ಟಾಪ್ 7 ನ್ಯೂಸ್ ಕರಾವಳಿ
ಹೆಬ್ರಿ: ಅಡಿಕೆ ಮರ ಬಿದ್ದು ವ್ಯಕ್ತಿ ಮೃತ್ಯು: ಮಳೆ, ಗಾಳಿ ಹುಷಾರ್!
ಮಂಗಳೂರು : ಬಸ್ಸಿನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಅನ್ಯಕೋಮಿನ ಯುವಕ!
– ಕಾಸರಗೋಡು: ಸೈಬರ್ ವಂಚನೆ ಯುವಕನಿಗೆ 2.23 ಕೋಟಿ ನಷ್ಟ..!
– ಬಂಟ್ವಾಳ: ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ: ಸವಾರ ಮೃತ್ಯು
– ಮಂಗಳೂರು: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ಚೌಟ ಕಿಡಿ
– ಕುಂಬಳೆ : ಬ್ಯಾಸ್ಕೆಟ್ ಬಾಲ್ ಆಟಗಾರ ಶವವಾಗಿ ಪತ್ತೆ
– ಉಳ್ಳಾಲ: ಅಪ್ರಾಪ್ತ ಬಾಲಕಿ ನೇಣುಬಿಗಿದು ಆತ್ಮಹತ್ಯೆ
NAMMUR EXPRESS NEWS
ಹೆಬ್ರಿ: ತಾಲೂಕಿನ ವರಂಗ ಗ್ರಾಮದ ಮುನಿಯಾಲು ಮಾತಿಬೆಟ್ಟು ಎಂಬಲ್ಲಿ ಅಡಿಕೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಶಂಕರ (62) ಎಂದು ಗುರುತಿಸಲಾಗಿದೆ. ಶಂಕರ ಮಾತಿಬೆಟ್ಟು ಅರುಣ್ ಎಂಬವರ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗದ್ದೆಯ ಬದಿಯಲ್ಲಿದ್ದ ಒಣಗಿದ ಅಡಿಕೆ ಮರ ಆಕಸ್ಮಿಕವಾಗಿ ತುಂಡಾಗಿ ಮೈ ಮೇಲೆ ಬಿದ್ದ ಪರಿಣಾಮ ಮೃತಪಟ್ಟಿರುತ್ತಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮಂಗಳೂರು : ಬಸ್ಸಿನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಅನ್ಯಕೋಮಿನ ಯುವಕ
ಮಂಗಳೂರು : ಬಸ್ನಲ್ಲಿ ಯುವತಿಯೋರ್ವಳಿಗೆ ಅನ್ಯಕೋಮಿನ ಯುವಕನೋರ್ವ ಮಾನಭಂಗ ಮಾಡುವ ಉದ್ದೇಶದಿಂದ ಕಿರುಕುಳ ನೀಡಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಪೆನಿಯೊಂದರ ಪ್ರಾಡಕ್ಟ್ ಸೇಲ್ ಕೆಲಸ ಮಾಡಿಕೊಂಡಿರುವ 19 ವರ್ಷದ ಯುವತಿ ಕಚೇರಿಗೆ ಹೋಗಿ ಪ್ರಾಡಕ್ಟ್ ಗಳನ್ನು ತೆಗೆದುಕೊಂಡು ಮಾರಾಟ ಮಾಡಲು ನಾಗುರಿಯಿಂದ ಬಸ್ನಲ್ಲಿ ಬೆಳಗ್ಗೆ ಸ್ಟೇಟ್ ಬ್ಯಾಂಕ್ಗೆ ಬಂದಿದ್ದರು. ಸ್ಟೇಟ್ ಬ್ಯಾಂಕ್ನಿಂದ ಬಜಪೆ ಕಡೆಗೆ ಹೋಗಲು ಖಾಸಗಿ ಬಸ್ನಲ್ಲಿ ಕುಳಿತಿದ್ದರು. ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಸುಮಾರು 27ರಿಂದ 28 ವರ್ಷ ವಯಸ್ಸಿನ ಯುವಕ ಆಕೆಯ ಹಿಂಬದಿಯ ಸೀಟಿನಲ್ಲಿ ಕುಳಿತು ಮಾನಭಂಗ ಮಾಡುವ ಉದ್ದೇಶದಿಂದ ಸೊಂಟಕ್ಕೆ ಕೈ ಹಾಕಿ ಎಳೆದಿದ್ದಾನೆ ಎಂದು ದೂರು ದಾಖಲಾಗಿದೆ.
– ಕಾಸರಗೋಡು: ಸೈಬರ್ ವಂಚನೆ ಯುವಕನಿಗೆ 2.23 ಕೋಟಿ ನಷ್ಟ..!
ಕಾಸರಗೋಡು : ಸೈಬರ್ ಬಲೆಗೆ ಬಿದ್ದ ಯುವಕನೊಬ್ಬ 2.23 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾನೆ. ಕಾಸರಗೋಡು ಸೈಬರ್ ಸೆಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಂಚನೆಗೊಳಗಾದವರನ್ನು ತಮಿಳುನಾಡಿನ ವೆಲ್ಲೂರಿನ ಪೊನ್ನಿಯಮ್ ಕೋವಿಲ್ ನಿವಾಸಿ, ಕಾಸರಗೋಡು ಬೀರಂತ್ ವಯಲ್ ನಿವಾಸಿ ಎಸ್.ಸುರೇಶ್ ಬಾಬು (42) ಎಂದು ಗುರುತಿಸಲಾಗಿದೆ. ಈ ಘಟನೆ ಮೇ 17 ಮತ್ತು ಜೂನ್ 4 ರ ನಡುವೆ ನಡೆದಿದೆ. ದೂರಿನ ಪ್ರಕಾರ, ಟೆಲಿಗ್ರಾಮ್ ಮೂಲಕ ಮತ್ತು ಫೋನ್ ಮೂಲಕ ಚಾಟ್ ಮಾಡುವ ಮೂಲಕ ಮನೆಯಿಂದ ಮಾಡಬಹುದಾದ ಅರೆಕಾಲಿಕ ಕೆಲಸದ ಭರವಸೆ ನೀಡಿದ ನಂತರ ಆರೋಪಿಯು ಯುವಕರಿಂದ ವಿವಿಧ ದಿನಗಳಲ್ಲಿ ವಿವಿಧ ಖಾತೆಗಳಿಗೆ 2,23,94,993 ರೂ.ಗಳನ್ನು ಕಳುಹಿಸಿದ್ದಾನೆ. ಇದರಲ್ಲಿ ಕೇವಲ 87,125 ರೂ.ಗಳನ್ನು ಮಾತ್ರ ಹಿಂದಿರುಗಿಸಲಾಗಿದ್ದು, ಉಳಿದ 2,23,07,868 ರೂ.ಗಳನ್ನು ಪಾವತಿಸಲಾಗಿಲ್ಲ ಮತ್ತು ಅದರ ಲಾಭವನ್ನು ಪಾವತಿಸಲಾಗಿಲ್ಲ. ಅಪರಿಚಿತ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಏತನ್ಮಧ್ಯೆ, ಇನ್ಸಾಗ್ರಾಮ್, ಟೆಲಿಗ್ರಾಮ್, ಫೇಸ್ಟುಕ್ ಮತ್ತು ವಾಟ್ಸಾಪ್ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್ಸಾರ್ಮ್ಗಳನ್ನು ಬಳಸುವವರು ಅಂತಹ ಸೈಬರ್ ಅಪರಾಧಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅಪರಿಚಿತ ಸಂಖ್ಯೆಯಿಂದ ಅಪ್ಲಿಕೇಶನ್ ಅನ್ನು ಇನ್ಸಾಲ್ ಮಾಡಲು ಕೇಳಿದರೆ ಅಥವಾ ಲಿಂಕ್ಕೆ ಲಾಗ್ ಇನ್ ಮಾಡಲು ಕೇಳಿದರೆ ಅಂತಹ ಕೃತ್ಯಗಳನ್ನು ಮಾಡದಂತೆ ಪೊಲೀಸರು ಎಚ್ಚರಿಸಿದ್ದಾರೆ.
– ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ ಬೈಕ್ ಸವಾರ ಮೃತ್ಯು
ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಜೀಪ ಮುನ್ನೂರು ಗ್ರಾಮದ ಕಂದೂರು ಎಂಬಲ್ಲಿ ನಡೆದಿದೆ. ಅಮ್ಟಾಡಿ ಗ್ರಾಮದ ಕಲಾಯಿ ನಿವಾಸಿ ರಾಮನಾಯ್ಕ (47) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಸ್ಕೂಟರ್ ನಲ್ಲಿ ಬಿಸಿರೋಡಿನಿಂದ ಮುಡಿಪು ಕಡೆಗೆ ತನ್ನ ವೈಯಕ್ತಿಕ ಕೆಲಸದ ನಿಮಿತ್ತ ಸಂಚರಿಸುವ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಲಾರಿ ಚಾಲಕ ಇವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಳೆಯಲ್ಪಟ್ಟು ತಲೆಗೆ ಗಂಭೀರವಾದ ಏಟಾಗಿ ರಕ್ತಸ್ರಾವ ಉಂಟಾಗಿತ್ತು. ರಸ್ತೆಯ ಮಧ್ಯ ಭಾಗಕ್ಕೆ ಎಸೆಯಲ್ಪಟ್ಟ ಇವರನ್ನು ಪೋಲೀಸರು ಸ್ಥಳಕ್ಕೆ ಬರುವವರೆಗೂ ಯಾರು ಮುಟ್ಟಿಲ್ಲ, ಸುಮಾರು ಅರ್ಧ ತಾಸಿನವರೆಗೂ ಇವರ ಮೃತದೇಹ ರಸ್ತೆಯ ಮಧ್ಯ ಭಾಗದಲ್ಲಿತ್ತು ಎಂದು ಹೇಳಲಾಗಿದೆ. ಬಳಿಕ ಪೋಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ರಾಮ ನಾಯ್ಕ ಅವರು ಕಳೆದ ಅನೇಕ ವರ್ಷಗಳಿಂದ ಬಂಟ್ವಾಳ ಬೈಪಾಸ್ ನಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಮಾಣಿಕ ಕೆಲಸಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಗ್ರಾಹಕರ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ ಸುತೇಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು: ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ.!
– ಆಕ್ರೋಶ ವ್ಯಕ್ತಪಡಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ
ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಪದಗ್ರಹಣದ ಅಂಗವಾಗಿ ಬಂಟ್ವಾಳ ತಾಲೂಕಿನ ಬೋಳಿಯಾರಿನಲ್ಲಿ ನಡೆದ ಸಂಭ್ರಮಾಚರಣೆಯನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಬಿಜೆಪಿ ಕಾರ್ಯಕರ್ತ ಹರೀಶ್ ಅಂಚನ್ ಹಾಗೂ ವಿನೋದ್ ಅವರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರತಿಕ್ರಯಿಸಿ “ಜಿಲ್ಲೆಯಲ್ಲಿ ಇದೇ ಮಾದರಿಯ ಘಟನೆಗಳು ಪದೇ ಪದೇ ನಡೆಯುತ್ತಿದ್ದು ರಾಜ್ಯ ಸರಕಾರ ಏನು ಮಾಡುತ್ತಿದೆ” ಎಂದು ಪ್ರಶ್ನಿಸಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ “ಕೆಲ ದಿನಗಳ ಹಿಂದೆಯಷ್ಟೇ ಬೆಳ್ತಂಗಡಿ ಮತ್ತು ಉಳ್ಳಾಲದಲ್ಲಿ ಇದೇ ಮಾದರಿಯ ಹಲ್ಲೆ ನಡೆದಾಗ ಪೊಲೀಸ್ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಗಂಭೀರವಾಗಿ ಪರಿಗಣಿಸಿದ ಕಾರಣ ಈ ರೀತಿಯ ಘಟನೆಯು ಪದೇ ಪದೇ ಮರುಕಳಿಸುತ್ತಿದೆ. ಕಾಂಗ್ರೆಸ್ ಬೆಂಬಲಿತ ಮತೀಯ ಶಕ್ತಿಗಳ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲಗೊಂಡಿದೆ. ಹತಾಶಗೊಂಡಿರುವ ಕಾಂಗ್ರೆಸ್ ರಾಜಕೀಯ ದ್ವೇಷವನ್ನು ಸಾಧಿಸಲು ನಮ್ಮ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಈ ಹಲ್ಲೆಗಳನ್ನು ನಡೆಸುತ್ತಿರುವುದು ಕಳವಳಕಾರಿ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸದೆ ಇಲ್ಲದಿದ್ದಲ್ಲಿ ಪರಿಣಾಮ ಸರಿ ಇರದು ಎಂಬ ಖಡಕ್ ಸಂದೇಶ ಕೂಡ ರಾಜ್ಯ ಸರಕಾರಕ್ಕೆ ಕ್ಯಾಪ್ಟನ್ ಬ್ರಿಜೇಶ್ ಚೌಟ ನೀಡಿದ್ದಾರೆ.
– ಕುಂಬಳೆ : ಬ್ಯಾಸ್ಕೆಟ್ ಬಾಲ್ ಆಟಗಾರ ಶವವಾಗಿ ಪತ್ತೆ
ಕುಂಬಳೆ : ಬ್ಯಾಸ್ಕೆಟ್ ಬಾಲ್ ಆಟಗಾರನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕುಂಬಳದಲ್ಲಿ ನಡೆದಿದೆ. ಮೃತರನ್ನು ಕುಂಬಳ ನಾಯ್ಕಪ್ಪು ನಿವಾಸಿ ವೆಂಕಟೇಶ್ ಮತ್ತು ಜಯಂತಿ ದಂಪತಿಯ ಪುತ್ರ ಮಂಜುನಾಥ ನಾಯಕ್ (25) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ 11.30 ರ ಸುಮಾರಿಗೆ ಯುವಕನಿಗೆ ಕರೆ ಬಂದಿತ್ತು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಫೋನ್ ನಲ್ಲಿ ಮಾತನಾಡುವಾಗ ಯುವಕ ಮನೆಯಿಂದ ಹೊರಗೆ ಹೋದನು ಮತ್ತು ಹಿಂತಿರುಗಲಿಲ್ಲ. ಬಹಳ ಸಮಯದ ನಂತರ ಅವರು ಹಿಂತಿರುಗದ ಕಾರಣ, ಕುಟುಂಬವು ಅವರನ್ನು ಫೋನ್ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿತು ಆದರೆ ಅವರನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಮುಂಜಾನೆ ಮನೆಯ ಬಳಿಯ ಮರದ ಕೊಂಬೆಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಕುಂಬಳ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜುನಾಥ್ ಅವರ ಫೋನ್ ಗೆ ಕರೆ ಮಾಡಿದವರು ಯಾರು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಯಾರಾದರೂ ಕರೆ ಮಾಡಿ ಬೆದರಿಕೆ ಹಾಕಿದ್ದಾರೆಯೇ ಎಂಬುದು ಸಾವಿಗೆ ಕಾರಣವೇ ಎಂದು ತನಿಖೆ ಮಾಡಲಾಗುತ್ತಿದೆ.
– ಉಳ್ಳಾಲ: ಅಪ್ರಾಪ್ತ ಬಾಲಕಿ ನೇಣುಬಿಗಿದು ಆತ್ಮಹತ್ಯೆ!
ಉಳ್ಳಾಲ : ತೊಕ್ಕೊಟ್ಟು, ಚೆಂಬುಗುಡ್ಡೆಯ ಬಾಡಿಗೆ ಮನೆಯಲ್ಲಿ ನೇಪಾಳ ಮೂಲದ ಅಪ್ರಾಪ್ತ ಬಾಲಕಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಅಪ್ರಾಪ್ತ ಬಾಲಕಿಯನ್ನು ನೇಪಾಳ ಮೂಲದ ರಬೀನ ಬಿ.ಕೆ (16) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟು ವೃಂದಾವನ ಹೊಟೇಲಿನ ಪಕ್ಕದಲ್ಲಿ ಫಾಸ್ಟ್ ಫುಡ್ ಕಮ್ ಕ್ಯಾಂಟೀನ್ ನಡೆಸುತ್ತಿದ್ದ ನೇಪಾಳ ಮೂಲದ ರಾಮ್ ಶರಣ್ ಎಂಬವರು ತನ್ನ ಪತ್ನಿ ಮತ್ತು ನಾಲ್ಕು ಮಕ್ಕಳೊಂದಿಗೆ ತೊಕ್ಕೊಟ್ಟು, ಚೆಂಬುಗುಡ್ಡೆಯ ರೀಟಾ ಡಿ ಸೋಜ ಎಂಬವರ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದರು. ರಾಮ್ ಶರಣ್ ಅವರ ಎರಡನೇ ಮಗಳಾದ ರಬೀನ ನೇಪಾಳದಲ್ಲಿ ಎಂಟನೇ ತರಗತಿ ಓದುತ್ತಿದ್ದು, ಆಕೆಯನ್ನು ಮಂಗಳೂರಿನಲ್ಲಿ ಓದಿಸುವ ಸಲುವಾಗಿ ತಿಂಗಳ ಹಿಂದೆ ಪೋಷಕರು ತೊಕ್ಕೊಟ್ಟಿಗೆ ಕರೆ ತಂದಿದ್ದರು.
ಆದರೆ ರಬೀನ ತಾನು ನೇಪಾಳದಲ್ಲೇ ಓದು ಮುಂದುವರಿಸುವುದಾಗಿ ಹಠ ಹಿಡಿದಿದ್ದು, ಈ ಬಗ್ಗೆ ಪೋಷಕರಲ್ಲಿ ಗಲಾಟೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಮದ್ಯಾಹ್ನ ರಬೀನಳ ತಾಯಿ ರಮೀಲ ಅವರು ಚಿಕ್ಕ ಮಕ್ಕಳನ್ನ ಶಾಲೆಯಿಂದ ಮನೆಗೆ ಕರಕೊಂಡು ಹೋಗಿದ್ದ ವೇಳೆ ರಬೀನ ಮನೆಯ ಶೌಚಾಲಯದ ಕಬ್ಬಿಣದ ಸಲಾಕೆಗೆ ಚೂಡಿದಾರದ ಶಾಲಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉಳ್ಳಾಲ ಠಾಣಾ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತ ರಬೀನ ತಂದೆ, ತಾಯಿ, ಇಬ್ಬರು ಸಹೋದರಿಯರು, ಓರ್ವ ಸಹೋದರನನ್ನು ಅಗಲಿದ್ದಾರೆ.