ಟಾಪ್ ನ್ಯೂಸ್ ಕರಾವಳಿ
ಕದ್ರಿ ದೇವಸ್ಥಾನದ ಒಳಕ್ಕೆ ಬೈಕ್ ನುಗ್ಗಿಸಿ ಯುವಕನ ಗಲಾಟೆ!
– ಸ್ಥಳೀಯರಿಂದ ಧರ್ಮದೇಟು; ಮಾನಸಿಕ ಅಸ್ವಸ್ಥನೆಂದು ಕುಟುಂಬಸ್ಥರ ಹೇಳಿಕೆ
– ಕಾರ್ಕಳ: ಕ್ರೇನ್ ಅಡಿಗೆ ಸಿಲುಕಿ ಪಾದಚಾರಿ ಸಾವು
– ಉಡುಪಿ: ಟೆಂಪೋ ಚಾಲಕ ಆತ್ಮಹತ್ಯೆ
– ಕಾಸರಗೋಡು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಸಂದೇಶ: ಕಾಸರಗೋಡಿನಲ್ಲಿ ಇಬ್ಬರ ಬಂಧನ
– ಬಂಟ್ವಾಳ: ಬಾಲಕಿ ಲೈಂಗಿಕ ಕಿರುಕುಳದ ಆರೋಪ: ಟೈಲರ್ ಅರೆಸ್ಟ್
NAMMUR EXPRESS NEWS
ಮಂಗಳೂರು: ಯುವಕನೊಬ್ಬ ಕದ್ರಿ ಮಂಜುನಾಥ ದೇವಸ್ಥಾನದ ಒಳಗಡೆ ನುಗ್ಗಿ ಬೈಕ್ನ್ನು ನುಗ್ಗಿಸಿ ದಾಂಧಲೆ ನಡೆಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಕದ್ರಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮಂಗಳವಾರ ಬೆಳಗ್ಗೆ 7.20ರ ಸುಮಾರಿಗೆ ಈ ಘಟನೆ ನಡೆದಿದ್ದು, ಯುವಕನೊಬ್ಬ ತನ್ನ ಬೈಕ್ನ್ನು ಕದ್ರಿ ದೇವಸ್ಥಾನದ ಎದುರಿನ ಗೇಟ್ ತಳ್ಳಿಕೊಂಡು ಒಳಬಂದಿದ್ದಾನೆ. ಬಳಿಕ ದೇವಸ್ಥಾನದ ಮುಂದಿನ ದ್ವಾರದ ಮೂಲಕ ನೇರವಾಗಿ ಒಳಗಡೆ ನುಗ್ಗಿಸಿ ಗರ್ಭಗುಡಿ ಮುಂದೆ ನಿಲ್ಲಿಸಿದ್ದಾನೆ. ಅರ್ಚಕರು ಕೂಡಲೇ ಬಾಗಿಲು ಹಾಕಿದ್ದು, ಆತ ನೇರವಾಗಿ ಅಣ್ಣಪ್ಪನ ಗುಡಿಯ ಒಳಗೆ ಹೋಗಿ ಅಲ್ಲಿಂದ ಮೇಲಿನ ಮಹಡಿಗೆಹೋಗಿ ಹಂಚಿನ ಮಾಡಿನ ಮೂಲಕ ಬಂದಿದ್ದಾನೆ. ಆ ಬಳಿಕ ಎದುರು ಭಾಗದ ಚಪ್ಪರ ಮಾದರಿಯ ಮರದ ಹಲಗೆಯ ಮೇಲ್ಗಡೆ ನಿಂತು ಅದನ್ನು ಕೈಯಲ್ಲಿದ್ದ ಹರಿತ ಆಯುಧದಲ್ಲಿ ತಿವಿಯಲು ಮುಂದಾಗಿದ್ದಾನೆ.
ಅಷ್ಟರಲ್ಲಿ ಅಲ್ಲಿದ್ದ ಭಕ್ತರು, ಅರ್ಚಕರು ಬೊಬ್ಬೆ ಹಾಕಿದ್ದು, ಸೆಕ್ಯುರಿಟಿ ಗಾರ್ಡ್ ಎಲ್ಲ ಸೇರಿ ಹಗ್ಗದಲ್ಲಿ ಕಟ್ಟಿ ನೆಲಕ್ಕೆ ಇಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಯುವಕನನ್ನು ಉಳ್ಳಾಲ ಧರ್ಮನಗರ ನಿವಾಸಿ ಸುಧಾಕರ ಆಚಾರ್ಯ(31) ಎಂದು ಗುರುತಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಆತನ ತಾಯಿಯೂ ಠಾಣೆಗೆ ಬಂದಿದ್ದು, ಮಗನಿಗೆ ಮಾನಸಿಕ ಸಮಸ್ಯೆ ಇರುವುದಾಗಿ ಹೇಳಿದ್ದಾರೆ. ಈತ ಇದೇರೀತಿ ಹಿಂದೆಯೂ ಬೇರೆ-ಬೇರೆ ದೇವಸ್ಥಾನಗಳಿಗೆ ಹೋಗಿ ಇದೇ ರೀತಿಯ ವರ್ತನೆ ತೋರಿರುವುದಾಗಿ ತಿಳಿದು ಬಂದಿದೆ.
ಉಡುಪಿ: ಟೆಂಪೋ ಚಾಲಕ ಆತ್ಮಹತ್ಯೆ
ಉಡುಪಿ: ವೈಯಕ್ತಿಕ ಕಾರಣಗಳಿಂದ ಮನನೊಂದು ಉದ್ಯಾವರ ಬೋಳಾರ್ ಗುಡ್ಡೆಯ ಆಟೋ ಟೆಂಪೋ ಚಾಲಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹೇಶ್ ಪಾಲನ್(35) ಎಂಬವರು ಉದ್ಯಾವರ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಆತ್ಮಹತ್ಯೆಗೆ ಶರಣಾಗಿರುವ ಚಾಲಕ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಂಬುಲೆನ್ಸ್ ಚಾಲಕ ರಾಮದಾಸ್ ಪಾಲನ್ ಅವರ ಪುತ್ರರಾಗಿರುವ ಮಹೇಶ್, ಉದ್ಯಾವರ ಗುಡ್ಡೆಯಂಗಡಿಯಲ್ಲಿ ಟೆಂಪೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಬಿಲ್ಲವ ಮಹಾಜನ ಸಂಘ, ಉದ್ಯಾವರ ಯುವಕ ಮಂಡಲ ಮತ್ತು ಗುಡ್ಡೆಯಂಗಡಿ ಫ್ರೆಂಡ್ಸ್ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಸಂದೇಶ: ಕಾಸರಗೋಡಿನಲ್ಲಿ ಇಬ್ಬರ ಬಂಧನ
ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶ ಹಬ್ಬಿಸಿರುವ ಆರೋಪದಡಿ ಇಬ್ಬರನ್ನು ಕಾಸರಗೋಡು ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡಿನ ಅಜೇಶ್(27) ಮತ್ತು ಕುಂಬಳೆಯ ಅಬೂ ಬಕ್ಕರ್ ಸಿದ್ದೀಕ್ (24) ಬಂಧಿತರು. ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ಅಜೇಶ್ ಈ ಹಿಂದೆ ಸೂರ್ಲುವಿನಲ್ಲಿ ಮದರಸ ಅಧ್ಯಾಪಕ ರಿಯಾಝ್ ಮೌಲವಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯದಿಂದ ಖುಲಾಸೆಗೊಳಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಕಳುಹಿಸುತ್ತಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕೊನೆಗೆ ಈ ಪ್ರಕರಣದ ಮೂಲವನ್ನು ಪತ್ತೆ ಮಾಡುತ್ತಾ ಹೋದಾಗ ಈ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ಅಜೀಶ್ ಹಾಗೂ ಅಬೂಬಕ್ಕರ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬಾಲಕಿ ಮೇಲೆ ಲೈಂಗಿಕ ಕಿರುಕುಳದ ಆರೋಪ: ಟೈಲರ್ ಅರೆಸ್ಟ್!
ಬಂಟ್ವಾಳ ಸಮೀಪ ಅಂಗಡಿಗೆ ತೆರಳಿದ್ದ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಡಿ ಟೈಲರ್ ಒಬ್ಬರನ್ನು ಬಂಟ್ವಾಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಬ್ರಹ್ಮರಕೂಟ್ಲು ನಿವಾಸಿಯಾಗಿರುವ ಧರ್ಮರಾಜ್(40) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಟೈಲರ್ ಆಗಿರುವ ಈತ ತನ್ನ ಟೈಲರ್ ಶಾಪ್ನಲ್ಲೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದಲ್ಲಿ ಈ ಘಟನೆ ಜು.8ರಂದು ಈ ಘಟನೆ ನಡೆದಿದ್ದು, ಈತನ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆ ದಿನ ಅಂಗಡಿಗೆ ತೆರಳಿದ್ದ ಬಾಲಕಿಯನ್ನು ಪುಸಲಾಯಿಸಿದ ಟೈಲರ್ ನಿನಗೆ ಹೊಸ ಇಸ್ತ್ರಿ ಪೆಟ್ಟಿಗೆ ತೋರಿಸುತ್ತೇನೆ ಎಂದು ಒಳಗೆ ಬಾ ಎಂದು ತನ್ನ ಅಂಗಡಿಯೊಳಗೆ ಕರೆದು ಲೈಂಗಿಕ ಕೃತ್ಯ ಎಸಗಿದ್ದಾನೆ. ಬಳಿಕ ಮನೆಗೆ ತೆರಳಿದ ಬಾಲಕಿ ಪೋಷಕರಿಗೆ ಈ ವಿಷಯವನ್ನು ತಿಳಿಸಿದ್ದಾಳೆ. ಪೋಷಕರು, ಧರ್ಮನ ವಿರುದ್ಧ ಪೊಲೀಸರು ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಕ್ರೇನ್ ಅಡಿಗೆ ಸಿಲುಕಿ ಪಾದಚಾರಿ ಸಾವು
ಕಾರ್ಕಳ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರು ಕ್ರೇನ್ ಡಿಕ್ಕಿ ಹೊಡೆದ ಪರಿಣಾಮವಾಗಿ ಘಟನಾ ಸ್ಥಳದಲ್ಲಿ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ದುರ್ಗಾ ಗ್ಯಾರೇಜ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಜಲದುರ್ಗ ನಗರದ ನಿವಾಸಿ ಅಂಗಾರ(70) ಮೃತಪಟ್ಟ ದುರ್ದೈವಿ. ಮಂಗಳವಾರ ಬೆಳಗ್ಗೆ ಜೋಡುಕಟ್ಟೆಯಿಂದ ಅಯ್ಯಪ್ಪನಗರದ ಕಡೆಗೆ ಅಂಗಾರ ಅವರು ರಸ್ತೆಯ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅದೇರಸ್ತೆಯಲ್ಲಿ ಸಾಗುತ್ತಿದ್ದ ಕ್ರೇನ್ ಅಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕ್ರೇನ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಕ್ರೇನ್ ಕುಕ್ಕುಂದೂರು ಅಯ್ಯಪ್ಪ ನಗರದ ಕಲ್ಲುಕೋರೆಯ ಮಾಲೀಕರಾದ ಸದಾನಂದ ಎಂಬವರಿಗೆ ಸೇರಿದ್ದು ಎಂಬ ಮಾಹಿತಿ ತಿಳಿದು ಬಂದಿದೆ. ಚಾಲಕನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.