ಟಾಪ್ 5 ನ್ಯೂಸ್ ಕರಾವಳಿ
ಕರಾವಳಿಯ ಹೆಸರಾಂತ ಸಾಹಿತಿ ಪಟವರ್ಧನ್ ನೆನಪು ಮಾತ್ರ!
– ಉಜಿರೆ: ಹಿರಿಯ ಸಾಹಿತಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಎನ್ ಜಿ ಪಟವರ್ಧನ್ ನಿಧನ
– ಧರ್ಮಸ್ಥಳ: ವಿವಾಹಿತ ಮಹಿಳೆ ಆತ್ಮಹತ್ಯೆ
– ಮಂಗಳೂರು: ಜೈಲಿನಲ್ಲಿ ಖೈದಿಗಳ ನಡುವೆ ಹೊಡೆದಾಟ
– ಉಡುಪಿ: ಶಿರೂರು ಕಳಚಿಕೊಂಡ ಗೂಡ್ಸ್ ರೈಲು ಬೋಗಿ!
– ಬೆಳ್ತಂಗಡಿ: ಸೇತುವೆ ಶಿಥಿಲ ,ಘನವಾಹನ ಸಂಚಾರ ನಿಷೇಧ
NAMMUR EXPRESS NEWS
ಉಜಿರೆ: ಉಜಿರೆ ತಾಲೂಕಿನ ಹಿರಿಯ ಸಾಹಿತಿ, ಉಜಿರೆ ಎಸ್ ಡಿ ಎಂ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಎನ್ ಜಿ ಪಟವರ್ಧನ್ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಜು.1 ರಂದು ಕೊನೆಯುಸಿರೆಳೆದಿದ್ದಾರೆ.
ಮೂಲತಃ ಮುಂಡಾಜೆ ಗ್ರಾಮದ ಮೂಲಾರು ಅವರು ಕಳೆದ ಅನೇಕ ವರ್ಷಗಳಿಂದ ಉಜಿರೆಯಲ್ಲಿ ನೆಲೆಸಿದ್ದರು.
ಚಿತ್ಪಾವನ ಸಮಾಜದ ಹಿರಿಯರೂ ಆಗಿದ್ದ ಅವರು ಹಲವು ಕಥೆ, ಕವನ, ವಿಮರ್ಷೆ ರಚನಾಕರ್ತರಾಗಿದ್ದರು. ಅವರ ಹಲವು ಕೃತಿಗಳು ಸಾಹಿತ್ಯ ಲೋಕಕ್ಕೆ ಸಮರ್ಪಿತವಾಗಿತ್ತು.
ಉತ್ತಮ ಶೋತೃ ಹಾಗೂ ಸಾಹಿತ್ಯ ವಿಷಯಾಸಕ್ತಿ ಹೊಂದಿದ್ದ ಅವರು ಹಲವಾರು ಯುವ ಬರಹಗಾರರ ಬರಹಗಳ ಬಗ್ಗೆ ವಿಮರ್ಷೆ ಬರೆದು ಆ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಾಲೂಕು ಮಟ್ಟದ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ದೀರ್ಘ ವರ್ಷ ಅಂಕಣಗಳನ್ನೂ ಪ್ರಕಟಿಸುತ್ತಿದ್ದರು.
ವಿವಾಹಿತ ಮಹಿಳೆ ಆತ್ಮಹತ್ಯೆ
ಧರ್ಮಸ್ಥಳ: ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳ ಬಳಿ ಜು.2 ರಂದು ನಡೆದಿದೆ. ಇಲ್ಲಿಯ ಜೋಡುಸ್ಥಾನ ನಿವಾಸಿ ರಕ್ಷಿತಾ ಜೈನ್(26ವರ್ಷ)ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ನಿತ್ಯನೂತನ ಭಜನ ಮಂದಿರ ಬಳಿಯ ನಿವಾಸಿ ರಕ್ಷಿತಾ ಜೈನ್ ರವರು ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ. ಮೃತರು ತಂದೆ ವೀರಚಂದ್ರ ಜೈನ್, ತಾಯಿ ಅರುಣಾ, ಪತಿ ಸಂತೋಷ್ ಜೈನ್ ಹಾಗೂ 2 ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.
ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ನಡುವೆ ಮಾರಾಮಾರಿ ವಿಚಾರಣಾಧೀನ ಖೈದಿಗಳು ಆಸ್ಪತ್ರೆಗೆ.
ಮಂಗಳೂರು:ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ನಡುವೆ ಸೋಮವಾರ ಸಂಜೆ ವೇಳೆಗೆ ಮಾರಾಮಾರಿ ನಡೆದಿದ್ದು, ಇಬ್ಬರು ಇಬ್ಬರು ವಿಚಾರಣಾಧೀನ ಖೈದಿಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಗೊಳಗಾಗಿ ಗಾಯಗೊಂಡವರು ಉಳ್ಳಾಲ ನಿವಾಸಿ ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್(33) ಮತ್ತು ಬೋಳಿಯಾರ್ ನಿವಾಸಿ ಮುಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್ (30) ಎನ್ನುವವರಾಗಿದ್ದಾರೆ. ಇಬ್ಬರೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರ ತಲೆ, ಭುಜ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಅಡುಗೆ ಮನೆಯಲ್ಲಿದ್ದ ಚೂಪಾದ ವಸ್ತುಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 20 ದಿನಗಳಿಂದ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದರು. ಪ್ರತಿಸ್ಪರ್ಧಿ ಗ್ಯಾಂಗ್ ನ ಟೋಪಿ ನೌಫಲ್ ಮತ್ತು ಇತರ10 ಸದಸ್ಯರು ದಾಳಿ ನಡೆಸಿದ್ದಾರೆ. ಸಂಜೆ 6. 30 ರಿಂದ 6:45 ರ ನಡುವೆ ಈ ಘಟನೆ ನಡೆದಿದೆ.
ದಾಳಿ ನಡೆಸಿದ ಆರೋಪಿ ಖೈದಿಗಳು ಮುಫದ್ ರಿಫಾತ್ (28) ಮುಹಮ್ಮದ್ ರಿಜ್ವಾನ್(34),ಇಬ್ರಾಹಿಂ ಕಲ್ಲೆಲ್ (30), ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ನೌಫಲ್, ಜೈನುದ್ದೀನ್ ಮತ್ತು ಇತರರು ಎಂದು ಪೊಲೀಸರು ವಿವರ ನೀಡಿದ್ದಾರೆ.
ಹಲ್ಲೆ ನಡೆಸಿದವರು ಹಾಗೂ ಹಲ್ಲೆಗೆ ಒಳಗಾದವರು ನಟೋರಿಯಸ್ ಗಳಾಗಿದ್ದು ಹಲವಾರು ಪ್ರಕರಣಗಳ ಆರೋಪಿಗಳಾಗಿದ್ದಾರೆ. ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ವಿರುದ್ದ ಜೈಲರ್ ನೀಡಿದ ದೂರಿನ ಅನ್ವಯ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿರೂರು ಕಳಚಿಕೊಂಡ ಗೂಡ್ಸ್ ರೈಲು ಬೋಗಿಗಳು, ತಪ್ಪಿದ ಅನಾಹುತ
ಉಡುಪಿ: ಗೂಡ್ಸ್ ರೈಲಿನಿಂದ ಬೋಗಿ ಕಳಚಿಕೊಂಡು ಆತಂಕ ಸೃಷ್ಟಿಯಾದ ಘಟನೆ ಸೋಮವಾರ ಮುಂಜಾನೆ ಹಡವಿನಕೋಣೆ ರೈಲ್ವೆ ಗೇಟ್ನಲ್ಲಿ ನಡೆದಿದೆ. ಬೋಗಿ ಕಳಚಿಕೊಂಡು ಒಂದು ಗಂಟೆಗೂ ಅಧಿಕ ಸಮಯ ರಸ್ತೆ ತಡೆ ಉಂಟಾಗಿತ್ತು.
ಮಂಗಳೂರಿನಿಂದ ಮಡಗಾಂವ್ ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಮಧ್ಯಭಾಗದಲ್ಲಿ ಬೋಗಿಗಳು ಕಳಚಿಕೊಂಡು ಬೇರ್ಪಟ್ಟ ಪರಿಣಾಮ ಆತಂಕ ಪರಿಸ್ಥಿತಿ ಉಂಟಾಯಿತು. ಮಾತ್ರವಲ್ಲದೆ ರೈಲ್ವೆ ಗೇಟ್ ಹಾಕಿದ ಕಾರಣ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿತ್ತು. ತಕ್ಷಣ ಎಚ್ಚೆತ್ತುಕೊಂಡ ರೈಲ್ವೆ ಅಧಿಕಾರಿಗಳು ಅಲ್ಲಿನ ಬೋಗಿಗಳನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಶಿರೂರು ಬಿಜೂರ್ ವಿಭಾಗದ ನಡುವೆ ಗೂಡ್ಸ್ ರೈಲಿನ ಬ್ರೇಕ್ ಪೈಪ್ ತಾಂತ್ರಿಕ ಸಮಸ್ಯೆಯಿಂದಾಗಿ ಸಂಪರ್ಕ ಕಡಿತಗೊಂಡಿದ್ದು, ಬಳಿಕ ಅರ್ಧ ಗಂಟೆಯೊಳಗೆ ಈ ರೈಲನ್ನು ಮರುಪ್ರಾರಂಭಿಸಲಾಯಿತು. ಇದರಿಂದ ಯಾವುದೇ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿಲ್ಲ’ ಎಂದು ರೈಲ್ವೆ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಸೇತುವೆ ಶಿಥಿಲ : ಘನ ವಾಹನ ಸಂಚಾರ ನಿಷೇಧ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಲ್ಲಂಜ ಗ್ರಾಮ ನಿಡಿಗಲ್ ಮೂಲಕ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯ 1.10 ಕಿ ಮೀ ರಲ್ಲಿರುವ ಅಂಬಡಬೆಟ್ಟು ಸೇತುವೆಯು ಶಿಥಿಲಾವಸ್ಥೆಯಲ್ಲಿ ಇರುವುದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನವಾಹನ ಸಂಚಾರವನ್ನು ನಿಬರ್ಂಧಿಸಿ, ಸಂಚಾರ ಮಾರ್ಗ ಬದಲಾಯಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶಿಸಿದ್ದಾರೆ.