆರೆ ಕೊಳ ಒತ್ತುವರಿ ಮಾಡಿ ಈಜುಕೊಳ ನಿರ್ಮಾಣ: ಸಮಗ್ರ ತನಿಖೆಗೆ ಎನ್ಇಸಿಎಫ್ ಸಂಸ್ಥೆ ಪಟ್ಟು
– ಸುರತ್ಕಲ್ : ಮನೆ ಕದಿಯುತ್ತಿದ್ದ ಕಳ್ಳ ಅಂದರ್!
NAMMUR EXPRESS NEWS
ವಿಟ್ಲ: ಹಲಸಿನ ಕಾಯಿ ತಲೆ ಮೇಲೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮೃತರು ಕಾಶ್ಮೀರ್ ಮಿನೇಜಸ್ (80) ಎಂದು ಹೇಳಲಾಗಿದೆ. ವಿಟ್ಲ ಕಸಬಾ ಗ್ರಾಮದ ದಾಸರಬೆಟ್ಟಿನಲ್ಲಿ ಇಲ್ಲಿನ ನಿವಾಸಿ ಮಿನೇಜಸ್ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದರು. ಈ ವೇಳೆ ಹಲಸಿನ ಮರದಿಂದ ಹಲಸಿನ ಕಾಯಿ ಬಿದ್ದಿದೆ. ಅದು ಮಿನೇಜಸ್ರವರ ತಲೆಯ ಮೇಲೆ ಬಿದ್ದಿದೆ. ತಕ್ಷಣವೇ ಅಸ್ವಸ್ಥರಾದ ಅವರ ಮೂಗಿನಿಂದ ರಕ್ತ ಬರಲಾರಂಭಿಸಿದೆ. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.
– ಬಂಟ್ವಾಳ: ಕಿಟಕಿಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಬಂಟ್ವಾಳ : ಯುವಕನೋರ್ವ ಮನೆಯ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನರಿಕೊಂಬು ಎಂಬಲ್ಲಿ ನಡೆದಿದೆ. ಬಂಟ್ವಾಳ ನಿವಾಸಿ ಶೇಖರ ಪೂಜಾರಿ ಅವರ ಎರಡನೇ ಮಗ ರಮೇಶ್ (22) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ರಮೇಶ್ ಯಾವುದೋ ವಿಷ ಪದಾರ್ಥ ಸೇವಿಸಿ ಬಳಿಕ ಕಿಟಕಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಆದರೆ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ಈವರೆಗೆ ತಿಳಿದುಬಂದಿಲ್ಲ. ಅತ್ಯಂತ ಸೌಮ್ಯ ಸ್ವಭಾವದ ಶ್ರಮ ಜೀವಿಯಾಗಿದ್ದ ರಮೇಶ್ ಇಲ್ಲಿನ ಸ್ಥಳೀಯ ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಅಣ್ಣ ಕೂಡ ಕಳೆದ ವರ್ಷ ಇವರ ಹಳೆಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಶೇಖರ ಪೂಜಾರಿ ಅವರಿಗೆ ಇಬ್ಬರು ಗಂಡು ಮಕ್ಕಳು, ಇದೀಗ ಇಬ್ಬರು ಕೂಡ ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ಘಟನಾ ಸ್ಥಳಕ್ಕೆ ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಹಾಗೂ ಊರಿನ ಅನೇಕರು ಭೇಟಿ ನೀಡಿದ್ದಾರೆ. ಬಂಟ್ವಾಳ ನಗರ ಠಾಣಾ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರಿನ ಎಮ್ಮೆಕೆರೆ ಕೊಳ ಒತ್ತುವರಿ ಮಾಡಿ ಈಜುಕೊಳ ನಿರ್ಮಾಣ: ಸಮಗ್ರ ತನಿಖೆಗೆ ಎನ್ಇಸಿಎಫ್ ಸಂಸ್ಥೆ ಪಟ್ಟು
ಮಂಗಳೂರು ನಗರದ ತೋಟ ಗ್ರಾಮದ ಸರ್ವೆ ನಂಬರ್ 108ರಲ್ಲಿ ಐತಿಹಾಸಿಕ ಎಮ್ಮೆಕೆರೆ ಹೊಂಡವನ್ನು ಅತಿಕ್ರಮಿಸಿ ಈಜುಕೊಳ ನಿರ್ಮಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್ಇಸಿಎಫ್)ವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸ್ಮಾಟಿ ಸಿಟಿ ನಿರ್ದೇಶಕರು ಸೇರಿದಂತೆ ಸಂಬಂಧ ಇಲಾಖೆಗಳ ಮುಖ್ಯಸ್ಥರಿಗೆ ದೂರು ಸಲ್ಲಿಸಿದೆ.
ಶತಮಾನದಷ್ಟು ಹಳೇಯ ಎಮ್ಮೆಕೆರೆ ಹೊಂಡದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನಿಂದ ಕಾಮಗಾರಿ ಕೈಗೊಳ್ಳಲಾಗಿದ್ದು, ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಅತಿಕ್ರಮಣ ಮಾಡಲಾಗಿದೆ. ಈಜುಕೊಳವನ್ನು 2023ರ ನವೆಂಬರ್ 24ರಂದು ಉದ್ಘಾಟಿಸಲಾಗಿದೆ. ಆರ್ಟಿಐಯಲ್ಲಿ ಪಡೆದ ಮಾಹಿತಿಯ ವೇಳೆ ಕೆಟಿಸಿಡಿಎನಿಂದ ಈಜುಕೊಳ ನಿರ್ಮಾಣಕ್ಕೆ ಪೂರ್ವಾನುಮತಿ ಪಡೆಯದಿರುವುದು ಗಮನಕ್ಕೆ ಬಂದಿದೆ. ಇದು ನಿಯಂತ್ರಕ ಮಾನದಂಡಗಳ ಉಲ್ಲಂಘನೆಯಾಗಿದ್ದು, ಇದರಿಂದ ಪರಿಸರ ಅಸಮತೋಲನ ಮತ್ತು ಪ್ರದೇಶದ ಜಲ ಸಂಪನ್ಮೂಲಕ್ಕೆ ಧಕ್ಕೆಯಾಗಲಿದೆ. ಈ ಅಕ್ರಮ ಆರೋಪಗಳ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಎನ್ಇಸಿಎಫ್ನಿಂದ ಒತ್ತಾಯಿಸಲಾಗಿದೆ.
ಅಕ್ರಮ ಒತ್ತುವರಿಯನ್ನು ತೆಗೆದು ಕೊಳವನ್ನು ಮರುಸ್ಥಾಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಬೇಕು. ಈ ಎಮ್ಮೆಕೆರೆ ಒತ್ತುವರಿಯಿಂದ ಸರ್ಕಾರಕ್ಕೆ ಉಂಟು ಮಾಡಿರುವ ನಷ್ಟಕ್ಕೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಮನೆಗಳ್ಳನ ಬಂಧನ: ಮೊಬೈಲ್, ನಗದು ಎಗರಿಸಿದ್ದ ಆರೋಪಿ
ಸುರತ್ಕಲ್ : ಕಳವು ಪ್ರಕರಣದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾಟಿಪಳ್ಳದ ಮಹಮ್ಮದ್ ಅಶ್ರಫ್ ಅಲಿಯಾಸ್ ಚೋಟಾ ಅಶ್ರಫ್ (26) ಎಂದು ಗುರುತಿಸಲಾಗಿದೆ.
ಜೂನ್ 14ರಂದು ಸುರತ್ಕಲ್ಲಿನ ಬಾಡಿಗೆ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿ ಅಲ್ಲಿದ್ದ ಮೂರು ಮೊಬೈಲ್ ಮತ್ತು ಎರಡು ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದ.ಆಸುಪಾಸಿನ ಸಿಸಿಟಿವಿ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿದ ಪೊಲೀಸರು ಆರೋಪಿ ಮಹಮ್ಮದ್ ಅಶ್ರಫ್ ನನ್ನು ಬಂಧಿಸಿದ್ದು, ಕಳವುಗೈದ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಸುರತ್ಕಲ್ ಠಾಣೆಯಲ್ಲಿ ಈ ಹಿಂದೆ ಮೂರು ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ತಡಂಬೈಲ್ ಬಸ್ ನಿಲ್ದಾಣದ ಬಳಿ ಜೂನ್ 24ರಂದು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.