ಟಾಪ್ ನ್ಯೂಸ್ ಕರಾವಳಿ
– ಮೃತದೇಹ ಕೊಂಡೊಯ್ಯಲು ಹಣವಿಲ್ಲದ ಕುಟುಂಬಕ್ಕೆ ನೆರವಾದ ಸ್ಪೀಕರ್!
– ತವರೂರಿಗೆ ಹೆಣ ಸಾಗಿಸಲು ಹಣವಿಲ್ಲದೆ ಪರದಾಟ
– ಮಂಗಳೂರಿನ 2 ಕಡೆ ಕಳ್ಳತನ:6 ಮಂದಿ ಆರೋಪಿಗಳ ಬಂಧನ
– ಉಡುಪಿ: ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಜಟಾಪಟಿ
NAMMUR EXPRESS NEWS
ಕಾರವಾರ: ಕಾರವಾರ ಮೂಲದ ಮಹಿಳೆಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತದೇಹವನ್ನು ತವರೂರಿಗೆ ಸಾಗಿಸಲು ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ವಿಧಾನಸಭಾಧ್ಯಕ್ಷ ಯುಟಿ ಖಾದರ್ ನೆರವಾಗಿದ್ದಾರೆ.
ಅಸೈಗೋಳಿಯ ಕೆಎಸ್ಆರ್ಪಿಯಲ್ಲಿ ಕ್ಲೀನಿಂಗ್ ಕಾರ್ಯ ನಿರ್ವಹಿಸುತ್ತಿದ್ದ ಕಾರವಾರ ಮೂಲದ ವಿದ್ಯಾ ವಿಕ್ರಮ್ ಅಂಬಿಗ್(33) ಎಂಬವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮೃತದೇಹವನ್ನು ಊರಿಗೆ ಸಾಗಿಸಲು ಕಷ್ಟಪಟ್ಟು ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬದ ವಿಚಾರವನ್ನು ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಝರ್ ಷಾ ಅವರು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರಲ್ಲಿ ತಿಳಿಸಿದ್ದರು. ತಕ್ಷಣ ಸ್ಪಂದಿಸಿದ ಸಭಾಧ್ಯಕ್ಷ ಯುಟಿ ಖಾದರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವರು ಕಟ್ಟಿದ್ದ ಹಣವನ್ನು ವಾಪಾಸ್ ಸಿಗುವಂತೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಕಾರವಾರಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಮೂಲಕ ಸಹಕರಿಸಿದ್ದಾರೆ.
ಮೃತರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮೃತ ಮಹಿಳೆಯ ಕುಟುಂಬದ ಅತಂತ್ರ ಸ್ಥಿತಿಯ ಬಗ್ಗೆ ಯುಟಿ ಖಾದರ್ ಅವರಲ್ಲಿ ತಿಳಿಸಿದ್ದೆ. ಕೂಡಲೇ ಅವರು ಸ್ಪಂದಿಸಿ ಮೃತ ಕುಟುಂಬಕ್ಕೆ ನೆರವಾಗಿದ್ದಾರೆ ಎಂದು ನಝರ್ ಷಾ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನ 2 ಕಡೆ ಕಳ್ಳತನ:6 ಮಂದಿ ಆರೋಪಿಗಳ ಬಂಧನ!
ಮಂಗಳೂರಿನ ಪಂಪ್ವೆಲ್ನಲ್ಲಿ ಅಂಗಡಿ ಕಳವು, ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಮೂರು ಮನೆಗಳಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ನಗರದ ಕಂಕನಾಡಿ ಠಾಣಾ ವ್ಯಾಪ್ತಿಯ ಪಂಪ್ವೆಲ್ ಕಪಿತಾನಿಯೋ ಸಮೀಪದ ಅಂಗಡಿಯಲ್ಲಿ ಜು.8ರಂದು 10ಲಕ್ಷ ರೂ. ಕಳವು ಮಾಡಿದ್ದ ಉತ್ತರ ಪ್ರದೇಶದ ಮಹಮ್ಮದ್ ನಜೀರ್ ಹೌಸಿಲ್ ಖಾನ್(27) ಹಾಗೂ ಇಲಿಯಾಸ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 10ಲಕ್ಷರೂ. ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದೇರೀತಿ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಕಳ್ಳತನ ಪ್ರಕರಣಗಳ ಆರೋಪಿಗಳಾದ ಮಹಮ್ಮದ್ ಸಿಯಾಬ್, ಮಹಮ್ಮದ್ ಅರ್ಪಾಜ್, ಸಪ್ವಾನ್, ಮೊಹಮ್ಮದ್ ಜಂಶೀರ್ನನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಚಿನ್ನಾಭರಣ ಸೇರಿದಂತೆ 12.50ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಉಡುಪಿ: ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಜಟಾಪಟಿ
ಸಭೆ ನಡೆಸುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ಉಂಟಾಗಿರುವ ಘಟನೆ ಉಡುಪಿಯ ತೆಂಕನಿಡಿಯೂರು ಗ್ರಾಮ ಪಂಚಾಯತ್ನಲ್ಲಿ ಶುಕ್ರವಾರ ನಡೆದಿದೆ.ಸುಮಾರು 50 ಲೋಡ್ನಷ್ಟು ಕಸವನ್ನು ಹೂತು ಹಾಕುವ ಕಾರಣದಿಂದಾಗಿ ಬಾವಿಯ ನೀರು ಕಲುಷಿತಗೊಳ್ಳುತ್ತಿದೆ. ಹೀಗಾಗಿ, ಕೂಡಲೇ ಈ ಕಸವನ್ನು ಹೊರತೆಗೆಯಬೇಕು ಎಂದು ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷೆ ಶೋಭಾ ನಾಯ್ಕ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಸಮಸ್ಯೆ ವಿಚಾರವಾಗಿ ಪಂಚಾಯತ್ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಬಿಜೆಪಿ ಸದಸ್ಯರು ಸಭೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಕೋರಂ ಇಲ್ಲದ ಕಾರಣ ಸಭೆ ನಡೆಸಬಾರದೆಂದು ವಿರೋಧ ವ್ಯಕ್ತಪಡಿಸಿದ್ದಾರೆ. ಮೂವರು ಸದಸ್ಯರು ಗೈರಾಗಿದ್ದು ಸಭೆ ನಡೆಸಲು ಬಿಡದೆ ಬಿಜೆಪಿ ಸದಸ್ಯರು ಸಭೆಯ ಬಾವಿಗಿಳಿದಿ ಪ್ರತಿಭಟಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯರು ಬಿಜೆಪಿಯವರನ್ನು ಬಲವಂತವಾಗಿ ಸಭೆಯಿಂದ ಹೊರ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಒ ಹಾಗೂ ಪೊಲೀಸರ ಮುಂದೆಯೇ ಸದಸ್ಯರು ಎಳೆದಾಡಿಕೊಂಡು ಜಗಳ ಮಾಡಿದ್ದಾರೆ. ಈ ಗಲಾಟೆಯಲ್ಲಿ ಮಹಿಳಾ ಸದಸ್ಯೆಯೊಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ಬಗ್ಗೆ ಕಾಂಗ್ರೆಸ್ ಸದಸ್ಯರು ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.