ಟಾಪ್ ನ್ಯೂಸ್ ಕರಾವಳಿ
ಬಸ್ ಕಂಡಕ್ಟರ್, ಡ್ರೈವರ್, ಪ್ರಯಾಣಿಕನ ಮಾನವೀಯತೆ!
– ಉಡುಪಿ: ಬಸ್ಸಲ್ಲಿ ಸಿಕ್ಕ ಚಿನ್ನದ ಸರ ವಾಪಾಸ್ ಕೊಟ್ಟ ಘಟನೆ
– ಸುಳ್ಯ: ಕಾಂಪೌಂಡ್ಗೆ ಡಿಕ್ಕಿ ಹೊಡೆದ ಕಾರು: ಮೂವರಿಗೆ ಗಾಯ
– ಬಂಟ್ವಾಳ: ಖಾಸಗಿ ಬಸ್ ಡಿಕ್ಕಿ ಪ್ರಯಾಣಿಕರು ಗಂಭೀರ
– ಬಂಟ್ವಾಳ :ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ
– ಕೋಟ: ಹೆದ್ದಾರಿ ಬದಿಯಲ್ಲಿ ಅನಾಥವಾಗಿ ನಿಂತಿದ್ದ ಲಾರಿ ತೆರವು
– ಮಂಗಳೂರು: ಟೆಂಪೋ ಡಿಕ್ಕಿ ಹೊಡೆದು ಪಾದಚಾರಿ ಸಾವು
NAMMUR EXPRESS NEWS
ಉಡುಪಿ: ಕಳೆದ ಹೋದ ಚಿನ್ನದ ಸರವನ್ನು ವಾಪಾಸ್ ಕೊಟ್ಟು ಮಾನವೀಯತೆ ಮೆರೆದ ಬಸ್ ಚಾಲಕ ಹಾಗೂ ಕಂಡಕ್ಟರ್ ಒಳ್ಳೆತನಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜೂನ್ 20 ರಂದು ಬ್ರಹ್ಮಾವರದಿಂದ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಬಸ್ಸಿನಲ್ಲಿದ್ದ ಚಿನ್ನದ ಸರವನ್ನು ಕಳೆದುಕೊಂಡಿದ್ದು, ಅದನ್ನು ಬಸ್ ಕಂಡಕ್ಟರ್ ಮತ್ತು ಚಾಲಕರು ಕಂಡು ಮಾಲೀಕರಿಗೆ ಒಪ್ಪಿಸಿದ್ದಾರೆ.
ಬಾಲಕಿ ತನ್ನ ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ಬಸ್ಸಿನಲ್ಲಿ ತನ್ನ ಚಿನ್ನದ ಸರ ಕಳೆದುಕೊಂಡಿದ್ದಾಳೆ. ಪ್ರಯಾಣಿಕರೊಬ್ಬರಿಗೆ ಚಿನ್ನದ ಸರ ಪತ್ತೆಯಾಗಿದ್ದು, ಅದನ್ನು ಬಸ್ ಚಾಲಕನಿಗೆ ಹಸ್ತಾಂತರಿಸಿದ್ದು ಬಳಿಕ ಅದನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ.
ಬಸ್ ಏಜೆಂಟ್ ಗಿರೀಶ್ ಕುಂದಾಪುರ ಮಾತನಾಡಿ, “ಬಾಲಕಿ ಆತಂಕಗೊಂಡಿದ್ದು ಕಂಡು ನಾವು ಆಕೆಯನ್ನು ಸಂಪರ್ಕಿಸಿ ಸಮಸ್ಯೆಯ ಬಗ್ಗೆ ಕೇಳಿದೆವು. ಆರಂಭದಲ್ಲಿ ತಡಬಡಾಯಿಸಿದರೂ ನಂತರ ತಾನು ಪ್ರಯಾಣಿಸಿದ ಬಸ್ಸಿನಲ್ಲಿ ಚಿನ್ನದ ಸರ ಕಳೆದುಕೊಂಡೆ ಎಂದು ಹೇಳಿದ್ದಾಳೆ. ನಾನು ಬಸ್ ಟಿಕೆಟ್ ತೋರಿಸಲು ಕೇಳಿದೆ, ಮತ್ತು ನಾನು ಆ ಬಸ್ಸಿನ ಏಜೆಂಟ್ ಆಗಿದ್ದರಿಂದ ನಾನು ಎಪಿಎಂನ ಬಸ್ ಚಾಲಕನನ್ನು ಸಂಪರ್ಕಿಸಿದೆ. ಮಧ್ಯಾಹ್ನ ಮತ್ತೆ ಬಸ್ ಅದೇ ಮಾರ್ಗವಾಗಿ ಬಂದಾಗ, ಹುಡುಗಿಯ ಸಂಬಂಧಿಕರು ಚಿನ್ನದ ಸರವನ್ನು ಸಂಗ್ರಹಿಸಿದರು.
ಸುಳ್ಯ: ಕಾಂಪೌಂಡ್ಗೆ ಡಿಕ್ಕಿ ಹೊಡೆದ ಕಾರು: ಮೂವರಿಗೆ ಗಾಯ
ಸುಳ್ಯ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಮೀಪದಲ್ಲಿದ್ದ ವಿದ್ಯುತ್ ಕಂಬ ಮುರಿದಿದ್ದು, ಕಾಂಪೌಂಡ್ ಮತ್ತು ವಿದ್ಯುತ್ ಕಂಬಕ್ಕೆ ಹಾನಿಯಾಗಿ ಕಾರಿನಲ್ಲಿ ಪ್ರಯಾಣಿಸುತಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ಸಂಭವಿಸಿದೆ.
ಕುಂದಾಪುರದಿಂದ ಮಡಿಕೇರಿಗೆ ತೆರಳುತ್ತಿದ್ದು, ಕುಂದಾಪುರ ಮೂಲದ ಪ್ರಯಾಣಿಕರಿದ್ದ ಕಾರು ಕೋಡಿ ತಿರುವಿನಲ್ಲಿ ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ರವಿಪ್ರಕಾಶ್ ಬುಡ್ಡೆಗುತ್ತು ಅವರ ಕಾಂಪೌಂಡ್ ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಇದರ ಸಮೀಪವಿದ್ದ ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು ಎನ್ನಲಾಗಿದೆ.
ಕಾರಿನಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಕರಿದ್ದು, ಅವರನ್ನು ಸ್ಥಳೀಯರಾದ ಸುಣ್ಣಮೂಲೆಯ ಹಸನ್ ಗೌಸಿಯ ಮತ್ತಿತರರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ. ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ವಿದ್ಯುತ್ ಕಂಬ ದುರಸ್ತಿ ಪಡಿಸಿದರೆಂದು ತಿಳಿದುಬಂದಿದೆ.
– ಬಂಟ್ವಾಳ: ಖಾಸಗಿ ಬಸ್ ಗಳೆರಡು ಡಿಕ್ಕಿ ಪ್ರಯಾಣಿಕರಿಗೆ ಗಾಯ
ಬಂಟ್ವಾಳ: ಖಾಸಗಿ ಬಸ್ ಗಳೆರಡು ಡಿಕ್ಕಿಯಾಗಿ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯವಿಲ್ಲದೆ ಪಾರಾದ ಘಟನೆ ತುಂಬೆ ತಿರುವಿನಲ್ಲಿ ನಡೆದಿದೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಎರಡು ಖಾಸಗಿ ಬಸ್ ಗಳು ಪರಸ್ಪರ ಡಿಕ್ಕಿಯಾಗಿದೆ. ಮಂಗಳೂರಿನಿಂದ
ಉಪ್ಪಿನಂಗಡಿಗೆ ಹೋಗುವ ಅರಫಾ ಬಸ್ ಮಂಗಳೂರಿನಿಂದ
ಪುತ್ತೂರು ಕಡೆಗೆ ತೆರಳುತ್ತಿದ್ದ ಸೇಫ್ ವೇ ಬಸ್ ಗೆ
ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ತುಂಬೆ ಅಪಾಯಕಾರಿ ತಿರುವಿನಿಂದ ಸ್ವಲ್ಪ ದೂರದಲ್ಲಿ ಈ ಅಪಘಾತ ಸಂಭವಿಸಿದ್ದು, ಎರಡು ಬಸ್ ಗಳ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
– ಬಂಟ್ವಾಳ : ವ್ಯಕ್ತಿಯ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ
ಬಂಟ್ವಾಳ : ಬಕ್ರೀದ್ ದಿನ ಸಂಜೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಬಿ ಸಿ ರೋಡು ಸಮೀಪದ ತಲಪಾಡಿ-ಕೆಇಬಿ ಸಬ್ ಸ್ಟೇಷನ್ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಬಿ ಸಿ ರೋಡು ಸಮೀಪದ ಕೈಕಂಬ ನಿವಾಸಿ ಕರೀಂ (61) ಮೃತ ವ್ಯಕ್ತಿ. ಬಕ್ರೀದ್ ದಿನವಾದ ಸೋಮವಾರ ಸಂಜೆ ಮನೆಯಿಂದ ಹೊರಟ ಕರೀಂ ಅವರು ಬಳಿಕ ವಾಪಾಸು ಬಂದಿರಲಿಲ್ಲ. ಈ ಬಗ್ಗೆ ಮನೆ ಮಂದಿ ಸಹಿತ ಊರ ನಾಗರಿಕರು ಹುಡುಕಾಟ ನಡೆಸಿದ್ದರು. ಇವರ ಪತ್ತೆಗಾಗಿ ಸಾಮಾಜಿಕ ಜಾಲ ತಾಣಗಳಲ್ಲೂ ಭಾವಚಿತ್ರ ಸಹಿತ ವಿವರವಾದ ಮನವಿಯನ್ನೂ ಮಾಡಲಾಗಿತ್ತು. ಆದರೆ ಇವರ ಪತ್ತೆಯಾಗಿರಲಿಲ್ಲ. ನಂತರ ತಲಪಾಡಿ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಾನಸಿಕವಾಗಿ ಸ್ವಲ್ಪ ಖಿನ್ನತೆಯಿಂದ ಇದ್ದ ಇವರು ಅದೇ ಕಾರಣಕ್ಕಾಗಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
– ಕೋಟ: ಹೆದ್ದಾರಿ ಬದಿಯಲ್ಲಿ ಅನಾಥವಾಗಿ ನಿಂತಿದ್ದ ಲಾರಿ ತೆರವು
ಕೋಟ: ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಪೆಟ್ರೋಲ್ ಬಂಕ್ ಬಳಿ ಸುಮಾರು ಎರಡು ತಿಂಗಳಿಂದ ಗುಜರಾತ್ ನೊಂದಾವಣಿಯ ಲಾರಿ ಯೊಂದು ಅನಾಥವಾಗಿ ನಿಂತಿದ್ದು. ಅದನ್ನು ಕೊನೆಗೂ ಕೋಟ ಆರಕ್ಷಕರ ಹಾಗೂ ಸ್ಥಳೀಯ ಜೀವನ್ ಮಿತ್ರ ತಂಡದ ಪರಿಶ್ರಮದಿಂದ ಅಲ್ಲಿಂದ ತೆರವುಗೊಳಿಸಲಾಯಿತು. ಎರಡು ತಿಂಗಳಿಂದ ಅಪಘಾತಕ್ಕೆ ಎಡೆ ಮಾಡಿಕೊಡುತ್ತಿದ್ದ ಲಾರಿ ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿರ್ವಹಿಸುತ್ತಿರುವ ಟೋಲ್ನ ಪ್ರಸ್ತುತ ಕಂಪನಿ ಹಾಗೂ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಇದೀಗ ಕೋಟದ ಜೀವನ್ ಮಿತ್ರ ಬಳಗ ಹಾಗೂ ಮಾಧ್ಯಮ ಕಳಕಳಿಗೆ ಕೋಟ ಠಾಣಾಧಿಕಾರಿ ತೇಜಸ್ವಿ ಸ್ಥಳ ಪರಿಶೀಲಿಸಿ ತೆರೆವು ಕಾರ್ಯಕ್ಕೆ ಮುಂದಾದರು. ಲಾರಿ ತೆರವು ಕಾರ್ಯದಲ್ಲಿ ಕೋಟ ಠಾಣಾಧಿಕಾರಿ ತೇಜಸ್ವಿ, ಸಿಬ್ಬಂದಿ ಪ್ರಸನ್ನ ಕುಮಾರ್, ಸಮಾಜ ಸೇವಕ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್, ವಸಂತ ಸುವರ್ಣ, ಗೋಪಾಲ್, ಕಿಶನ್ ಭಟ್ ಇದ್ದರು.
– ಮಂಗಳೂರು: ಟೆಂಪೋ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು
ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಟೆಂಪೋ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಮಂಗಳೂರಿನ ಕುಚಿಕಾಡು ಎಂಬಲ್ಲಿ ನಡೆದಿದೆ. ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಬಿಕರ್ನಕಟ್ಟೆ ನಿವಾಸಿ ರಾಧಾಕೃಷ್ಣ ರಾವ್ (65) ಮೃತಪಟ್ಟರು. ಅವರು ಸಂಜೆ 5.45ರ ಸುಮಾರಿಗೆ ಕಲ್ಪನೆ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಚಿಕಾಡು ಎನ್ನುವಲ್ಲಿ ಟೆಂಪೋ ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ 7.45ರ ಸುಮಾರಿಗೆ ಮೃತಪಟ್ಟರು. ಮೆಸ್ಕಾಂ ಜೆಪ್ಪು ಶಾಖೆಯ ಕಿರಿಯ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಬಿಕರ್ನಕಟ್ಟೆಯ ಶ್ರೀ ಹರಿಹರ ಪಾಂಡುರಂಗ ವಿಠಲ ಭಜನ ಮಂದಿರದ ಅಧ್ಯಕ್ಷರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ ನಿವೃತ್ತ ಶಿಕ್ಷಕಿ ಗೌರಿ ರಾಧಾಕೃಷ್ಣ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.